ಸೋಮವಾರ, ಸೆಪ್ಟೆಂಬರ್ 5, 2022

ಬಣಕಲ್ ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರ

ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಕೊಟ್ಟಿಗೆಹಾರ:ಆರೋಗ್ಯಕರ ಸಮಾಜ ನಿರ್ಮಾಣ ಮಾಡುವುದರಲ್ಲಿ ಶಿಕ್ಷಕರ ಪಾತ್ರ ಅಪಾರವಾದದ್ದು ಎಂದು ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯ ನಿರ್ದೇಶಕರು ಇಮ್ರಾನ್ ಹೇಳಿದರು.

ಬಣಕಲ್ ರಿವರ್ ವ್ಯೂ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತೀಯ ತತ್ವಶಾಸ್ತ್ರಜ್ಞರು ಮತ್ತು ರಾಷ್ಟ್ರದ ಎರಡನೇ ರಾಷ್ಟ್ರಪತಿಯೂ ಆದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನದ ಸ್ಮರಣೆಯಲ್ಲಿ ಆಚರಿಸುವ ಶಿಕ್ಷಕರ ದಿನಾಚರಣೆ ಶಿಕ್ಷಕರ ಮಹತ್ವವನ್ನು ಎಲ್ಲೆಡೆ ಸಾರಲು ಪ್ರೇರಣೆಯಾಗಿದೆ. ಪ್ರಜ್ಞಾವಂತ ನಾಗರಿಕರನ್ನು ಸಮಾಜ ನೀಡುವ ಶಿಕ್ಷಕರ ಕೊಡುಗೆಯನ್ನು ಸ್ಮರಿಸುವ ಅಗತ್ಯವಿದೆ ಎಂದರು.
 ಶಿಕ್ಷಕರ ದಿನಾಚರಣೆ ಅಂಗವಾಗಿ  ವಿದ್ಯಾರ್ಥಿಗಳಿಂದ  ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಕ್ಕಳೇ ಶಿಕ್ಷಕರಿಗೆ ಮಕ್ಕಳಿಂದ ವಿವಿಧ ಕ್ರೀಡಾ ಸ್ಪರ್ಧೆ ಗಳನ್ನು ಆಯೋಜಿಸಿದ್ದರು. 
ವಿಜೇತರಾದ ಶಿಕ್ಷಕರಿಗೆ ಮಕ್ಕಳು ಉಡುಗೊರೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ರಾಧಾ ಕಾರ್ಯಪ್ಪ, ಸಹಶಿಕ್ಷಕರು,ವಿದ್ಯಾರ್ಥಿಗಳು ಇದ್ದರು.

ಗುರುವಾರ, ಜುಲೈ 21, 2022

ಚಿಕಿತ್ಸೆಗೆ ನೆರವಿನ ನಿರೀಕ್ಷೆಯಲ್ಲಿ ಸಮಾಜ ಸೇವಕ

ಕೊಟ್ಟಿಗೆಹಾರ:ನಿಡುವಾಳೆ ಸಮೀಪದ ಕಲ್ಮನೆಯ ಸಮಜ ಸೇವಕರಾದ ಎಚ್.ಮಂಜುನಾಥ್ ಅವರು ಹೃದಯ ರಕ್ತನಾಳದ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆಗೆ ದಾನಿಗಳಿಂದ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಸಮಾಜ ಸೇವಕರಾದ ಎಚ್.ಮಂಜುನಾಥ್ ಅವರಿಗೆ ೨೦೨೧ ರ ಡಿಸೆಂಬರ್ ೨೪ ರಂದು ಎದೆನೋವು ಕಾಣಿಸಿಕೊಂಡಿದ್ದು ಚಿಕ್ಕಮಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಜೂನ್ ತಿಂಗಳಲ್ಲಿ ಮತ್ತೆ ಎದೆ ನೋವು ಕಾಣಿಸಿಕೊಂಡಿದ್ದು ಸುರತ್ಕಲ್ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿನ ವೈದ್ಯರು ವಿವಿಧ ಔಷಧಿಗಳನ್ನು ನೀಡಿದ್ದು ರಕ್ಷ ಪರೀಕ್ಷೆ ಮುಂತಾದ ಪರೀಕ್ಷೆಗಳನ್ನು ಮಾಡಿದ್ದಾರೆ. ಹೃದಯದ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿರುವುದಾಗಿ ತಿಳಿಸಿದ್ದಾರೆ. ಚಿಕಿತ್ಸೆಯ ಭಾಗವಾಗಿ ವಿವಿಧ ರೀತಿಯ ಪರೀಕ್ಷೆ ಹಾಗೂ ಔಷಧಿಗಳನ್ನು ತೆಗೆದುಕೊಳ್ಳಬೇಕಾಗಿದ್ದು ಇದಕ್ಕೆ ಲಕ್ಷಾಂತರ ರೂ ಹಣದ ಅಗತ್ಯವಿದೆ.
ಮಂಜುನಾಥ್ ಅವರಿಗೆ ಇಬ್ಬರು ಮಕ್ಕಳಿದ್ದು ಮಗ ೮ ನೇ ತರಗತಿ ಹಾಗೂ ಮಗಳು ೧೦ ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.  ಮಂಜುನಾಥ್ ಅವರ ಪತ್ನಿ ಕಲ್ಮನೆಯ ಅಂಗನವಾಡಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಕಡು ಕಷ್ಟದಲ್ಲಿರುವ ಮಂಜುನಾಥ್ ಅವರ ಚಿಕಿತ್ಸೆಗೆ ನೆರವಿನ ಅಗತ್ಯವಿದ್ದು ಮಂಜುನಾಥ್ ಅವರ ಚಿಕಿತ್ಸೆಗೆ ನೆರವು ನೀಡುವವರು ಮಂಜುನಾಥ್ ಅವರ ಕೆನರಾ ಬ್ಯಾಂಕಿನ ಮೂಡಿಗೆರೆ ಶಾಖೆಯ ಖಾತೆ ಸಂಖ್ಯೆ:೧೧೬೨೧೦೧೦೦೫೭೫೨. ಐಎಪ್‌ಎಸ್‌ಸಿ ಸಂಖ್ಯೆ ಸಿಎನ್‌ಆರ್‌ಬಿ೦೦೦೧೧೪೨ ಹಣ ಸಂದಾಯ ಮಾಡಬಹುದು. ಮಂಜುನಾಥ್ ಅವರ ಮೊಬೈಲ್ ಸಂಖ್ಯೆ:೯೬೦೬೬೯೮೯೫೮.

ಸ್ಥಳೀಯತೆಯಿಂದ ವಿಶ್ವಮಾತ್ಮಕ ನೆಲೆಗೆ ಸಾಗಿದ ತೇಜಸ್ವಿ ಸಾಹಿತ್ಯ

ಅಜ್ಜಂಪುರ:ತೇಜಸ್ವಿ ಅವರು ಸ್ಥಳೀಯತೆಯಿಂದ ವಿಶ್ವಮಾತ್ಮಕ ನೆಲೆಗೆ ತಮ್ಮ ಸಾಹಿತ್ಯವನ್ನು ಕೊಂಡೊಯ್ದವರು ಎಂದು ಉಪನ್ಯಾಸಕ ಡಾ.ಎಚ್.ಎಸ್.ಸತ್ಯನಾರಾಯಣ ಹೇಳಿದರು.

ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಚಿಕ್ಕಮಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ಅಜ್ಜಂಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ನಡೆದ ಅಜ್ಜಂಪುರದಲ್ಲಿ ನಡೆದ ತೇಜಸ್ವಿ ಸಾಹಿತ್ಯ ಯಾನ ಯುವ ಸ್ಪಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಳೆದ ೨೫ ವರ್ಷಗಳ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ತೇಜಸ್ವಿಯವರು ದೊಡ್ಡ ಆಕರ್ಷನೆಯ ಶಕ್ತಿಯಾಗಿ ಸೂಜಿಗಲ್ಲಿನ ಹಾಗೇ ಓದುಗರನ್ನು ಆಕರ್ಷಿಸಿದ್ದಾರೆ. ಹಾಗೆಯೇ ಯುವ ತಲೆಮಾರನ್ನು ಪ್ರಭಾವಿಸಿದ್ದಾರೆ. ತೇಜಸ್ವಿ ಸಾಹಿತ್ಯ ಪ್ರಭಾವದಿಂದಾಗಿ ಹೊಸ ಓದುಗ ವರ್ಗ ಸೃಷ್ಟಿಯಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕರಾದ ಡಾ.ಸಿ.ರಮೇಶ್ ಮಾತನಾಡಿ, ತೇಜಸ್ವಿ ಅವರ ಬದುಕು ಬರಹ ಚಿಂತನೆಗಳನ್ನು ಯುವಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಓದಿನ ಅಭಿರುಚಿಯನ್ನು ಮೂಡಿಸಲು ತೇಜಸ್ವಿ ಸಾಹಿತ್ಯ ಯಾನ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ರಾಜಣ್ಣ ಕೆ ಮಾತನಾಡಿ, ಯುವಪೀಳಿಗೆ ಸಾಹಿತ್ಯದತ್ತ ಮುಖ ಮಾಡಲು ಇಂತಹ ಕಾರ್ಯಕ್ರಮಗಳು ಪ್ರೇರಣೆಯಾಗಿವೆ. ಕನ್ನಡ ಸಾಹಿತ್ಯದ ಸಮೃದ್ದತೆಯ ಅರಿವನ್ನು ಯುವ ಪೀಳಿಗೆಯಲ್ಲಿ ಮೂಡಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಅಜ್ಜಂಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಮಹಾಲಿಂಗಪ್ಪ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಆನಂದ ಆರ್, ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಾರದ ಡಾ.ಆನಂದ ಎನ್.ಎಲ್,  ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ನಂದನ್ ಕುಪ್ಪಳ್ಳಿ, ಕಾರ್ಯಕ್ರಮ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್, ಯುವ ಸಾಹಿತಿಗಳಾದ ಪೃಥ್ವಿ ಸೂರಿ, ದರ್ಶನ್, ಹಾಗೂ ಕಾಲೇಜಿನ ಉಪನ್ಯಾಸಕ ವರ್ಗ, ವಿದ್ಯಾರ್ಥಿಗಳು ಇದ್ದರು.

ಮಂಗಳವಾರ, ಜೂನ್ 21, 2022

ದ್ವಿತೀಯ ಪಿಯುಸಿ ಪರೀಕ್ಷೆ: 97.33% ಅಂಕ ಪಡೆದ ಯಜ್ಞ ಡಿ.ಜೆ

97.33% ಅಂಕ ಪಡೆದ ಯಜ್ಞ ಡಿ.ಜೆ

ಕೊಟ್ಟಿಗೆಹಾರ:ದೇವನಗೂಲ್ ಗ್ರಾಮದ ಯಜ್ಞ ಡಿ.ಜೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 584 (97.33%) ಅಂಕ ಪಡೆದಿದ್ದಾರೆ.
ಮಂಗಳೂರಿನ ದೇವಿನಗರ ತಾಲಾಪಾಡಿಯ ಶಾರದಾ ವಿದ್ಯಾ ನಿಕೇತನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯಜ್ಞ ಡಿ.ಜೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 584 ಅಂಕ ಪಡೆಯುವ ಮೂಲಕ ಕಾಲೇಜಿಗೆ ೫ನೇ ಸ್ಥಾನ ಪಡೆದಿದ್ದಾರೆ. ಯಜ್ಞ ಡಿ.ಜೆ, ಕೊಟ್ಟಿಗೆಹಾರ ಸಮೀಪದ ದೇವನಗೂಲ್ ಗ್ರಾಮದ ಎಚ್.ಎಚ್.ಮಧುರ ಮತ್ತು ಡಿ.ಕೆ ಜಯಂತ್ ದಂಪತಿಗಳ ಪುತ್ರಿ.


ಭಾನುವಾರ, ಜೂನ್ 19, 2022

ಬಣಕಲ್‌ನಲ್ಲಿ ಹುತಾತ್ಮ ಯೋಧ ನಾಯಕ್ ಗಣೇಶ್ ಅವರಿಗೆ ಶ್ರದ್ದಾಂಜಲಿ

ಬಣಕಲ್:ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರ ತ್ಯಾಗ ಬಲಿದಾನವನ್ನು ಸ್ಮರಿಸೋಣ  ಎಂದು ನಿವೃತ್ತ ಯೋಧರಾದ ದಿನೇಶ್ ಹೇಳಿದರು.
ಬಣಕಲ್‌ನ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘ ಹಾಗೂ ಶ್ರಮಜೀವಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘ ಮತ್ತು ಸಾರ್ವಜನಿಕರ ವತಿಯಿಂದ ಬಣಕಲ್‌ನಲ್ಲಿ ನಡೆದ ಹುತಾತ್ಮ ಯೋಧ ನಾಯಕ್ ಗಣೇಶ್ ಅವರಿಗೆ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹುತಾತ್ಮ ಯೋಧ ನಾಯಕ್ ಗಣೇಶ್ ಅವರ ತ್ಯಾಗ ಬಲಿದಾನವನ್ನು ಸ್ಮರಿಸೋಣ. ಅವರ ಕುಟುಂಬಕ್ಕೆ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ಕರುಣಿಸಲಿ. ದೇಶದ ಗಡಿಯಲ್ಲಿ ಹಗಲಿರುಳೆನ್ನದೇ, ಬಿಸಿಲು ಮಳೆ ಎನ್ನದೇ ಗಡಿ ಕಾಯುವ ಸೈನಿಕರ ಕಾರಣದಿಂದ ಸಮಾಜ ಆತಂಕವಿಲ್ಲದೇ ಬದುಕುವಂತಾಗಿದೆ. ಕುಟುಂಬ, ಸಂಸಾರವನ್ನು ಬಿಟ್ಟು ಯುದ್ದದಲ್ಲಿ ಹೋರಾಡಿ ಮಡಿವ ಯೋಧರ ತ್ಯಾಗ ಬಲಿದಾನವನ್ನು ಸ್ಮರಿಸೋಣ ಎಂದರು.
ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಅಧ್ಯಕ್ಷ ರಾಮಚಂದ್ರ ಮಾತನಾಡಿ, ಹುತಾತ್ಮ ಯೋಧ ನಾಯಕ್ ಗಣೇಶ್ ಅವರ ಅಂತ್ಯಸAಸ್ಕಾರದ ದಿನ ಮೃತದೇಹ ಸಾಗಿದ ಮಾರ್ಗದ ಉದ್ದಕ್ಕೂ ಸಾವಿರಾರು ಜನ ರಸ್ತೆ ಇಬ್ಬದಿಯಲ್ಲಿ ನಿಂತು ಮೃತ ಯೋಧನ ಅಂತಿಮ ದರ್ಶನ ಪಡೆದರು. ಅಂತ್ಯ ಸಂಸ್ಕಾರದಲ್ಲಿ ಸಾವಿರಾರು ಜನ ನೆರೆದಿದ್ದರು. ಇದು ಸಮಾಜದಲ್ಲಿ ಸೈನಿಕರಿಗೆ ಅಪಾರವಾದ ಗೌರವವಿರುವುದರ ಸಂಕೇತವಾಗಿದೆ ಎಂದರು.
ಶ್ರಮಜೀವಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಅಧ್ಯಕ್ಷ ರೋನಾಲ್ಡ್ ಡಿಸೋಜಾ ಮಾತನಾಡಿ ಸೈನ್ಯದಲ್ಲಿ ಸೇವೆ ಸಲ್ಲಿಸುವುದು ದೇಶ ಸೇವೆ ಮಾಡಲು ಇರುವ ಅವಕಾಶವಾಗಿದೆ. ದೇಶ ಸೇಔಎ ಮಾಡುವ ಪವಿತ್ರ ಕೆಲಸ ಕೆಲವರಿಗೆ ಮಾತ್ರ ಸಿಗುತ್ತದೆ. ನಮ್ಮ ದೇಶದಲ್ಲಿ ಯೋಧ ಮತ್ತು ರೈತರನ್ನು ಅತ್ಯಂತ ಗೌರವ ಮತ್ತು ಅಭಿಮಾನದಿಂದ ಕಾಣಲಾಗುತ್ತದೆ ಎಂದರು.
ಹುತಾತ್ಮ ಯೋಧ ನಾಯಕ್ ಗಣೇಶ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೇಣದಬತ್ತಿ ಬೆಳಗಲಾಯಿತು. ಮೌನಾಚರಣೆ ಮಾಡುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಸಂಘಟನಾ ಕಾರ್ಯದರ್ಶಿ ಶರತ್, ನಿದೇರ್ಶಕರಾದ ಮಂಜುನಾಥ್, ಶ್ರಮಜೀವಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಫಯಾಜ್, ಖಜಾಂಚಿ ಸಲಾಂ, ಸದಸ್ಯರಾದ ಬಾಬು, ಪ್ರವೀಣ್, ರವಿ, ಸುಮನ್, ರವೀಂದ್ರ, ಮಧು ಗ್ರಾಮಸ್ಥರಾದ ಯತೀಶ್ ಕೂಡಹಳ್ಳಿ, ಅಣ್ಣಪ್ಪಣ್ಣ, ಮಂಜಯ್ಯ, ಚಂದ್ರಯ್ಯ ಮುಂತಾದವರು ಇದ್ದರು.

ಶನಿವಾರ, ಮೇ 21, 2022

ಡೆಂಗ್ಯೂ ಜ್ವರ:ಜಾಗೃತೆ ವಹಿಸಿದರೆ ರೋಗ ತಡೆ ಸಾಧ್ಯ

ಕೊಟ್ಟಿಗೆಹಾರ:ಮುಂಜಾಗೃತೆ ವಹಿಸುವುದರಿಂದ ಡೆಂಗ್ಯೂ ಜ್ವರ ಬಾರದಂತೆ ತಡೆಯಲು ಸಾಧ್ಯವಾಗುತ್ತದೆ ಎಂದು ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷ ಅಧಿಕಾರಿ ಶಾಂತ ಹೇಳಿದರು.
ಕಪುಚಿನ್ ಕೃಷಿಕ ಸೇವಾ ಕೇಂದ್ರ, ವಿಮುಕ್ತಿ  ಸ್ವಸಹಾಯ ಸಂಘಗಳ ಒಕ್ಕೂಟ ಬಣಕಲ್ ವತಿಯಿಂದ ಬಣಕಲ್‌ನಲ್ಲಿ ನಡೆದ ಡೆಂಗ್ಯೂ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೋಗ ಬಂದ ಮೇಲೆ ಜಾಗೃತರಾಗುವುದಕ್ಕಿಂತ ಪೂರ್ವದಲ್ಲಿ ಅದು ಅಂಟಿಕೊಳ್ಳದAತೆ ಎಚ್ಚರಿಕೆ ವಹಿಸುವುದು ಅತ್ಯಂತ ಮುಖ್ಯ. ಸೊಳ್ಳೆಕಡಿತದಿಂದ ಪಾರಾಗಲು ಸೊಳ್ಳೆ ಪರದೆಗಳನ್ನು ಉಪಯೋಗಿಸುವುದು, ಸಿಮೆಂಟ್ ತೊಟ್ಟಿ, ಹಲವಾರು ದಿನಗಳಿಂದ ನೀರಿನಿಂದ  ತುಂಬಿರುವ ಹೂಕುಂಡಗಳಲ್ಲಿನ, ಪ್ಲಾಸ್ಟಿಕ್ ಸೇರಿದಂತೆ ನೀರು ನಿಲ್ಲುವ ವಸ್ತುಗಳನ್ನು ಆಗಾಗ ಸ್ವಚ್ಚಗೊಳಿಸುವುದರಿಂದ ಸೊಳ್ಳೆಯ ಸಂತಾನೋತ್ಪತ್ತಿ ನಿಂತಾAತಾಗಿ ರೋಗ ಹರಡುವುದು ಕಡಿಮೆಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತರಾದ ಸುನೀತ, ಸ್ನೇಯಪ್ರಿಯ, ನಂಬ್ರಿನ್, ವಿಮುಕ್ತಿ ಬಣಕಲ್‌ನ ನಿರ್ದೇಶಕರಾದ ಫಾದರ್ ವಿನ್ಸೆಂಟ್ ಡಿ ಸೋಜಾ, ಕಾರ್ಯಕರ್ತೆ ವಿಂದ್ಯಾ, ಒಕ್ಕೂಟದ ಅಧ್ಯಕ್ಷರಾದ ಯಶೋಧ, ಕಾರ್ಯದರ್ಶಿ ಸಾವಿತ್ರಿ, ಖಜಾಂಚಿ ಸಾವಿತ್ರಿ, ಮಾಜಿ ಅಧ್ಯಕ್ಷೆ ರಾಜಮ್ಮ, ಸದಸ್ಯರಾದ ಪ್ರಮೋದಿನಿ, ನೇತ್ರ, ಲಲಿತ, ಪವಿತ್ರ, ಮಂಜುಳಾ, ಬೇಬಿ, ಶಾಲಿನಿ, ಸುನಿತ, ಗೌರಮ್ಮ ಮುಂತಾದವರು ಇದ್ದರು.

ಗುರುವಾರ, ಮೇ 19, 2022

ಮೇ.23 ರಂದು ಮೂಡಿಗೆರೆಯಲ್ಲಿ ಸರಳ ಸಾಮೂಹಿಕ ವಿವಾಹ

ಆಶ್ರಯ ಸಾಮಾಜಿಕ ಸೇವಾ ಸಂಸ್ಥೆ, ಮಿತ್ರ ಜಾನಪದ ಕಲಾ ಸಂಘ, ಸಂಚಿ ಹೊನ್ನಮ್ಮ ಮಹಿಳಾ ಮಂಡಳಿ ಮತ್ತು ಪೂರ್ಣ ಚಂದ್ರ ತೇಜಸ್ವಿ ಜಾನಪದ ಕಲಾ ಸಂಘದ ಸಂಯುಕ್ತಾಶ್ರಯದಲ್ಲಿ ಮೇ.23ರಂದು ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನೋತ್ಸವದ ಅಂಗವಾಗಿ ಸರಳ ಸಾಮೂಹಿಕ ವಿವಾಹ ಮತ್ತು ಮಲೆನಾಡ ಜಾನಪದ ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು. 
ಅವರು ಸೋಮವಾರ ಪಟ್ಟಣದಲ್ಲಿ ಮದುವೆಯಾಗುವ 10 ಜೋಡಿ ವದೂವರರಿಗೆ ವಸ್ತ್ರ ವಿತರಿಸಿ ಮಾತನಾಡಿದರು. ಸರಳ ಸಾಮೂಹಿಕ ವಿವಾಹ ಕಳೆದ 20 ವರ್ಷದಿಂದ ನಡೆಸಿಕೊಂಡು ಬರಲಾಗುತ್ತಿದ್ದು,  ಕೋವಿಡ್ ಸಂದರ್ಭದಲ್ಲಿ ಸಾಧ್ಯವಾಗಿರಲಿಲ್ಲ. ಸಾರ್ವಜನಿಕರ ಒತ್ತಾಯದ ಮೇರೆಗೆ ಈ ವರ್ಷವೂ ಮೇ.23ರಂದು ಬೆಳಗ್ಗೆ 11ಗಂಟೆಗೆ ಸರಳ ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ. ಅಲ್ಲದೇ ಮಲೆನಾಡು ಶ್ರೀಮಂತ ಜಾನಪದ ಸಂಸ್ಕೃತಿಯ ತವರೂರು. ಇಲ್ಲಿ ಮದುವೆ, ಹಬ್ಬ, ಕೃಷಿ, ದೇವರ ಪೂಜೆ, ಧಾರ್ಮಿಕ ಆಚರಣೆಗಳೆಲ್ಲವೂ ದೈನಂದಿನ ಜಾನಪದ ಭಾಗವಾಗಿ ಜಾನಪದ ಸೊಗಡಿನಲ್ಲಿ ಬೆಸೆದುಕೊಂಡಿದೆ. ಜಾನಪದ ಸಂಸ್ಕೃತಿಯನ್ನು ಉಳಿಸಲು ಮಲೆನಾಡ ಜಾನಪದ ಸಂಸ್ಕೃತಿ ಉತ್ಸವ ಕೂಡ ನಡೆಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಖ್ಯಾತ ಗೀತೆ ರಚನೆಕಾರ ಹಾಗೂ ಚಲನಚಿತ್ರ ನಿರ್ದೇಶಕ ಡಾ.ವಿ.ನಾಗೇಂದ್ರ ಪ್ರಸಾಧ್, ಚಿತ್ರದುರ್ಗದ ಖ್ಯಾತ ವಾಗ್ಮಿ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಸಿನಿಮಾ ಕಲಾವಿದೆ ಟಿ.ರಾಜೇಶ್ಚರಿ, ಚಲನಚಿತ್ರ ನಟ ಗುರುನಂದನ್ ಆಗಮಿಸಲಿದ್ದಾರೆ. ಸಂಜೆ ೬ ಗಂಟೆಗೆ ಮಲೆನಾಡು ಪ್ರತಿಭೆಗಳಿಂದ ಮಲೆನಾಡಿನ ಪ್ರಸಿದ್ದ ಕಲೆಗಳಾದ ಸುಗ್ಗಿ ಕುಣಿತ, ಕೋಲಾಟ, ಜಾನಪದ ನೃತ್ಯ, ಜಾನಪದ ಗೀತೆ, ಸೋಬಾನೆ ಹಾಡು, ಭತ್ತ ಕುಟ್ಟುವ ಹಾಡು, ನಟ್ಟಿ ಹಾಡು ಸೇರಿದಂತೆ ಇತರೇ ಜಾನಪದ ಸೊಗಡಿನ ಉತ್ಸವ ನಡೆಯಲಿದೆ. ಮದುವೆ ಹಾಗೂ ಜಾನಪದ ಉತ್ಸವದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು. 
ಪ.ಪಂ. ಸದಸ್ಯರಾದ ಎಚ್.ಪಿ.ರಮೇಶ್, ಹಂಜಾ, ಮಾಜಿ ಜಿ.ಪಂ. ಸದಸ್ಯ ಎಂ.ಎಸ್.ಅನಂತ್ ಮತ್ತಿತರರಿದ್ದರು.

ಶನಿವಾರ, ಜನವರಿ 8, 2022

ತೆರೆದ ಬಾಕ್ಸ್ ಚರಂಡಿಗೆ ಬಿದ್ದ ಜಾನುವಾರು: ಹೆದ್ದಾರಿ ಪ್ರಾಧಿಕಾರದ ವಿರುದ್ದ ಸಾರ್ವಜನಿಕರ ಆಕ್ರೋಶ


ಕೊಟ್ಟಿಗೆಹಾರ:ಹೆದ್ದಾರಿ ಅಗಲೀಕರಣದ ಭಾಗವಾಗಿ‌ ಕೊಟ್ಟಿಗರಹಾರದ ರಸ್ತೆ ಇಬ್ಬದಿಯಲ್ಲಿ ಬಾಕ್ಸ್ ಚರಂಡಿಗಳನ್ನು ನಿರ್ಮಾಣ ಮಾಡಲಾಗಿದ್ದು ಕೆಲವೆಡೆ ಬಾಕ್ಸ್ ಚರಂಡಿಯನ್ನು ಮುಚ್ಚದೇ ಇರುವುದರಿಂದ ಜಾನುವಾರೊಂದು ಬಾಕ್ಸ್ ಚರಂಡಿಗೆ ಬಿದ್ದ ಘಟನೆ ಶನಿವಾರ ಸಂಜೆ ನಡೆದಿದೆ.
ಜಾನುವಾರೊಂದು ಬಾಕ್ಸ್ ಚರಂಡಿಗೆ ಬಿದ್ದು ಹೊರ ಬರಲಾಗದೇ ಒದ್ದಾಡುತ್ತಿದ್ದು ಸ್ಥಳೀಯರು ಹರಸಾಹಸ ಪಟ್ಟು ಜಾನುವಾರನ್ನು ಹೊರ ತೆಗೆದಿದ್ದಾರೆ.
ಬಾಕ್ಸ್ ಚರಂಡಿ ಕಾಮಗಾರಿ‌ ಮುಗಿದು ಹಲವು ಕಾಲವಾದರೂ ಕೂಡ ಕೆಲವೆಡೆ ಬಾಕ್ಸ್ ಚರಂಡಿಗಳನ್ನು ಮುಚ್ಚಿಲ್ಲ. ಇದರಿಂದ ನಾಯಿ, ಹಸು ಮುಂತಾದ ಪ್ರಾಣಿಗಳು ಬಾಕ್ಸ್ ಚರಂಡಿಯೊಳಗೆ ಬೀಳುತ್ತಿದ್ದು ಹೆದ್ದಾರಿ ಪ್ರಾಧಿಕಾರ ಬಾಕ್ಸ್ ಚರಂಡಿಯನ್ನು ಮುಚ್ಚಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.