ಮಲೆನಾಡಿನ ಜಗತ್ತನ್ನು ಕಲಾತ್ಮಕವಾಗಿ ಕಟ್ಟಿಕೊಡುವ ಕೃತಿ ಗ್ರಾಮಾಯಣ
ಲೇಖಕ ಧನಂಜಯ ಜೀವಾಳ ಅವರ ಪುಸ್ತಕಗಳ ಬಿಡುಗಡೆ
ಕೊಟ್ಟಿಗೆಹಾರ:ಗ್ರಾಮಾಯಣ ಕೃತಿಯಲ್ಲಿ ಮಲೆನಾಡಿನ ಜಗತ್ತನ್ನು ಕಲಾತ್ಮಕವಾಗಿ ಕಟ್ಟಿಕೊಡಲಾಗಿದೆ. ಮಲೆನಾಡಿನ ಸೂಕ್ಷ್ಮಾತಿಸೂಕ್ಷ್ಮ ವಿವರಗಳು ಈ ಕೃತಿಯಲ್ಲಿ ದಾಖಲಾಗಿದೆ ಎಂದು ಮೈಸೂರಿನ ನಿವೃತ್ತ ಪ್ರಾಂಶುಪಾಲರಾದ ಡಾ.ಭದ್ರಪ್ಪ ಹೇಳಿದರು.
ಬಿದರಹಳ್ಳಿಯಲ್ಲಿ ನಡೆದ ಲೇಖಕ ಧನಂಜಯ ಜೀವಾಳ ಅವರ ಗ್ರಾಮಾಯಣ ಭಾಗ ೧ ಮತ್ತು ೨ ಪುಸ್ತಕ ಹಾಗೂ ಇದನ್ನೆಲ್ಲಾ ನಿಮಗೆ ಹೇಳಲು ತೇಜಸ್ವಿ ನನಗೆ ನಿಮಿತ್ತ ಎಂಬ ಆಡಿಯೋ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜೀವಾನುಭವದ ಸಹಜವಾದ ಸ್ಪಂದನ ಈ ಕೃತಿಯಲ್ಲಿ ಅಕ್ಷರಗಳಾಗಿವೆ. ಮರ‍್ನಾಲ್ಕು ಕಾದಂಬರಿಗಳಿಗಾಗುವಷ್ಟು ವಸ್ತು ವಿಷಯಗಳು ಈ ಕೃತಿಯಲ್ಲಿವೆ. ಗತಿಸಿ ಹೋದ ಮಲೆನಾಡಿನ ಜನಜೀವನ ಸಂಸ್ಕೃತಿಯನ್ನು ದಾಖಲಿಸುವ ಕಾರ್ಯ ಅತ್ಯಂತ ಅಗತ್ಯವಾಗಿ ಆಗಬೇಕಿದೆ. ಆಯಾ ಭಾಗದ ಪ್ರಾದೇಶಿಕ ಶ್ರೀಮಂತಿಕೆಯನ್ನು ಉಳಿಸಿಕೊಳ್ಳಬೇಕಿದೆ ಎಂದರು.
ಲೇಖಕರು ಹಾಗೂ ವಿಮರ್ಶಕರಾದ ಡಾ.ಎಚ್.ಎಸ್. ಸತ್ಯನಾರಾಯಣ ಮಾತನಾಡಿ, ಧನಂಜಯ ಜೀವಾಳ ಅವರು ಗ್ರಾಮಾಯಣ ಕೃತಿಯ ಮೂಲಕ ಮಲೆನಾಡಿನ ಹಿನ್ನಲೆಯ ಗ್ರಾಮ ಭಾರತವನ್ನು ಕಟ್ಟಿಕೊಟ್ಟಿದ್ದಾರೆ. ಗ್ರಾಮ ಸಂಸ್ಕೃತಿಯ ವಿವರಗಳು ಈ ಕೃತಿಯಲ್ಲಿ ದಟ್ಟವಾಗಿದೆ. ಎಂದರು.
ಲೇಖಕರು ಹಾಗೂ ಸಂಶೋದಕರಾದ ಪ್ರದೀಪ್ ಕೆಂಜಿಗೆ ಮಾತನಾಡಿ ಬದಲಾದ ಕಾಲಮಾನದಲ್ಲಿ ತಂತ್ರಜ್ಞಾನದ ಜೊತೆಗೆ ಹೆಜ್ಜೆ ಹಾಕಬೇಕಿದೆ. ಆಡಿಯೋ ಪುಸ್ತಕಗಳು ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಆಡಿಯೋ ಪುಸ್ತಕಗಳು ಕೂಡ ಪರಿಣಾಮಕಾರಿಯಾಗಿ ಕೇಳುವ ವರ್ಗವನ್ನು ತಲುಪುತ್ತವೆ ಎಂದರು.
ಹಿರಿಯ ಜಾನಪದ ತಜ್ಞರಾದ ಕಾಳೇಗೌಡ ನಾಗವಾರ ಮಾತನಾಡಿದರು.
ಈ ಸಂದರ್ಭದಲ್ಲಿ ಲೇಖಕ ಧನಂಜಯ ಜೀವಾಳ, ಧ್ವನಿ ಕಲಾವಿದರಾದ ಎನ್. ಲೀಲಾವತಿ, ಭಾಗ್ಯ, ವನಜ ಸುರೇಶ್, ಡಾ.ಯತೀಶ್ವರ್, ಮಮತ, ಸಾಹಿತಿಗಳಾದ ಹಳೆಕೋಟೆ ರಮೇಶ್, ಕಸಾಪ ತಾಲ್ಲೂಕು ಅಧ್ಯಕ್ಷ ಶಾಂತಕುಮಾರ್, ಕಸಾಪ ಪದಾಧಿಕಾರಿಗಳಾದ ಮಗ್ಗಲಮಕ್ಕಿ ಗಣೇಶ್, ಪ್ರಕಾಶ್, ಎಂ.ಎಸ್ ನಾಗರಾಜ್, ಪ್ರಸನ್ನ ಗೌಡಹಳ್ಳಿ, ಮಂಜುನಾಥ್ ಸ್ವಾಮಿ, ಪೂರ್ಣೇಶ್ ಮತ್ತಾವರ ಮುಂತಾದವರು ಇದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ