ಭಾನುವಾರ, ಏಪ್ರಿಲ್ 16, 2023

ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಕೊಟ್ಟಿಗೆಹಾರ:ಸಮಾಜದೊಂದಿಗೆ ಉತ್ತಮ ಭಾಂದವ್ಯವನ್ನು ಇಟ್ಟುಕೊಳ್ಳಲು ಸಾಮಾಜಿಕ ಕಾರ್ಯಗಳು ವೇದಿಕೆಯಾಗಿವೆ ಎಂದು ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಅಧ್ಯಕ್ಷ ರಾಮಚಂದ್ರ ಹೇಳಿದರು.
ಬಣಕಲ್ ಹಿರೇಬೈಲ್‌ನ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದಿಂದ ವಿಷು ಹಬ್ಬದ ಪ್ರಯುಕ್ತ ಮೂಡಿಗೆರೆ ಎಂಜಿಎಂ ತಾಲ್ಲೂಕು ಆಸ್ಪತ್ರೆಯಲ್ಲಿ ನಡೆದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಹಾಗೂ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಆರೋಗ್ಯಪೂರ್ಣ ಸ್ವಸ್ಥ ಹಾಗೂ ಸದೃಡ ಸಮುದಾಯವನ್ನಾಗಿ ರೂಪಿಸುವುದು ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ  ಸಂಘದ ಉದ್ದೇಶವಾಗಿದೆ. ಸಮುದಾಯದ ಸರ್ವಾಂಗೀಣ ಅಭಿವೃದ್ದಿಯ ಸಂಘದ ಮೂಲ ಮಂತ್ರವಾಗಿದೆ. ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುವುದು, ಸಮುದಾಯದ ಜನರನ್ನು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸಂಘಟಿಸುವುದರ ಜೊತೆಗೆ ಸಮುದಾಯದ ಸಬಲೀಕರಣಕ್ಕೆ ಶ್ರಮಿಸುವ ಉದ್ದೇಶವನ್ನು  ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘವು ಹೊಂದಿದೆ ಎಂದರು.
ಆಸ್ಪತ್ರೆಯ ತಾಲ್ಲೂಕು ವೈದ್ಯಾಧಿಕಾರಿ ಡಾ.ಶಾಂಭವಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘವೂ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಆಸ್ಪತ್ರೆಯ ಹಿರಿಯ ಶುಶ್ರೂಷಕಿಯರು ಹಾಗೂ ಸಿಬ್ಬಂದಿಗಳ ಸೇವೆಯನ್ನು ಗುರುತಿಸಿ ಸನ್ಮಾನಿಸಿರುವುದು ಅವರ ಸೇವಾಮನೋಭಾವವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.
ಮೂಡಿಗೆರೆ ಎಂಜಿಎಂ ಆಸ್ಪತ್ರೆಯ ತಾಲ್ಲೂಕು ವೈದ್ಯಾಧಿಕಾರಿ ಡಾ.ಶಾಂಭವಿ, ಶುಶ್ರೂಷಕಿಯರಾದ ವೇದಾವತಿ, ವನಿತಾಕುಮಾರಿ, ಆಸ್ಪತ್ರೆಯ ಸಿಬ್ಬಂದಿಗಳಾದ ನಾಗೇಶ್, ಪ್ರಮೀಳಮ್ಮ, ಜಮೀಲಾಭಾನು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಪದಾಧಿಕಾರಿಗಳು, ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.

ಮಂಗಳವಾರ, ಏಪ್ರಿಲ್ 11, 2023

ಲೇಖಕ ಧನಂಜಯ ಜೀವಾಳ ಅವರ ಪುಸ್ತಕಗಳ ಬಿಡುಗಡೆ

ಮಲೆನಾಡಿನ ಜಗತ್ತನ್ನು ಕಲಾತ್ಮಕವಾಗಿ ಕಟ್ಟಿಕೊಡುವ ಕೃತಿ ಗ್ರಾಮಾಯಣ

ಲೇಖಕ ಧನಂಜಯ ಜೀವಾಳ ಅವರ ಪುಸ್ತಕಗಳ ಬಿಡುಗಡೆ
ಕೊಟ್ಟಿಗೆಹಾರ:ಗ್ರಾಮಾಯಣ ಕೃತಿಯಲ್ಲಿ ಮಲೆನಾಡಿನ ಜಗತ್ತನ್ನು ಕಲಾತ್ಮಕವಾಗಿ ಕಟ್ಟಿಕೊಡಲಾಗಿದೆ. ಮಲೆನಾಡಿನ ಸೂಕ್ಷ್ಮಾತಿಸೂಕ್ಷ್ಮ ವಿವರಗಳು ಈ ಕೃತಿಯಲ್ಲಿ ದಾಖಲಾಗಿದೆ ಎಂದು ಮೈಸೂರಿನ ನಿವೃತ್ತ ಪ್ರಾಂಶುಪಾಲರಾದ ಡಾ.ಭದ್ರಪ್ಪ ಹೇಳಿದರು.

ಬಿದರಹಳ್ಳಿಯಲ್ಲಿ ನಡೆದ ಲೇಖಕ ಧನಂಜಯ ಜೀವಾಳ ಅವರ ಗ್ರಾಮಾಯಣ ಭಾಗ ೧ ಮತ್ತು ೨ ಪುಸ್ತಕ ಹಾಗೂ ಇದನ್ನೆಲ್ಲಾ ನಿಮಗೆ ಹೇಳಲು ತೇಜಸ್ವಿ ನನಗೆ ನಿಮಿತ್ತ ಎಂಬ ಆಡಿಯೋ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜೀವಾನುಭವದ ಸಹಜವಾದ ಸ್ಪಂದನ ಈ ಕೃತಿಯಲ್ಲಿ ಅಕ್ಷರಗಳಾಗಿವೆ. ಮರ‍್ನಾಲ್ಕು ಕಾದಂಬರಿಗಳಿಗಾಗುವಷ್ಟು ವಸ್ತು ವಿಷಯಗಳು ಈ ಕೃತಿಯಲ್ಲಿವೆ. ಗತಿಸಿ ಹೋದ ಮಲೆನಾಡಿನ ಜನಜೀವನ ಸಂಸ್ಕೃತಿಯನ್ನು ದಾಖಲಿಸುವ ಕಾರ್ಯ ಅತ್ಯಂತ ಅಗತ್ಯವಾಗಿ ಆಗಬೇಕಿದೆ. ಆಯಾ ಭಾಗದ ಪ್ರಾದೇಶಿಕ ಶ್ರೀಮಂತಿಕೆಯನ್ನು ಉಳಿಸಿಕೊಳ್ಳಬೇಕಿದೆ ಎಂದರು.
ಲೇಖಕರು ಹಾಗೂ ವಿಮರ್ಶಕರಾದ ಡಾ.ಎಚ್.ಎಸ್. ಸತ್ಯನಾರಾಯಣ ಮಾತನಾಡಿ, ಧನಂಜಯ ಜೀವಾಳ ಅವರು ಗ್ರಾಮಾಯಣ ಕೃತಿಯ ಮೂಲಕ ಮಲೆನಾಡಿನ ಹಿನ್ನಲೆಯ ಗ್ರಾಮ ಭಾರತವನ್ನು ಕಟ್ಟಿಕೊಟ್ಟಿದ್ದಾರೆ. ಗ್ರಾಮ ಸಂಸ್ಕೃತಿಯ ವಿವರಗಳು ಈ ಕೃತಿಯಲ್ಲಿ ದಟ್ಟವಾಗಿದೆ.  ಎಂದರು.
ಲೇಖಕರು ಹಾಗೂ ಸಂಶೋದಕರಾದ  ಪ್ರದೀಪ್ ಕೆಂಜಿಗೆ ಮಾತನಾಡಿ ಬದಲಾದ ಕಾಲಮಾನದಲ್ಲಿ ತಂತ್ರಜ್ಞಾನದ ಜೊತೆಗೆ ಹೆಜ್ಜೆ ಹಾಕಬೇಕಿದೆ. ಆಡಿಯೋ ಪುಸ್ತಕಗಳು  ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಆಡಿಯೋ ಪುಸ್ತಕಗಳು ಕೂಡ ಪರಿಣಾಮಕಾರಿಯಾಗಿ ಕೇಳುವ ವರ್ಗವನ್ನು ತಲುಪುತ್ತವೆ ಎಂದರು.
ಹಿರಿಯ ಜಾನಪದ ತಜ್ಞರಾದ ಕಾಳೇಗೌಡ ನಾಗವಾರ ಮಾತನಾಡಿದರು.
ಈ ಸಂದರ್ಭದಲ್ಲಿ ಲೇಖಕ ಧನಂಜಯ ಜೀವಾಳ, ಧ್ವನಿ ಕಲಾವಿದರಾದ ಎನ್. ಲೀಲಾವತಿ, ಭಾಗ್ಯ, ವನಜ ಸುರೇಶ್, ಡಾ.ಯತೀಶ್ವರ್, ಮಮತ, ಸಾಹಿತಿಗಳಾದ ಹಳೆಕೋಟೆ ರಮೇಶ್, ಕಸಾಪ ತಾಲ್ಲೂಕು ಅಧ್ಯಕ್ಷ ಶಾಂತಕುಮಾರ್, ಕಸಾಪ ಪದಾಧಿಕಾರಿಗಳಾದ ಮಗ್ಗಲಮಕ್ಕಿ ಗಣೇಶ್, ಪ್ರಕಾಶ್, ಎಂ.ಎಸ್ ನಾಗರಾಜ್, ಪ್ರಸನ್ನ ಗೌಡಹಳ್ಳಿ, ಮಂಜುನಾಥ್ ಸ್ವಾಮಿ, ಪೂರ್ಣೇಶ್ ಮತ್ತಾವರ ಮುಂತಾದವರು ಇದ್ದರು.

ಸೋಮವಾರ, ಸೆಪ್ಟೆಂಬರ್ 5, 2022

ಬಣಕಲ್ ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರ

ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಕೊಟ್ಟಿಗೆಹಾರ:ಆರೋಗ್ಯಕರ ಸಮಾಜ ನಿರ್ಮಾಣ ಮಾಡುವುದರಲ್ಲಿ ಶಿಕ್ಷಕರ ಪಾತ್ರ ಅಪಾರವಾದದ್ದು ಎಂದು ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯ ನಿರ್ದೇಶಕರು ಇಮ್ರಾನ್ ಹೇಳಿದರು.

ಬಣಕಲ್ ರಿವರ್ ವ್ಯೂ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತೀಯ ತತ್ವಶಾಸ್ತ್ರಜ್ಞರು ಮತ್ತು ರಾಷ್ಟ್ರದ ಎರಡನೇ ರಾಷ್ಟ್ರಪತಿಯೂ ಆದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನದ ಸ್ಮರಣೆಯಲ್ಲಿ ಆಚರಿಸುವ ಶಿಕ್ಷಕರ ದಿನಾಚರಣೆ ಶಿಕ್ಷಕರ ಮಹತ್ವವನ್ನು ಎಲ್ಲೆಡೆ ಸಾರಲು ಪ್ರೇರಣೆಯಾಗಿದೆ. ಪ್ರಜ್ಞಾವಂತ ನಾಗರಿಕರನ್ನು ಸಮಾಜ ನೀಡುವ ಶಿಕ್ಷಕರ ಕೊಡುಗೆಯನ್ನು ಸ್ಮರಿಸುವ ಅಗತ್ಯವಿದೆ ಎಂದರು.
 ಶಿಕ್ಷಕರ ದಿನಾಚರಣೆ ಅಂಗವಾಗಿ  ವಿದ್ಯಾರ್ಥಿಗಳಿಂದ  ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಕ್ಕಳೇ ಶಿಕ್ಷಕರಿಗೆ ಮಕ್ಕಳಿಂದ ವಿವಿಧ ಕ್ರೀಡಾ ಸ್ಪರ್ಧೆ ಗಳನ್ನು ಆಯೋಜಿಸಿದ್ದರು. 
ವಿಜೇತರಾದ ಶಿಕ್ಷಕರಿಗೆ ಮಕ್ಕಳು ಉಡುಗೊರೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ರಾಧಾ ಕಾರ್ಯಪ್ಪ, ಸಹಶಿಕ್ಷಕರು,ವಿದ್ಯಾರ್ಥಿಗಳು ಇದ್ದರು.

ಗುರುವಾರ, ಜುಲೈ 21, 2022

ಚಿಕಿತ್ಸೆಗೆ ನೆರವಿನ ನಿರೀಕ್ಷೆಯಲ್ಲಿ ಸಮಾಜ ಸೇವಕ

ಕೊಟ್ಟಿಗೆಹಾರ:ನಿಡುವಾಳೆ ಸಮೀಪದ ಕಲ್ಮನೆಯ ಸಮಜ ಸೇವಕರಾದ ಎಚ್.ಮಂಜುನಾಥ್ ಅವರು ಹೃದಯ ರಕ್ತನಾಳದ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆಗೆ ದಾನಿಗಳಿಂದ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಸಮಾಜ ಸೇವಕರಾದ ಎಚ್.ಮಂಜುನಾಥ್ ಅವರಿಗೆ ೨೦೨೧ ರ ಡಿಸೆಂಬರ್ ೨೪ ರಂದು ಎದೆನೋವು ಕಾಣಿಸಿಕೊಂಡಿದ್ದು ಚಿಕ್ಕಮಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಜೂನ್ ತಿಂಗಳಲ್ಲಿ ಮತ್ತೆ ಎದೆ ನೋವು ಕಾಣಿಸಿಕೊಂಡಿದ್ದು ಸುರತ್ಕಲ್ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿನ ವೈದ್ಯರು ವಿವಿಧ ಔಷಧಿಗಳನ್ನು ನೀಡಿದ್ದು ರಕ್ಷ ಪರೀಕ್ಷೆ ಮುಂತಾದ ಪರೀಕ್ಷೆಗಳನ್ನು ಮಾಡಿದ್ದಾರೆ. ಹೃದಯದ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿರುವುದಾಗಿ ತಿಳಿಸಿದ್ದಾರೆ. ಚಿಕಿತ್ಸೆಯ ಭಾಗವಾಗಿ ವಿವಿಧ ರೀತಿಯ ಪರೀಕ್ಷೆ ಹಾಗೂ ಔಷಧಿಗಳನ್ನು ತೆಗೆದುಕೊಳ್ಳಬೇಕಾಗಿದ್ದು ಇದಕ್ಕೆ ಲಕ್ಷಾಂತರ ರೂ ಹಣದ ಅಗತ್ಯವಿದೆ.
ಮಂಜುನಾಥ್ ಅವರಿಗೆ ಇಬ್ಬರು ಮಕ್ಕಳಿದ್ದು ಮಗ ೮ ನೇ ತರಗತಿ ಹಾಗೂ ಮಗಳು ೧೦ ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.  ಮಂಜುನಾಥ್ ಅವರ ಪತ್ನಿ ಕಲ್ಮನೆಯ ಅಂಗನವಾಡಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಕಡು ಕಷ್ಟದಲ್ಲಿರುವ ಮಂಜುನಾಥ್ ಅವರ ಚಿಕಿತ್ಸೆಗೆ ನೆರವಿನ ಅಗತ್ಯವಿದ್ದು ಮಂಜುನಾಥ್ ಅವರ ಚಿಕಿತ್ಸೆಗೆ ನೆರವು ನೀಡುವವರು ಮಂಜುನಾಥ್ ಅವರ ಕೆನರಾ ಬ್ಯಾಂಕಿನ ಮೂಡಿಗೆರೆ ಶಾಖೆಯ ಖಾತೆ ಸಂಖ್ಯೆ:೧೧೬೨೧೦೧೦೦೫೭೫೨. ಐಎಪ್‌ಎಸ್‌ಸಿ ಸಂಖ್ಯೆ ಸಿಎನ್‌ಆರ್‌ಬಿ೦೦೦೧೧೪೨ ಹಣ ಸಂದಾಯ ಮಾಡಬಹುದು. ಮಂಜುನಾಥ್ ಅವರ ಮೊಬೈಲ್ ಸಂಖ್ಯೆ:೯೬೦೬೬೯೮೯೫೮.

ಸ್ಥಳೀಯತೆಯಿಂದ ವಿಶ್ವಮಾತ್ಮಕ ನೆಲೆಗೆ ಸಾಗಿದ ತೇಜಸ್ವಿ ಸಾಹಿತ್ಯ

ಅಜ್ಜಂಪುರ:ತೇಜಸ್ವಿ ಅವರು ಸ್ಥಳೀಯತೆಯಿಂದ ವಿಶ್ವಮಾತ್ಮಕ ನೆಲೆಗೆ ತಮ್ಮ ಸಾಹಿತ್ಯವನ್ನು ಕೊಂಡೊಯ್ದವರು ಎಂದು ಉಪನ್ಯಾಸಕ ಡಾ.ಎಚ್.ಎಸ್.ಸತ್ಯನಾರಾಯಣ ಹೇಳಿದರು.

ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಚಿಕ್ಕಮಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ಅಜ್ಜಂಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ನಡೆದ ಅಜ್ಜಂಪುರದಲ್ಲಿ ನಡೆದ ತೇಜಸ್ವಿ ಸಾಹಿತ್ಯ ಯಾನ ಯುವ ಸ್ಪಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಳೆದ ೨೫ ವರ್ಷಗಳ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ತೇಜಸ್ವಿಯವರು ದೊಡ್ಡ ಆಕರ್ಷನೆಯ ಶಕ್ತಿಯಾಗಿ ಸೂಜಿಗಲ್ಲಿನ ಹಾಗೇ ಓದುಗರನ್ನು ಆಕರ್ಷಿಸಿದ್ದಾರೆ. ಹಾಗೆಯೇ ಯುವ ತಲೆಮಾರನ್ನು ಪ್ರಭಾವಿಸಿದ್ದಾರೆ. ತೇಜಸ್ವಿ ಸಾಹಿತ್ಯ ಪ್ರಭಾವದಿಂದಾಗಿ ಹೊಸ ಓದುಗ ವರ್ಗ ಸೃಷ್ಟಿಯಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕರಾದ ಡಾ.ಸಿ.ರಮೇಶ್ ಮಾತನಾಡಿ, ತೇಜಸ್ವಿ ಅವರ ಬದುಕು ಬರಹ ಚಿಂತನೆಗಳನ್ನು ಯುವಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಓದಿನ ಅಭಿರುಚಿಯನ್ನು ಮೂಡಿಸಲು ತೇಜಸ್ವಿ ಸಾಹಿತ್ಯ ಯಾನ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ರಾಜಣ್ಣ ಕೆ ಮಾತನಾಡಿ, ಯುವಪೀಳಿಗೆ ಸಾಹಿತ್ಯದತ್ತ ಮುಖ ಮಾಡಲು ಇಂತಹ ಕಾರ್ಯಕ್ರಮಗಳು ಪ್ರೇರಣೆಯಾಗಿವೆ. ಕನ್ನಡ ಸಾಹಿತ್ಯದ ಸಮೃದ್ದತೆಯ ಅರಿವನ್ನು ಯುವ ಪೀಳಿಗೆಯಲ್ಲಿ ಮೂಡಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಅಜ್ಜಂಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಮಹಾಲಿಂಗಪ್ಪ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಆನಂದ ಆರ್, ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಾರದ ಡಾ.ಆನಂದ ಎನ್.ಎಲ್,  ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ನಂದನ್ ಕುಪ್ಪಳ್ಳಿ, ಕಾರ್ಯಕ್ರಮ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್, ಯುವ ಸಾಹಿತಿಗಳಾದ ಪೃಥ್ವಿ ಸೂರಿ, ದರ್ಶನ್, ಹಾಗೂ ಕಾಲೇಜಿನ ಉಪನ್ಯಾಸಕ ವರ್ಗ, ವಿದ್ಯಾರ್ಥಿಗಳು ಇದ್ದರು.

ಮಂಗಳವಾರ, ಜೂನ್ 21, 2022

ದ್ವಿತೀಯ ಪಿಯುಸಿ ಪರೀಕ್ಷೆ: 97.33% ಅಂಕ ಪಡೆದ ಯಜ್ಞ ಡಿ.ಜೆ

97.33% ಅಂಕ ಪಡೆದ ಯಜ್ಞ ಡಿ.ಜೆ

ಕೊಟ್ಟಿಗೆಹಾರ:ದೇವನಗೂಲ್ ಗ್ರಾಮದ ಯಜ್ಞ ಡಿ.ಜೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 584 (97.33%) ಅಂಕ ಪಡೆದಿದ್ದಾರೆ.
ಮಂಗಳೂರಿನ ದೇವಿನಗರ ತಾಲಾಪಾಡಿಯ ಶಾರದಾ ವಿದ್ಯಾ ನಿಕೇತನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯಜ್ಞ ಡಿ.ಜೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 584 ಅಂಕ ಪಡೆಯುವ ಮೂಲಕ ಕಾಲೇಜಿಗೆ ೫ನೇ ಸ್ಥಾನ ಪಡೆದಿದ್ದಾರೆ. ಯಜ್ಞ ಡಿ.ಜೆ, ಕೊಟ್ಟಿಗೆಹಾರ ಸಮೀಪದ ದೇವನಗೂಲ್ ಗ್ರಾಮದ ಎಚ್.ಎಚ್.ಮಧುರ ಮತ್ತು ಡಿ.ಕೆ ಜಯಂತ್ ದಂಪತಿಗಳ ಪುತ್ರಿ.


ಭಾನುವಾರ, ಜೂನ್ 19, 2022

ಬಣಕಲ್‌ನಲ್ಲಿ ಹುತಾತ್ಮ ಯೋಧ ನಾಯಕ್ ಗಣೇಶ್ ಅವರಿಗೆ ಶ್ರದ್ದಾಂಜಲಿ

ಬಣಕಲ್:ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರ ತ್ಯಾಗ ಬಲಿದಾನವನ್ನು ಸ್ಮರಿಸೋಣ  ಎಂದು ನಿವೃತ್ತ ಯೋಧರಾದ ದಿನೇಶ್ ಹೇಳಿದರು.
ಬಣಕಲ್‌ನ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘ ಹಾಗೂ ಶ್ರಮಜೀವಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘ ಮತ್ತು ಸಾರ್ವಜನಿಕರ ವತಿಯಿಂದ ಬಣಕಲ್‌ನಲ್ಲಿ ನಡೆದ ಹುತಾತ್ಮ ಯೋಧ ನಾಯಕ್ ಗಣೇಶ್ ಅವರಿಗೆ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹುತಾತ್ಮ ಯೋಧ ನಾಯಕ್ ಗಣೇಶ್ ಅವರ ತ್ಯಾಗ ಬಲಿದಾನವನ್ನು ಸ್ಮರಿಸೋಣ. ಅವರ ಕುಟುಂಬಕ್ಕೆ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ಕರುಣಿಸಲಿ. ದೇಶದ ಗಡಿಯಲ್ಲಿ ಹಗಲಿರುಳೆನ್ನದೇ, ಬಿಸಿಲು ಮಳೆ ಎನ್ನದೇ ಗಡಿ ಕಾಯುವ ಸೈನಿಕರ ಕಾರಣದಿಂದ ಸಮಾಜ ಆತಂಕವಿಲ್ಲದೇ ಬದುಕುವಂತಾಗಿದೆ. ಕುಟುಂಬ, ಸಂಸಾರವನ್ನು ಬಿಟ್ಟು ಯುದ್ದದಲ್ಲಿ ಹೋರಾಡಿ ಮಡಿವ ಯೋಧರ ತ್ಯಾಗ ಬಲಿದಾನವನ್ನು ಸ್ಮರಿಸೋಣ ಎಂದರು.
ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಅಧ್ಯಕ್ಷ ರಾಮಚಂದ್ರ ಮಾತನಾಡಿ, ಹುತಾತ್ಮ ಯೋಧ ನಾಯಕ್ ಗಣೇಶ್ ಅವರ ಅಂತ್ಯಸAಸ್ಕಾರದ ದಿನ ಮೃತದೇಹ ಸಾಗಿದ ಮಾರ್ಗದ ಉದ್ದಕ್ಕೂ ಸಾವಿರಾರು ಜನ ರಸ್ತೆ ಇಬ್ಬದಿಯಲ್ಲಿ ನಿಂತು ಮೃತ ಯೋಧನ ಅಂತಿಮ ದರ್ಶನ ಪಡೆದರು. ಅಂತ್ಯ ಸಂಸ್ಕಾರದಲ್ಲಿ ಸಾವಿರಾರು ಜನ ನೆರೆದಿದ್ದರು. ಇದು ಸಮಾಜದಲ್ಲಿ ಸೈನಿಕರಿಗೆ ಅಪಾರವಾದ ಗೌರವವಿರುವುದರ ಸಂಕೇತವಾಗಿದೆ ಎಂದರು.
ಶ್ರಮಜೀವಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಅಧ್ಯಕ್ಷ ರೋನಾಲ್ಡ್ ಡಿಸೋಜಾ ಮಾತನಾಡಿ ಸೈನ್ಯದಲ್ಲಿ ಸೇವೆ ಸಲ್ಲಿಸುವುದು ದೇಶ ಸೇವೆ ಮಾಡಲು ಇರುವ ಅವಕಾಶವಾಗಿದೆ. ದೇಶ ಸೇಔಎ ಮಾಡುವ ಪವಿತ್ರ ಕೆಲಸ ಕೆಲವರಿಗೆ ಮಾತ್ರ ಸಿಗುತ್ತದೆ. ನಮ್ಮ ದೇಶದಲ್ಲಿ ಯೋಧ ಮತ್ತು ರೈತರನ್ನು ಅತ್ಯಂತ ಗೌರವ ಮತ್ತು ಅಭಿಮಾನದಿಂದ ಕಾಣಲಾಗುತ್ತದೆ ಎಂದರು.
ಹುತಾತ್ಮ ಯೋಧ ನಾಯಕ್ ಗಣೇಶ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೇಣದಬತ್ತಿ ಬೆಳಗಲಾಯಿತು. ಮೌನಾಚರಣೆ ಮಾಡುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಸಂಘಟನಾ ಕಾರ್ಯದರ್ಶಿ ಶರತ್, ನಿದೇರ್ಶಕರಾದ ಮಂಜುನಾಥ್, ಶ್ರಮಜೀವಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಫಯಾಜ್, ಖಜಾಂಚಿ ಸಲಾಂ, ಸದಸ್ಯರಾದ ಬಾಬು, ಪ್ರವೀಣ್, ರವಿ, ಸುಮನ್, ರವೀಂದ್ರ, ಮಧು ಗ್ರಾಮಸ್ಥರಾದ ಯತೀಶ್ ಕೂಡಹಳ್ಳಿ, ಅಣ್ಣಪ್ಪಣ್ಣ, ಮಂಜಯ್ಯ, ಚಂದ್ರಯ್ಯ ಮುಂತಾದವರು ಇದ್ದರು.