ಶುಕ್ರವಾರ, ಆಗಸ್ಟ್ 15, 2025

ಶ್ರಮಜೀವಿ ಆಟೋ ಮಾಲೀಕರು ಮತ್ತು ಚಾಲಕರ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ


ಕೊಟ್ಟಿಗೆಹಾರ:ಸ್ವಾತಂತ್ರ್ಯ ತಂದು ಕೊಡಲು ಶ್ರಮಿಸಿದ ಸಾವಿರಾರು ಹೋರಾಟಗಾರರ ತ್ಯಾಗ ಬಲಿದಾನವನ್ನು ಸ್ಮರಿಸಬೇಕಿದೆ ಎಂದು ಬಣಕಲ್ ಪ್ರೌಢಶಾಲೆಯ ಮುಖ್ಯಶಿಕ್ಷಕ ಶ್ರೀನಿವಾಸ್ ಹೇಳಿದರು.
ಬಣಕಲ್‌ನ ಶ್ರಮಜೀವಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ನಡೆದ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಿಜ ಅರ್ಥದಲ್ಲಿ ಪೂರ್ಣ ಸ್ವಾತಂತ್ರ ಇನ್ನೂ ಸಿಕ್ಕಿಲ್ಲ. ಎಲ್ಲರಿಗೂ ಸಮನಾಗಿ ಸ್ವಾತಂತ್ರ್ಯವೂ ಸಿಗುವಂತಾಗಬೇಕಿದೆ. ರಾಷ್ಟ್ರೀಯ ಹಬ್ಬಗಳ ಆಚರಣೆ ಮಕ್ಕಳು ಸೇರಿದಂತೇ ಎಲ್ಲರಲ್ಲೂ ದೇಶಾಭಿಮಾನವನ್ನು ಹೆಚ್ಚಿಸಲು ವೇದಿಕೆಯಾಗಿದೆ ಎಂದರು.
ದಾನಿಗಳಾದ ಬಿ.ಎನ್.ದಿವ್ಯಪ್ರಸಾದ್ ಧ್ವಜರೋಹಣ ನೆರವೇರಿಸಿದರು. 
ಸಾಧಕರಾದ ಹಿಲಾರಿ ಜೋಸೆಫ್, ನಂದೀಶ್ ಬಂಕೇನಹಳ್ಳಿ, ಸೂರಿ ಬಣಕಲ್, ಮಾನವಿ ಬಗ್ಗಸಗೋಡು, ಶೇಖರ್ ಸಬ್ಲಿ ಮತ್ತು ದಾನಿಗಳಾದ ಬಿ.ಎನ್.ದೀಪಕ್, ಬಿ.ಎನ್.ದಿವ್ಯಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.
ಸ್ವಾತಂತ್ರ ದಿನಾಚರಣೆ ಅಂಗವಾಗಿ ಆಟೋಗಳನ್ನು ಆಕರ್ಷಕವಾಗಿ ಸಿಂಗರಿಸಲಾಯಿತು. ಬಣಕಲ್ ಪ್ರೌಢಶಾಲೆ ಮತ್ತು ರಿವರ್ ವ್ಯೂವ್ ಶಾಲೆಯ ವಿದ್ಯಾರ್ಥಿಗಳು ಬಣಕಲ್ ಮುಖ್ಯ ರಸ್ತೆಯಲ್ಲಿ ಮೆರವಣ ಗೆ ನಡೆಸಿದರು. 
ಈ ಸಂದರ್ಭದಲ್ಲಿ ಶ್ರಮಜೀವಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಸುರೇಶ್, ಗೌರವ ಅಧ್ಯಕ್ಷರಾದ ಸಬ್ಲಿ ದೇವರಾಜ್ ಹಾಗೂ ಪದಾಧಿಕಾರಿಗಳು ಇದ್ದರು.
ವಿವಿಧೆಡೆ ಸಂಭ್ರಮದ ಸ್ವಾತಂತ್ರ ದಿನಾಚರಣೆ: ಬಣಕಲ್‌ನಲ್ಲಿ ವಿವಿದೆಡೆ ಸ್ವಾತಂತ್ರ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಧ್ವಜಾರೋಹಣವನ್ನು ಬಣಕಲ್ ಗ್ರಾ.ಪಂಯಲ್ಲಿ ಅಧ್ಯಕ್ಷರಾದ ಜರೀನಾ, ವಿದ್ಯಾಭಾರತಿ ಶಾಲೆಯಲ್ಲಿ ಸವಿತಾ ಸಮಾಜದ ಅಧ್ಯಕ್ಷ ಹರೀಶ್ ಫಲ್ಗುಣ , ಬಣಕಲ್ ಪ್ರೌಢಶಾಲೆಯಲ್ಲಿ ಕೋಶಾಧಿಕಾರಿ ಬಿ.ಕೆ.ಪೃಥ್ವಿ, ನಜರೆತ್ ಶಾಲೆಯಲ್ಲಿ ಪೋಷಕರಾದ ಭವ್ಯಾಭಟ್ ನೆರವೇರಿಸಿದರು.

ಬುಧವಾರ, ಆಗಸ್ಟ್ 6, 2025

ಶಾಸಕರ ತೇಜೋವಧೆ ಸರಿಯಲ್ಲ:ಸಬ್ಲಿ ದೇವರಾಜ್

 ಬಣಕಲ್:ಮೂಡಿಗೆರೆ ಶಾಸಕರಾದ ನಯನ ಮೋಟಮ್ಮ ಅವರು ತಾಲ್ಲೂಕು ಗಣೇಶೋತ್ಸವ ಸಮಿತಿ ಲೋಗೋ ಮತ್ತು ಭಗವಾಧ್ವಜ ಸ್ತಂಭ ಸ್ಥಾಪನಾ ಕಾರ್ಯಕ್ರಮದಲ್ಲಿ ಕೇಸರಿ ಬಣ್ಣದ ಶಾಲು ಧರಿಸಿದ ಕಾರಣ ಶಾಸಕರನ್ನು ತೇಜೋವಧೆ ಮಾಡುವುದು ಸರಿಯಲ್ಲ ಎಂದು ತಾ.ಪಂ ಮಾಜಿ ಸದಸ್ಯರಾದ ಸಬ್ಲಿ ದೇವರಾಜು ಹೇಳಿದರು.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಾಸಕರಾಗಿ ಅವರು ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಶಾಸಕರಾದ ಮೇಲೆ ಒಂದು ಜಾತಿಗೆ, ಧರ್ಮಕ್ಕೆ ಹೇಗೆ ಸೀಮಿತರಾಗಲು ಸಾಧ್ಯ?. ಯಾವುದೇ ಧರ್ಮದ ಕಾರ್ಯಕ್ರಮದಲ್ಲ್ಲಿ ಆ ಧರ್ಮದ ಆಚರಣೆಯಂತೆಯೇ ಭಾಗವಹಿಸಬೇಕು ಅದು ಆ ಧರ್ಮಕ್ಕೆ ಕೊಡುವ ಗೌರವ. ಶಾಸಕರು ಮೊದಲಿನಿಂದಲೂ ದೇವರ ಮೇಲೆ ಅಪಾರ ಭಕ್ತಿ ಭಾವ ಹೊಂದಿರುವ ವ್ಯಕ್ತಿ. ಒಬ್ಬ ಶಾಸಕ ಹಿಂದೂ ಆಗಿರಲಿ, ಮುಸ್ಲಿಂ ಅಥವಾ ಕ್ರೈಸ್ತ ಅಥವಾ ಇನ್ನಾವುದೇ ಧರ್ಮದವರಾಗಿರಲಿ. ಇತರೆ ಧರ್ಮದ ಪೂಜೆ ಪುರಸ್ಕಾರ ಹಬ್ಬ ಹರಿದಿನಗಳಿಗೆ ಅವರ ಸಂಪ್ರದಾಯದಂತೆ ಭಾಗವಹಿಸಬೇಕು. ಅದು ಅಲ್ಲದೆ ಗಣೇಶ ಚತುರ್ಥಿ ಎಂಬುದು ಧರ್ಮ ಜಾತಿ ಮೀರಿ ನಡೆಯುವ ಹಬ್ಬವಾಗಿದೆ ಎಂದರು.
ಕೇಸರಿ ಬಣ್ಣದ ಶಾಲು ಯಾವುದೇ ಒಂದು ಸಂಘಟನೆಯ ಸ್ವತ್ತಲ್ಲ. ಮನೆಯ ಅಥವಾ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲರೂ ಕೇಸರಿ ಶಾಲನ್ನು ಧರಿಸುತ್ತಾರೆ. ಅದು ಸಹಜವೂ ಕೂಡ. ಅದರಲ್ಲಿ ತಪ್ಪು ಹುಡುಕುವ ಅಗತ್ಯವಿಲ್ಲ. ಒಬ್ಬ ಶಾಸಕರಿಂದ  ಜನರಿಗೆ ಸ್ಪಂದನೆ, ಸೌಲಭ್ಯ, ಅನ್ಯ ಜಾತಿ, ಧರ್ಮಗಳೊಂದಿಗೆ ಸೌಹಾರ್ದತೆ ಇದೆಯೇ ಎಂಬುದನ್ನು ಗಮನಿಸಬೇಕೇ ಹೊರತು ಈ ರೀತಿಯ ವಿಷಯಗಳನಲ್ಲ. ಶಾಸಕರು ತಾಲ್ಲೂಕು ಗಣೇಶೋತ್ಸವ ಸಮಿತಿಯ ಕಾರ್ಯಕ್ರಮದ ವೇದಿಕೆಯಲ್ಲಿ ಯಾವ ಧರ್ಮದ ಬಗ್ಗೆಯೂ ಕೂಡ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಹೀಗಿರುವಾಗ ಈ ವಿಚಾರದಲ್ಲಿ ತಪ್ಪು ಹುಡುಕುವುದರಲ್ಲಿ ಅರ್ಥವಿಲ್ಲ ಎಂದು ತಿಳಿಸಿದ್ದಾರೆ.