ಮಂಗಳವಾರ, ಫೆಬ್ರವರಿ 5, 2013

ಶ್ರೀ ಕ್ಷೇತ್ರ ಹೊರನಾಡು ಜಿಲ್ಲೆಯಿಂದ ೧೦೦ ಕಿ.ಮೀ.ಮೂಡಿಗೆರೆ ತಾಲ್ಲೂಕಿನಿಂದ ೨ ಕಿ.ಮೀ ಹೊರನಾಡಿನ ಆದಿದೇವತೆ ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ದೇವಾಲಯವು ಹೊರನಾಡು ಮೇರುತಿ ಪರ್ವತ ಶ್ರೇಣಿಯ ತಪ್ಪಲಿನಲ್ಲಿದೆ. ಪುಟ್ಟ ಗುಡ್ಡದ ಮೇಲಿರುವ ಶ್ರೀ ಆದಿ ಶಕ್ತ್ಯಾತ್ಮಕ ಅನ್ನ ಪೂರ್ಣೇಶ್ವರಿ ದೇವಾಲಯ ಸವಿಸ್ತಾರವಾದುದು. ಅಲ್ಲಿಯ ನಿಸರ್ಗ ರಮಣೀಯ ಪರಿಸರವಿದೆ. ಅಪೂರ್ವವಾದ ಪಶ್ಚಿಮ ಘಟ್ಟಗಳ ತಾಣ ಪ್ರವಾಸಿ ಕೇಂದ್ರವಾಗಿದ್ದು, ಜನಪ್ರಿಯವಾಗಿದೆ. ದೇಶದ ವಿವಿದೆಡೆಯಿಂದ ಭಕ್ತ ಸಮೂಹವನ್ನು ಆಕರ್ಷಿಸಿದೆ. ಹಲವು ಐತಿಹ್ಯಗಳು ಶ್ರೀ ಕ್ಷೇತ್ರವನ್ನು ಪ್ರಭಾವಗೊಳಿಸಿವೆ. ಎಲ್ಲಿ ನೋಡಿದರು ಹಸಿರು ನೀಲಿ ಆಗಸದೆಡೆಗೆ ಚಾಚಿ ನಿಂತ ಗಿರಿ ಶಿಖರ ತರುಲತೆಗಳು ಅವುಗಳ ನಡುವೆ ಮಂಜುಳ ನೀನಾದ ಗೈಯ್ಯುತ್ತಾ ಹರಿದು ಬರುವ ಭದ್ರಾ ನದಿ ಪರಾತ್ಪರ ಚಿಂತನೆಗೆ ಯೋಗ್ಯವಾದ ಪ್ರಶಾಂತ ಸ್ಥಳ. ಅಪರೂಪದ ಜಲಧಾರೆಗಳು ಸುತ್ತಲೂ ದಟ್ಟವಾದ ಕಾಡು, ಕಾಫಿ, ಭತ್ತ, ಅಡಿಕೆ, ಏಲಕ್ಕಿ ತೋಟಗಳಿಂದ ಕಂಗೊಳಿಸುವ ನೆಲೆ ಸರ್ವ ಧರ್ಮ ಸಮನ್ವಯತೆಯ ಬೀಡಾಗಿದೆ. ಭದ್ರಾ ನದಿಯ ಸಾಂಗತ್ಯದಿಂದ ಪುಣ್ಯ ಕ್ಷೇತ್ರವಾಗಿದೆ. ಈ ಕ್ಷೇತ್ರವು ಅಗಸ್ತ್ಯ ಮಹಾ ಮುನಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಅನ್ನಪೂರ್ಣೇಶ್ವರಿ ದೇವಿಯ ಪ್ರಭಾವದೊಂದಿಗೆ ಅವಿಚ್ಛಿನ್ನ ಪರಂಪರೆಯಾಗಿ ಮುಂದುವರೆದು ಬಂದಿದೆ.

ನಮ್ಮ ಮೂಡಿಗೆರೆ

ಹೊಯ್ಸಳರ ಮೂಲಸ್ಥಾನ ಅಂಗಡಿ

ಹೊಯ್ಸಳರ ಮೂಲಸ್ಥಾನ ಅಂಗಡಿ, ಜಿಲ್ಲೆಯಿಂದ ೫೦ ಕಿ.ಮೀ ತಾಲ್ಲೂಕಿನಿಂದ ೨೦ ಕಿ.ಮೀ. ಮೂಡಿಗೆರೆ ತಾಲ್ಲೂಕಿನ ಒಂದು ಚಿಕ್ಕ ಹಳ್ಳಿ. ೧೧,೧೨ ನೇ ಶತಮಾನದ ಶಾಸನದಲ್ಲಿ ಇದನ್ನುಸೊಸೆಯೂರು, ಸೊಸೆ ಊರು ಎಂದು ಕರೆದಿದೆ. ಬುಕ್ಕರಾಯನ ಕಾಲದಲ್ಲಿ ೧೩೫೯ ರಲ್ಲಿ ಇದೇ ಹೆಸರಿತ್ತು. ಆದರೆ ಅಚ್ಯುತರಾಯನ ಕಾಲದಲ್ಲಿ ೧೫೩೯ ರ ಹೊತ್ತಿಗೆ ಅಂಗಡಿಯೆಂಬ ಹೆಸರು ಪ್ರಚಾರದಲ್ಲಿತ್ತು. ವಿಷ್ಣುವರ್ಧನನ ಕಾಲದಲ್ಲಿ ಶಶಪುರ ಹಾಗೂ ಶಶಕಪುರ ಎಂಬ ಹೆಸರುಗಳಿವೆ. ಈ ಸೋಸೆಯೂರೆ ಹೊಯ್ಸಳರ ಮೂಲ ಸ್ಥಾನ. ಇಲ್ಲಿ ಸಳನು ಹುಲಿಯನ್ನು ಕೊಂದು ಹೊಯ್ಸಳ ವಂಶದ ಹೆಸರಿಗೆ ಕಾರಣನಾದವನು ಎಂದು ಶಾಸನ ತಿಳಿಸುತ್ತಿದೆ. ನೃಪಕಾಮ ಮಗನಾದ ವಿನಯಾದಿತ್ಯನು ದ್ವಾರಸಮುದ್ರಕ್ಕೆ ತನ್ನ ರಾಜಧಾನಿ (ಈಗಿನ ಹಳೇಬೀಡು) ಬದಲಾಯಿಸಿದನು. ಸಳನ ವಂಶದ ೪ ನೇಯ ರಾಜನೇ ವಿಷ್ಣುವರ್ಧನ ಪ್ರಭಾವಶಾಲಿಯಾಗಿದ್ದ ಹೊಯ್ಸಳರ ಸ್ವತಂತ್ರ ರಾಜ.
ಇಲ್ಲಿ ಸಪ್ತ ಮಾತೃಕೆಗಳಿವೆ. ೫ ವಿಗ್ರಹಗಳು ಮಾತ್ರ ಇಲ್ಲಿವೆ. ಅವುಗಳೆಂದರೆ, ಬ್ರಾಹ್ಮಿಣಿ, ಕೌಮಾರಿ, ವೈಷ್ಣವಿ, ವರಾಹಿ, ಮಹೇಶ್ವರಿ ಇವುಗಳು. ಇಂದ್ರಾಣಿ ಮತ್ತು ಚಾಮುಂಡಿ ಸೇರಿ ಸಪ್ತ ಮಾತೃಕೆಗಳು ಈ ಭಾಗದಲ್ಲಿ ವಸಂತ ಪರಮೇಶ್ವರ ಅಥವಾ ವೈಷ್ಣವಿ ದೇವಿಯ ಪ್ರಧಾನ ಪೂಜೆ ಹಬ್ಬವಾಗಿದೆ. ಚೈತ್ರ, ವೈಶಾಖ ಮಾಸದಲ್ಲಿ ಸುಗ್ಗಿ ಹಬ್ಬ ವಿಜೃಂಭಣೆಯಿಂದ ನಡೆಯುತ್ತದೆ. ಇಲ್ಲಿ ಮುಖ್ಯ ದೇವತೆ ವಸಂತಮ್ಮ ಅಥವಾ ವಾಸಂತಿ ದೇವಿ ಕುಲದೇವತೆಯಾಗಿದೆ.

ದೇವರಮನೆಯ ಶ್ರೀ ಕಾಲಭೈರವೇಶ್ವರ ದೇವಸ್ಥಾನ

ದೇವರಮನೆ

ಮೂಡಿಗೆರೆಯಿಂದ ೨೦ ಕಿ.ಮಿ ಒಳಗೆ ಅಂದರೆ ಸಬ್ಬೇನಹಳ್ಳಿ ಗುತ್ತಿ ಹೀಗೆ ಪ್ರಯಾಣಿಸಿದರೆ ಸಿಗುವುದೇ ದೇವರಮನೆಯ ಶ್ರೀ ಕಾಲಭೈರವೇಶ್ವರ ದೇವಸ್ಥಾನ. ಈ ದೇವಸ್ಥಾನವನ್ನು ಚೋಳರ ಕಾಲದಲ್ಲಿ ವೆಂಕಣ್ಣನೆಂಬ ಶಿಲ್ಪಿಯು ನಿರ್ಮಿಸಿದನೆಂಬ ಪ್ರತೀತಿ ಇದೆ.ನೋಡಲು ಸುಂದರವಾಗಿರುವ ಈ ದೇವಸ್ಥಾನವು ಗುಡ್ಡ ಗಾಡಿನ ತಪ್ಪಲಿನಲ್ಲಿ ನಿರ್ಮಿಸಲಾಗಿದೆ ಇತ್ತೀಚೆಗೆ ರಾಜ್ಯದ ವಿವಿದೆಡೆ ಇಂದ ಪ್ರವಾಸಿಗರು ಬರುತಿದ್ದಾರೆ. ಕೈಲಾಸದಲ್ಲಿ ಶಿವ ಬಸವನನ್ನು ಕುರಿತು "ಬಸವ ಭೂಲೋಕಕ್ಕೆ ಹೋಗಿ ಅಲ್ಲಿರುವ ಜನರು ಸುಕವಾಗಿದ್ದಾರೆಯೆ ನೋಡಿಕೊಂಡು ಬಾ" ಎಂದು ಕಳುಹಿಸಿದನು. ಅಂತೆಯೆ ಬಸವ ಭುವಿಗಿಳಿದು ನೋಡಿದಾಗ ಜನರೆಲ್ಲ ಕ್ಷಾಮ,ಬರಗಾಲದಿಂದ ನರಳುತಿದ್ದರು ಆದರೆ ಶಿವನ ಮುಂದೆ ತೆರಳಿದ ಬಸವ "ಎಲ್ಲರೂ ಚೆನ್ನಾಗಿದ್ದಾರೆಂದು" ಸುಳ್ಳುಹೇಳುತ್ತದೆ.ಮುಂದೆ ನಿಜವನ್ನರಿತ ಶಿವ ಬಸವನ ತಪ್ಪಿಗೆ ಪ್ರತಿಕಾರವಾಗಿ ಬಸವನನ್ನು ಭುವಿಗೆ ಅಟ್ಟಿ; ಜನರಿಗೆ ಉಳುಮೆಯಲ್ಲಿ ಸಹಾಯಮಾಡುವಂತೆ ಆಜ್ಞಾಪಿಸುತ್ತಾನೆ. ಹೀಗೆ ಬಸವ ಬರುತ್ತಲೆ ಹಿಂದೆಯೆ ಭೈರವನೂ ಬಂದು ದೇವರಮನೆಯಲ್ಲಿ ನೆಲೆಸುತ್ತಾನೆ. ಇದಕ್ಕೂಮೊದಲು ಜನರು ತಾವೇ ನೊಗವನ್ನು ಹೊತ್ತು ಉಳುತಿದ್ದರು ಈಗ ಉಳುಮೆಗೆ ಬಸವನು ದೂರೆತದ್ದರ ಪ್ರತೀಕವಾಗಿ ಇಂದಿಗೂ ಸುಗ್ಗಿಯ ಸಂದರ್ಭದಲ್ಲಿ 'ಒಳ್ಳೆಮಾತಿನವರು' ನೊಗ ಎಳೆಯುತ್ತಾರೆ. ಬಟ್ಟಲು ಭಾವಿ ಭುವಿಗೆ ಬಂದ ಭೈರವನ ಪೂಜೆಗಾಗಿ 'ವಕ್ಕಲಿಗರು' ತೊಡಗಿಕೊಳ್ಳುತ್ತಾರೆ. ಹೀಗೆ ಕಾಲ ಉರುಳುತ್ತಿರಲು ಯಾವುದೋ ಒಂದು ಸಂದರ್ಭದಲ್ಲಿ ವಕ್ಕಲಿಗರ ಮನೆತನವೆಲ್ಲ ನಶಿಸಿ ಒಂದು ತಾಯಿ ಮತ್ತು ೧೨ವರುಷದ ಮಗು ಉಳಿಯುತ್ತಾರೆ. ಮುಂದೆ ಈ ಬಾಲಕ ತಪಸ್ಸಿಗಿಳಿಯುತ್ತಾನೆ. ಹಾಗೂ ಜಲದೇವತೆ ಆತನಿಗೆ ಪ್ರತ್ಯಕ್ಷಳಾಗಿ ಕೈಗೊಂದು ತೆಂಗಿನ ಬಟ್ಟಲನ್ನಿತ್ತು "ಇದರಿಂದ ಈ ಭಾವಿಯಲ್ಲಿ ನೀರು ತೆಗೆದುಕೊಂಡು ಹೋಗಿ ಶಿವನಿಗೆ ಪೂಜಿಸುವಂತೆ" ಸಲಹೆ ನೀಡುತ್ತಾಳೆ. ಮುಂದೆ ಇದೇ 'ಬಟ್ಟಲು ಭಾವಿ' ಎಂದು ಹೆಸರು ಪಡೆಯುತ್ತದೆ. ದೇವಾಲಯ ನಿರ್ಮಾಣ ಈ ದೇವಾಲಯವನ್ನು ಪಾಂಡವರು ನಿರ್ಮಿಸಿದರೋ, ಹೊಯ್ಸಳರು ನಿರ್ಮಿಸಿದರೋ ಅಥವಾ ವೇಣೂರಿನ ಅರಸನ ನಿರ್ಮಾಣವೊ ಎಂಬುದರಲ್ಲಿ ಗೊಂದಲವಿದೆ. ನಕ್ಷತ್ರಾಕಾರದ ಜಗಲಿ, ಗುಂಡನೆಯ ಕಂಬಗಳು ಮತ್ತು ದೇವಾಲಯದ ಹೊರಗೆ ಧೀಪ ಸ್ಥಂಬಗಳನ್ನು ಗಮನಿಸಿದರೆ ಇದು ಹೊಯ್ಸಳರ ನಿರ್ಮಾಣವೆನ್ನ ಬಹುದು ಆದರು ಇಲ್ಲಿ ಅಷ್ಟೇನು ಕಲಾತ್ಮಕ ಕೆತ್ತನೆಗಳು ಕಂಡುಬರುವುದಿಲ್ಲ. ಅಲ್ಲದೆ ಇಲ್ಲಿಗೆ ದಕ್ಷಿಣ ಕನ್ನಡದ ಜನರು ಬರುತಿದ್ದ ನಿದರ್ಶನಗಳಿಂದ ಇದನ್ನು ವೇಣೂರ ಅರಸನ ನಿರ್ಮಾಣವೆಂನ್ನಬಹುದು. ಸಧ್ಯಕ್ಕೆ ಯಾವುದೆ ಶಾಸನ ಮಾಹಿತಿ ಇಲ್ಲದ ಕಾರಣ ನಿರೀಕ್ಷಿಸಬೇಕು. (ದೇವಾಲಯದ ಹೊಸ್ತಿಲಲ್ಲಿ 'ವೆಂಕಣ್ಣನ ನಮಸ್ಕಾರಗಳು' ಎಂಬ ಕನ್ನಡ ಲಿಪಿ ಇದೆ) ಬಲ್ಲಾಳನ ಗವಿ ಗುಡ್ಡ್ವನ್ನೇರುತ್ತಿರುವ ಪ್ರವಾಸಿಗರು ಹೊಯ್ಸಳ ಅರಸ ಬಲ್ಲಾಳನು ನಿರ್ಮಿಸಿದನು ಎಂದು ನಂಭಲಾದ ಭಯಾನಕ ಮತ್ತು ಬೃಹತ್ತಾದ ಗವಿಯೊಂದು ಇಂದಿಗೂ ದೇವರಮನೆ ಕಾಡಿನಲ್ಲಿದ್ದು ತನ್ನ ನಿಗೂಢತೆಯನ್ನು ಮೆರೆದಿದೆ. ಮೆಟ್ಟಿಲು ಗಳನ್ನು ಹೊಂದಿರುವ ಈ ಸುರಂಗ ಮಾರ್ಗ ಎಲ್ಲಿಗೆ ಸಂಪರ್ಕ ನೀಡುತ್ತದೆ, ಎಷ್ಟು ಉದ್ದಯಿದೆ ಎಂಬುದು ರಹಸ್ಯವಾಗೆ ಉಳಿದಿದೆ. ಕಾಟಿಮೆಟ್ಟಿದಕಲ್ಲು ಸಾವಿರಾರು ವರ್ಷಗಳ ಹಿಂದೆ ಕಲ್ಲು ಇಂದಿಗಿಂತ ಮೃದು ವಿತ್ತು ಎಂಬುದು ವಿಜ್ಞಾನದ ಮಾತು. ಇದಕ್ಕೆ ಸಾಕ್ಷಿಯಂತೆ ದೇವರ ಮನೆಯ ಸಮೀಪ ಬೆಟ್ಟದ ಮೇಲೆ ಕಾಡಿನಲ್ಲಿ ಚಲಿಸಿದರೆ ಸಿಗುವುದೆ 'ಕಾಟಿಮೆಟ್ಟಿದಕಲ್ಲು' ಇಲ್ಲಿ ಹಿಂದೊಮ್ಮೆ ಕಾಟಿಯೊಂದು ತನ್ನ ಕರುವಿಗೆ ಕೊಡುವ ವೇಳೆಗೆ ಕರು ಮಂಡಿಯೂರಿದ ಗುರುತುಗಳಿವೆ. ವಿಶೇಷ ಹಬ್ಬಗಳು ಕಾರ್ತಿಕ ವಿಳ್ಯದ ಹಬ್ಬ ಮಟಕ್ಕೆ ಹತ್ತುವುದು ಊರ ಹಬ್ಬ ವೀಳ್ಯದ ಹಬ್ಬ

ಹೇಮಾವತಿ

ಹೇಮಾವತಿ ಹೇಮಾವತಿ ನದಿಯು ಕಾವೇರಿ ನದಿಯ ಮುಖ್ಯ ಉಪನದಿಗಳಲ್ಲೊಂದು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಜಾವಳಿಯ ಪಶ್ಚಿಮ ಘಟ್ಟದ ಶ್ರೇಣಿಯಲ್ಲಿ ಉಗಮಿಸುವ ಈ ನದಿ, ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹರಿದು, ಕೃಷ್ಣರಾಜಸಾಗರದ ಹಿನ್ನೀರಿನಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. ಹಾಸನ ಜಿಲ್ಲೆಯ ಗೊರೂರಿನಲ್ಲಿ ಹೇಮಾವತಿ ನದಿಗೆ ಅಡ್ಡವಾಗಿ ಅಣೆಕಟ್ಟೆಯೊಂದನ್ನು ಕಟ್ಟಲಾಗಿದೆ. ಯಗಚಿ ಹೇಮಾವತಿ ನದಿಯ ಮುಖ್ಯ ಉಪನದಿ.