ಆಶ್ರಯ ಸಾಮಾಜಿಕ ಸೇವಾ ಸಂಸ್ಥೆ, ಮಿತ್ರ ಜಾನಪದ ಕಲಾ ಸಂಘ, ಸಂಚಿ ಹೊನ್ನಮ್ಮ ಮಹಿಳಾ ಮಂಡಳಿ ಮತ್ತು ಪೂರ್ಣ ಚಂದ್ರ ತೇಜಸ್ವಿ ಜಾನಪದ ಕಲಾ ಸಂಘದ ಸಂಯುಕ್ತಾಶ್ರಯದಲ್ಲಿ ಮೇ.23ರಂದು ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನೋತ್ಸವದ ಅಂಗವಾಗಿ ಸರಳ ಸಾಮೂಹಿಕ ವಿವಾಹ ಮತ್ತು ಮಲೆನಾಡ ಜಾನಪದ ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.
ಅವರು ಸೋಮವಾರ ಪಟ್ಟಣದಲ್ಲಿ ಮದುವೆಯಾಗುವ 10 ಜೋಡಿ ವದೂವರರಿಗೆ ವಸ್ತ್ರ ವಿತರಿಸಿ ಮಾತನಾಡಿದರು. ಸರಳ ಸಾಮೂಹಿಕ ವಿವಾಹ ಕಳೆದ 20 ವರ್ಷದಿಂದ ನಡೆಸಿಕೊಂಡು ಬರಲಾಗುತ್ತಿದ್ದು, ಕೋವಿಡ್ ಸಂದರ್ಭದಲ್ಲಿ ಸಾಧ್ಯವಾಗಿರಲಿಲ್ಲ. ಸಾರ್ವಜನಿಕರ ಒತ್ತಾಯದ ಮೇರೆಗೆ ಈ ವರ್ಷವೂ ಮೇ.23ರಂದು ಬೆಳಗ್ಗೆ 11ಗಂಟೆಗೆ ಸರಳ ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ. ಅಲ್ಲದೇ ಮಲೆನಾಡು ಶ್ರೀಮಂತ ಜಾನಪದ ಸಂಸ್ಕೃತಿಯ ತವರೂರು. ಇಲ್ಲಿ ಮದುವೆ, ಹಬ್ಬ, ಕೃಷಿ, ದೇವರ ಪೂಜೆ, ಧಾರ್ಮಿಕ ಆಚರಣೆಗಳೆಲ್ಲವೂ ದೈನಂದಿನ ಜಾನಪದ ಭಾಗವಾಗಿ ಜಾನಪದ ಸೊಗಡಿನಲ್ಲಿ ಬೆಸೆದುಕೊಂಡಿದೆ. ಜಾನಪದ ಸಂಸ್ಕೃತಿಯನ್ನು ಉಳಿಸಲು ಮಲೆನಾಡ ಜಾನಪದ ಸಂಸ್ಕೃತಿ ಉತ್ಸವ ಕೂಡ ನಡೆಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಖ್ಯಾತ ಗೀತೆ ರಚನೆಕಾರ ಹಾಗೂ ಚಲನಚಿತ್ರ ನಿರ್ದೇಶಕ ಡಾ.ವಿ.ನಾಗೇಂದ್ರ ಪ್ರಸಾಧ್, ಚಿತ್ರದುರ್ಗದ ಖ್ಯಾತ ವಾಗ್ಮಿ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಸಿನಿಮಾ ಕಲಾವಿದೆ ಟಿ.ರಾಜೇಶ್ಚರಿ, ಚಲನಚಿತ್ರ ನಟ ಗುರುನಂದನ್ ಆಗಮಿಸಲಿದ್ದಾರೆ. ಸಂಜೆ ೬ ಗಂಟೆಗೆ ಮಲೆನಾಡು ಪ್ರತಿಭೆಗಳಿಂದ ಮಲೆನಾಡಿನ ಪ್ರಸಿದ್ದ ಕಲೆಗಳಾದ ಸುಗ್ಗಿ ಕುಣಿತ, ಕೋಲಾಟ, ಜಾನಪದ ನೃತ್ಯ, ಜಾನಪದ ಗೀತೆ, ಸೋಬಾನೆ ಹಾಡು, ಭತ್ತ ಕುಟ್ಟುವ ಹಾಡು, ನಟ್ಟಿ ಹಾಡು ಸೇರಿದಂತೆ ಇತರೇ ಜಾನಪದ ಸೊಗಡಿನ ಉತ್ಸವ ನಡೆಯಲಿದೆ. ಮದುವೆ ಹಾಗೂ ಜಾನಪದ ಉತ್ಸವದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು.
ಪ.ಪಂ. ಸದಸ್ಯರಾದ ಎಚ್.ಪಿ.ರಮೇಶ್, ಹಂಜಾ, ಮಾಜಿ ಜಿ.ಪಂ. ಸದಸ್ಯ ಎಂ.ಎಸ್.ಅನಂತ್ ಮತ್ತಿತರರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ