ಭಾನುವಾರ, ಸೆಪ್ಟೆಂಬರ್ 29, 2024

ಅಕ್ಟೋಬರ್ ೪ ಕ್ಕೆ ರೇಬಿಸ್ ಉಚಿತಾ ಲಸಿಕಾ ಕಾರ್ಯಕ್ರಮ


ಬಣಕಲ್:ಅಕ್ಟೋಬರ್ ೪ ರಂದು ಮೂಡಿಗೆರೆ ಪಟ್ಟಣದ ಪಶು ಆಸ್ಪತ್ರೆಯಲ್ಲಿ ಸಾಕು ನಾಯಿಗಳಿಗೆ ರೇಬಿಸ್ ರೋಗದ ವಿರುದ್ದ ಉಚಿತ ಲಸಿಕಾ ಕಾರ್ಯಕ್ರಮ ಆಯೋಜಿಸಿಲಾಗಿದೆ ಎಂದು ಮೂಡಿಗೆರೆ ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿಗಳಾದ ಡಾ.ಸಿ.ರಮೇಶ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಅಕ್ಟೋಬರ್ ೪ ರ ಶುಕ್ರವಾರ ಬೆಳಗ್ಗೆ ೧೦ ರಿಂದ ಸಂಜೆ ೪ ರವರೆಗೆ ಮೂಡಿಗೆರೆ ಪಟ್ಟಣದ ಪಶು ಆಸ್ಪತ್ರೆ ಆವರಣದಲ್ಲಿ  ಮೂಡಿಗೆರೆಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಮೂಡಿಗೆರೆ ನಗರ ವ್ಯಾಪ್ತಿಯ  ಸಾಕು ನಾಯಿಗಳಿಗೆ ರೇಬಿಸ್ ರೋಗದ ವಿರುದ್ಧ ಉಚಿತ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಎಲ್ಲಾ ಶ್ವಾನ ಪ್ರಿಯರು ಹಾಗೂ ಅದರ ಮಾಲೀಕರುಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತೇಜಸ್ವಿ ಪ್ರತಿಷ್ಠಾನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ


ಕೊಟ್ಟಿಗೆಹಾರ:ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೂಡಿಗೆರೆ ಮಾರ್ಗವಾಗಿಯೇ ಸಂಚರಿಸುತ್ತಿದ್ದರೂ ತೇಜಸ್ವಿ ಪ್ರತಿಷ್ಠಾನಕ್ಕೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ತೇಜಸ್ವಿ ಪ್ರತಿಷ್ಠಾನಕ್ಕೆ ಭೇಟಿ ನೀಡಿದ್ದು  ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ವಸ್ತು ಸಂಗ್ರಹಾಲಯ, ಕೀಟ ಸಂಗ್ರಹಾಲಯ, ಗ್ರಂಥಾಲಯಗಳು ಜ್ಞಾನಾಸಕ್ತರಿಗೆ ಉಪಯುಕ್ತವಾಗಿವೆ. ಉತ್ತಮ ನಿರ್ವಹಣೆ ಮಾಡಲಾಗಿದ್ದು ಅಗತ್ಯವಿದ್ದಲ್ಲಿ ಪ್ರತಿಷ್ಠಾನದ ಅಭಿವೃದ್ದಿಗೆ ಕೇಂದ್ರ ಸರ್ಕಾರದ ಅನುದಾನವನ್ನು ತರಲು ಪ್ರಯತ್ನಿಸಲಾಗುವುದು ಎಂದರು.

ಭಾನುವಾರ, ಸೆಪ್ಟೆಂಬರ್ 22, 2024

ಕನ್ನಡ ಭಾಷಾಭಿಮಾನ ಮೂಡಿಸುವ ಕನ್ನಡ ಜ್ಯೋತಿ ರಥಯಾತ್ರೆ

ಕಡೂರು : ಜನಜಾಗೃತಿಯ ಮೂಲಕ ಭಾಷಾಭಿಮಾನವನ್ನು ಎಲ್ಲಡೆ ಪಸರಿಸಲು ರಾಜ್ಯ ಸರಕಾರ ವಿನೂತನ ಕಾರ್ಯಕ್ರಮಗಳೊಂದಿಗೆ ರಥಯಾತ್ರೆಯ ಮೂಲಕ ಭಾಷಾ ಪ್ರೇಮವನ್ನು ಹೆಚ್ಚಿಸುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
    ಪಟ್ಟಣದಲ್ಲಿ ಕರ್ನಾಟಕ ಸಂಭ್ರಮ ೫೦ರ ಕಾರ್ಯಕ್ರಮದ ಅಂಗವಾಗಿ ಆಗಮಿಸಿದ್ದ ಕನ್ನಡ ಜ್ಯೋತಿ ರಥಯಾತ್ರೆಯನ್ನು ಭಾನುವಾರ ಸ್ವಾಗತಿಸಿ ಬಳಿಕ ಮಾತನಾಡಿದರು.
 ಈಗಾಗಲೇ ವ್ಯವಹಾರಿಕವಾಗಿ ಬಹುಭಾಷೆ ಕಲಿಕೆ ಅನಿವಾರ್ಯವಾದರೂ ಹೃದಯದ ಭಾಷೆ ನಮ್ಮ ಕನ್ನಡವಾಗಿದೆ. ಚದುರಿ ಹೋಗಿದ್ದ ಕನ್ನಡ ನಾಡು ಏಕೀಕೃತಗೊಂಡ ನಂತರದ ಮೈಸೂರು ರಾಜ್ಯ ಉದಯವಾಗಿ ನಂತರ ಕರ್ನಾಟಕ ಎಂದು ಮರುನಾಮಕರಣಗೊಂಡು ೫೦ ವರ್ಷವಾದ ಹಿನ್ನೆಲೆಯಲ್ಲಿ ಈ ರಥಯಾತ್ರೆಯನ್ನು ಸರ್ಕಾರ ಆಯೋಜಿಸಿದೆ.
 ಇದು ಕೇವಲ ರಥಯಾತ್ರೆಯಲ್ಲ. ನಮ್ಮಲ್ಲಿ ಅಂತರ್ಗತವಾಗಿರುವ ಕನ್ನಡ ಭಾಷಾ ಪ್ರೇಮವನ್ನು ಉದ್ದೀಪಿಸುವ ಯಾತ್ರೆ. ಜೀವನಕ್ಕೆ ಹಲವಾರು ಭಾಷೆಗಳು ಅಗತ್ಯವಾದರೂ ಆಡಲು ಕನ್ನಡ ಭಾಷೆ ಎಂಬ ಪ್ರೇಮವನ್ನು ನಮ್ಮ ಮಕ್ಕಳಲ್ಲಿ ಬೆಳೆಸಬೇಕು ಎಂದು ಕರೆ ನೀಡಿದರು.
    ಪುರಸಭಾ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಮಾತನಾಡಿ, ಕನ್ನಡದ ಮನಸ್ಸುಗಳನ್ನು ಗಟ್ಟಿಗೊಳಿಸುವ ಮೂಲಕ ರಥಯಾತ್ರೆಯ ರಾಜ್ಯದ್ಯಾಂತ ಸಂಚರಿಸುತ್ತಿದೆ. ಸಾಹಿತ್ಯ, ಭಾಷಾ ಮತ್ತು ಕನ್ನಡಬಗೆಗಿನ ನಮ್ಮತನದ ಉಳಿವಿಗೆ ನಾವೆಲ್ಲರೂ ಕಟ್ಟಿಬದ್ದರಾಗಬೇಕಿದೆ. ಕನ್ನಡದ ಕೆಲಸಗಳಿಗೆ ಮುಂದಾಗುವ ಕಸಾಪ ಹಾಗೂ ಸಂಘ ಸಂಸ್ಥೆಗಳಿಗೆ ಪುರಸಭೆಯು ನಿರಂತರವಾಗಿ ಕೈಜೋಡಿಸಲಿದೆ ಎಂದರು.
     ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಅಂಗನವಾಡಿ ಕಾರ್ಯಕರ್ತೆಯರು ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣ ಗೆಗೆ ಚಾಲನೆ ನೀಡಲಾಯಿತು. ಶಾಲಾ ಮಕ್ಕಳು, ಆಶಾ ಕಾರ್ಯಕರ್ತೆರು ಹಾಗೂ ಅಧಿಕಾರಿ ವರ್ಗದವರು ಮೆರವಣ ಗೆಯಲ್ಲಿ ಭಾಗವಹಿಸಿ ವಿಜಯಲಕ್ಷಿ ಚಿತ್ರಮಂದಿರದ ವರೆಗೆ ಹೆಜ್ಜೆ ಹಾಕಿ ರಥಯಾತ್ರೆಯನ್ನು ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸಿ.ಎಸ್. ಪೂಣ ðಮಾ, ಪುರಸಭಾ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಮುಖ್ಯಾಧಿಕಾರಿ ಕೆ.ಎಸ್. ಮಂಜುನಾಥ್, ಸಿಡಿಪಿಒ ಶಿವಪ್ರಕಾಶ್, ನರೇಗಾ ಸಹಾಯಕ ನಿರ್ದೇಶಕ ಕಲ್ಲಪ್ಪ, ಕಸಾಪ ಜಿಲ್ಲಾಧ್ಯಕ್ಷ ಸೂರಿಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ಬಿಇಓ ಆರ್.ಸಿದ್ದರಾಜು ನಾಯ್ಕ, ಪುರಸಭಾ ಸದಸ್ಯರಾದ ಈರಳ್ಳಿ ರಮೇಶ್, ಮರಗುದ್ದಿ ಮನು, ಸುಧಾ ಉಮೇಶ್, ಕಸಾಪ ಪದಾಧಿಕಾರಿಗಳಾದ ಬಿ.ಪ್ರಕಾಶ್, ಕೃಷ್ಣಸ್ವಾಮಿ, ಕೆ.ಪಿ. ಪ್ರವೀಣ್, ಲತಾರಾಜಶೇಖರ್ ಮತ್ತಿತರಿದ್ದರು.

ಶನಿವಾರ, ಸೆಪ್ಟೆಂಬರ್ 21, 2024

ಕನ್ನಡ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸಿ ಕನ್ನಡ ಜಾಗೃತಿ ಮೂಡಿಸಲಿ



ಚಿಕ್ಕಮಗಳೂರು:ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಗಿ ೫೦ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕರ್ನಾಟಕ ಸಂಭ್ರಮ-೫೦ ರ ಸಂಭ್ರಮದ  ಕನ್ನಡ ಜ್ಯೋತಿ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸಿ ಕನ್ನಡ ಜಾಗೃತಿ ಮೂಡಿಸಲಿ ಎಂದು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಶನಿವಾರ ಕನ್ನಡ ಜ್ಯೋತಿ ರಥಯಾತ್ರೆಗೆ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕರ್ನಾಟಕಕ್ಕೆ ಮರುನಾಮಕರಣವಾಗಿ ಕರ್ನಾಟಕ ಎಂಬ ಹೆಸರು ಘೋಷಣೆಯಾದ ೫೦ ವರ್ಷದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಕನ್ನಡದ ಹಿರಿಮೆ, ಕನ್ನಡದ ಗರಿಮೆ, ಕನ್ನಡ ಶಕ್ತಿ, ಕನ್ನಡದ ಮಣ ್ಣನ ವಾಸನೆಯ ಪರಿಕಲ್ಪನೆಯನ್ನು ಈ ರಥಯಾತ್ರೆ ಸಾರುತ್ತದೆ. ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳಿರುವ ಕನ್ನಡ ಭಾಷೆಯ ಬಗ್ಗೆ ಹೆಮ್ಮೆ ಮೂಡುತ್ತದೆ. ಕನ್ನಡದ ರಥ ಸಂಚರಿಸಿದಲ್ಲೆಲ್ಲಾ ಕನ್ನಡದ ವಾತಾವರಣ ಸೃಷ್ಟಿಯಾಗಲಿ. ಕನ್ನಡದ ಶಕ್ತಿ ಸಾಮರ್ಥ್ಯಗಳು ವೃದ್ದಿಸಲಿ. ಕನ್ನಡ ಭಾಷೆ ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ಭಾರತದೆಲ್ಲಡೆ ಪ್ರಜ್ವಲಿಸುವಂತಹ ಸಂಭ್ರಮದ ಕ್ಷಣ ಮೂಡಿ ಬರಲಿ ಎಂದರು.
ವಿಧಾನ ಸಭಾ ಶಾಸಕರಾದ ಹೆಚ್.ಡಿ ತಮ್ಮಯ್ಯ ಮಾತನಾಡಿ, ಕನ್ನಡ ನಾಡು ನುಡಿಗೆ ತನ್ನದೇ ಆದ ಶ್ರೀಮಂತಿಕೆ ಇದೆ. ಕನ್ನಡಿಗರೆಲ್ಲರೂ ಒಗ್ಗಟ್ಟಿನಿಂದ ಕನ್ನಡ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಲು ಹಾಗೂ ಬೆಳೆಸಿಕೊಂಡು ಹೋಗಲು ಶ್ರಮಿಸಬೇಕಿದೆ. ಕನ್ನಡ ಜ್ಯೋತಿ ರಥಯಾತ್ರೆಯೂ ಕರ್ನಾಟಕ ಎಂದು ನಾಮಕರಣಗೊಂಡ ಐತಿಹಾಸಿಕ ಕ್ಷಣವನ್ನು ಮೆಲುಕು ಹಾಕಲು ಮತ್ತು ಕನ್ನಡ ನಾಡು ನುಡಿಗೆ ದುಡಿದವರ ಸ್ಮರಣೆಗೆ ಕಾರಣವಾಗಲಿ ಎಂದರು.
ವಿಧಾನಸಭೆ ಶಾಸಕರಾದ ಎಸ್.ಎಲ್.ಭೋಜೇಗೌಡ ಮಾತನಾಡಿ, ಕನ್ನಡ ಮಾತನಾಡುವುದಕ್ಕೆ ಮಾತ್ರ ಸೀಮಿತವಾಗಬಾರದು. ರಾಜ್ಯೋತ್ಸವದಂತಹ ಕಾರ್ಯಕ್ರಮದಲ್ಲಿ ಸಂಭ್ರಮಾಚರಣೆಗೆ ಸೀಮಿತವಾಗಬಾರದು. ಕವಿಗಳು ಕೊಟ್ಟ ಕವಿವಾಣ ಯಂತೇ ನಡೆದರೇ ಕನ್ನಡ ಏಳಿಗೆ ಸಾಧ್ಯವಾಗುತ್ತದೆ. ಕನ್ನಡದ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕಾದ ಅಗತ್ಯವಿದೆ. ಕನ್ನಡ ಶಾಲೆಗಳು ಮುಚ್ಚುತ್ತಿದೆ. ಇದರ ಬಗ್ಗೆ ಧ್ವನಿ ಎತ್ತಬೇಕಿದೆ. ಸರ್ಕಾರಿ ಶಾಲೆಗಳಲ್ಲಿ ಕಲಿತವರು ಹಲವು ಕ್ಷೇತ್ರದಲ್ಲಿ ಸಾಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದ ಬಗ್ಗೆ ಕನ್ನಡ ಶಾಲೆಗಳ ಬಗ್ಗೆ ಕೀಳರಿಮೆ ಬೇಡ ಎಂದರು.
ವಿಧಾನ ಪರಿಷತ್ ಶಾಸಕರಾದ ಸಿ.ಟಿ ರವಿ ಮಾತನಾಡಿ, ಕರ್ನಾಟಕ ಎಂದು ಮರುನಾಮಕರಣವಾದ ಸಂದರ್ಭದಲ್ಲಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಕವಿವಾಣ  ಮೂಡಿತು.  ಕರ್ನಾಟಕ ಮರುನಾಮಕರಣದ  ವರ್ಷಗಳ ಅವಲೋಕನ ನಡೆಸಿದರೇ ನಾವು ಎಲ್ಲಿಗೆ ಬಂದು ನಿಂತಿದ್ದೇವೆ. ಎಲ್ಲಿಗೆ ಬಂದು ನಿಂತಿದ್ದೇವೆ ಎನ್ನುವುದನ್ನು ಗಂಭೀರವಾಗಿ ಆಲೋಚಿಸಬೇಕಿದೆ.  ಹೆಸರೇನೋ ಕರ್ನಾಟಕವಾಯ್ತು. ಆದರೆ ಕನ್ನಡ ಯಾವ ಪ್ರಮಾಣದಲ್ಲಿ ಕನಸು ಕಟ್ಟಿ ಉಸಿರಾಗಬೇಕೆಂದು ಬಯಸಿದ್ದೇವೋ ರೀತಿ ಉಸಿರಾಗಲಿಲ್ಲ ಎಂದರು.
ಈ ಸಂದರ್ಭದಲಿ ್ಲ ಸಗರಸಭೆ ಅಧ್ಯಕ್ಷರಾದ ಸುಜಾತ ಶಿವಕುಮಾರ್,  ಜಿಲ್ಲಾಧಿಕಾರಿಗಳಾದ ಮೀನಾ ನಾಗರಾಜ್, ಅಪರ ಜಿಲ್ಲಾಧಿಕಾರಿ ನಾರಾಯಣರೆಡ್ಡಿ ಕನಕ ರಡ್ಡಿ, ಅಡಿಷನಲ್ ಎಸ್‌ಪಿ ಕೃಷ್ಣಮೂರ್ತಿ,  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ ರಮೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಮಂಜುಳಾ ಹುಲ್ಲಹಳ್ಳಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸೂರಿ ಶ್ರೀನಿವಾಸ್, ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹಾಗೂ ಕನ್ನಡ ಪರ ಸಂಘಟನೆಗಳ ಸದಸ್ಯರು, ಸಾಂಸ್ಕೃತಿಕ ವಲಯದ ಕಲಾವಿದರು, ಆಟೋ, ಟ್ಯಾಕ್ಸಿ ಸಂಘದ ಸದಸ್ಯರು ಇದ್ದರು.

ಶುಕ್ರವಾರ, ಸೆಪ್ಟೆಂಬರ್ 20, 2024

ಕನ್ನಡ ಜ್ಯೋತಿ ರಥಕ್ಕೆ ಚಿಕ್ಕಮಗಳೂರು ಗಡಿಯಲ್ಲಿ ಸ್ವಾಗತ


ಚಿಕ್ಕಮಗಳೂರು:ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಗಿ ೫೦ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕರ್ನಾಟಕ ಸಂಭ್ರಮ-೫೦ ರ ಅಂಗವಾಗಿ  ರಾಜ್ಯಾದ್ಯಾಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆಯ ರಥವನ್ನು ಚಿಕ್ಕಮಗಳೂರು ಗಡಿ ಭಾಗವಾದ ಮಾಗಡಿ ಹ್ಯಾಂಡ್ ಪೋಸ್ಟ್ ನಲ್ಲಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ ರಮೇಶ್, ತಹಶೀಲ್ದಾರ್ ಸುಮಂತ್, ಅಧಿಕಾರಿಗಳಾದ ಶ್ರೀನಿವಾಸ್, ಸಿಬ್ಬಂದಿ ನವದೀಪ್, ಮಲ್ಲಿಕಾರ್ಜುನ್, ಪೊಲೀಸ್ ಇಲಾಖೆಯ ಅಧಿಕಾರಿಗಳು, ಕನ್ನಡ ಪರ ಸಂಘಟನೆಗಳ ಸದಸ್ಯರು ಇದ್ದರು.


ಸೆಪ್ಟೆಂಬರ್ ೨೧ರ ಶನಿವಾರ ಜಿಲ್ಲಾಧಿಕಾರಿ ಕಚೇರಿಯಿಂದ ಜಿ,ಪಂ ವರೆಗೆ ವಿಜೃಂಭಣೆಯ ರಥಯಾತ್ರೆ
 ಬೆಳಿಗ್ಗೆ ೯ ಗಂಟೆಗೆ ಕನ್ನಡ ಜ್ಯೋತಿ ರಥಯಾತ್ರೆಯು ಜಿಲ್ಲಾಧಿಕಾರಿಗಳ ಕಚೇರಿಯಿಂದ ಜಿಲ್ಲಾ ಪಂಚಾಯತಿಯವರೆಗೆ ವಿವಿಧ ಕಲಾ ತಂಡಗಳ ಕಲಾ ಪ್ರದರ್ಶನದೊಂದಿಗೆ ಸಾಗಲಿದ್ದು ಸಾಂಸ್ಕೃತಿಕ ವಲಯದ ಪ್ರಮುಖರು, ಕನ್ನಡ ಪರಸಂಘಟನೆಗಳ ಪದಾಧಿಕಾರಿಗಳು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ರಥಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಥಯಾತ್ರೆಯೂ ಮುಂದುವರೆದು ಉದ್ದೇಬೋರನಹಳ್ಳಿ, ಸಖರಾಯಪಟ್ಟಣ, ಸರಸ್ವತಿಪುರ ಮಾರ್ಗವಾಗಿ ಕಡೂರು ಕಡೆಗೆ ಸಾಗಲಿದೆ.
ಸೆಪ್ಟೆಂಬರ್ ೨೨ ರಂದು ಕಡೂರು, ೨೩ ಕ್ಕೆ ತರೀಕೆರೆ, ೨೪ ಕ್ಕೆ ಎನ್.ಆರ್ ಪುರ, ೨೫ ಕ್ಕೆ ಕೊಪ್ಪ, ೨೬ ರಂದು ಮೂಡಿಗೆರೆಗೆ ರಥಯಾತ್ರೆ ಬರಲಿದೆ. ಮೂಡಿಗೆರೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಯಾಣ ಸಲಿದೆ.

ಗುರುವಾರ, ಸೆಪ್ಟೆಂಬರ್ 19, 2024

ಕನ್ನಡ ಜ್ಯೋತಿ ರಥಯಾತ್ರೆಗೆ ಸಕಲ ಸಿದ್ದತೆ


 ಚಿಕ್ಕಮಗಳೂರು:ಕನ್ನಡ ಜ್ಯೋತಿ ರಥಯಾತ್ರೆಗೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು ರಥಯಾತ್ರೆಯ ಯಶಸ್ಸಿಗೆ ಸರ್ವರ ಸಹಕಾರ ಅಗತ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ ರಮೇಶ್ ಹೇಳಿದರು.

ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಕನ್ನಡ ಜ್ಯೋತಿ ರಥಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸೆಪ್ಟೆಂಬರ್ ೨೦ ರಂದು ಬೇಲೂರು ಮಾರ್ಗವಾಗಿ ಆಗಮಿಸುವ ರಥವನ್ನು ಚಿಕ್ಕಮಗಳೂರು ಜಿಲ್ಲೆಯ ಗಡಿಭಾಗದಲ್ಲಿ ಸ್ವಾಗತಿಸಲಾಗುವುದು. ಸೆಪ್ಟೆಂಬರ್ ೨೧ ರಂದು ಬೆಳಿಗ್ಗೆ ೯ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಜಿಲ್ಲಾ ಪಂಚಾಯತಿಯವರೆಗೆ ಮೆರವಣ ಗೆ ಸಾಗಲಿದ್ದು ಮೆರವಣ ಗೆಯಲ್ಲಿ ವಿವಿಧ ಕಲಾ ತಂಡಗಳು ಕಲಾ ಪ್ರದರ್ಶನ ಇರಲಿದೆ. ಸಾಂಸ್ಕೃತಿಕ ವಲಯದ ಪ್ರಮುಖರು, ಕನ್ನಡ ಪರಸಂಘಟನೆಗಳ ಪದಾಧಿಕಾರಿಗಳು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ರಥಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಥಯಾತ್ರೆಯೂ ಮುಂದುವರೆದಯ ಉದ್ದೇಬೋರನಹಳ್ಳಿ, ಸಖರಾಯಪಟ್ಟಣ, ಸರಸ್ವತಿಪುರ ಮಾರ್ಗವಾಗಿ ಕಡೂರು ಕಡೆಗೆ ಸಾಗಲಿದೆ ಎಂದರು.
ಸೆಪ್ಟೆಂಬರ್ ೨೨ ರಂದು ಕಡೂರು, ೨೩ ಕ್ಕೆ ತರೀಕೆರೆ, ೨೪ ಕ್ಕೆ ಎನ್.ಆರ್ ಪುರ, ೨೫ ಕ್ಕೆ ಕೊಪ್ಪ, ೨೬ ರಂದು ಮೂಡಿಗೆರೆಗೆ ರಥಯಾತ್ರೆ ಬರಲಿದೆ. ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಗಿ ೫೦ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕರ್ನಾಟಕ ಸಂಭ್ರಮ-೫೦ ರ ಅಂಗವಾಗಿ  ಕನ್ನಡ ಜ್ಯೋತಿ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಕನ್ನಡ ಪರ ಸಂಘಟನೆಗಳು, ಕನ್ನಡಾಭಿಮಾನಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ರಥಯಾತ್ರೆಯಲ್ಲಿ ಭಾಗವಹಿಸಿ ರಥಯಾತ್ರೆ ಯಶಸ್ವಿಗೊಳಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.