ಶುಕ್ರವಾರ, ಜುಲೈ 24, 2026

ಜಾನಪದದಿಂದ ಭಾರತೀಯ ಸಂಸ್ಕೃತಿ ಜೀವಂತ. ಸಾಹಿತಿ ಹಳೆಕೋಟೆ ರಮೇಶ್ ಅಭಿಮತ


ಕೊಟ್ಟಿಗೆಹಾರ:ಜಾನಪದದಿಂದ ಭಾರತೀಯ ಸಂಸ್ಕೃತಿ ಜೀವಂತವಾಗಿದ್ದು  ಜನಪದ ಸಮಾಜದ ಅಂಕುಡೊಂಕು ಗಳನ್ನು  ತಿದ್ದುವುದಲ್ಲದೆ ಸ್ವಾಸ್ಥ್ಯ  ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸಾಹಿತಿ ಹಳೇಕೋಟೆ ರಮೇಶ್ ಹೇಳಿದರು.
ಮೂಡಿಗೆರೆ ತಾಲ್ಲೂಕು ಕರ್ನಾಟಕ ಜಾನಪದ ಪರಿಷತ್ತು ಮತ್ತು ಚಿಕ್ಕಮಗಳೂರು ಜಿಲ್ಲಾ ಘಟಕ ವತಿಯಿಂದ ಹೊರಟ್ಟಿ ಗ್ರಾಮದ ಕನ್ನಡ ಹೋರಾಟಗಾರರಾದ ಹೊರಟ್ಟಿ ರಘು ಅವರ ಮನೆಯಂಗಳದಲ್ಲಿ ನಡೆದ ಜಾನಪದ ಜಗುಲಿ-ಮನೆಯಂಗಳದಿ  ಜಾನಪದರ ಸಂಗೀತ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಭ್ರಮಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೃಷಿಕ ವರ್ಗ ಮತ್ತು ಮಹಿಳೆಯರಿಂದ ಜಾನಪದ ಕಲೆ, ಸಾಹಿತ್ಯ, ಸಂಗೀತ ಸಮೃದ್ದವಾಗಿ ಬೆಳೆದು  ಬಂದಿದೆ. ಇಂದಿನ ಯುವಕ ಯುವತಿಯರು ಅವುಗಳನ್ನು ಪೋಷಿಸಿ ಮುಂದಿನ ತಲೆಮಾರಿಗೆ ತಲುಪಿಸುವ ಕಾರ್ಯ ಮಾಡಬೇಕಿದೆ ಎಂದರು.

ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಜಿ ಬಿ ಸುರೇಶ್ ಮಾತನಾಡಿ ಭಾರತೀಯ ಕಲೆ ಸಾಹಿತ್ಯ ಸಂಗೀತ ಸಂಸ್ಕೃತಿಗೆ ಜಾನಪದ ಸಂಸ್ಕೃತಿಯ ಕೊಡುಗೆ ಅಪಾರ. ಎಲ್ಲಾ ರೀತಿಯ ಕಲೆಗಳಿಗೆ ಜಾನಪದವೇ ತಾಯಿ ಬೇರು. ಜಾನಪದಕ್ಕೆ ನೈತಿಕ ಮತ್ತು ಜಾತ್ಯತೀತ ಮನೋಭಾವನೆಯನ್ನು ಬೆಳೆಸುವ ಶಕ್ತಿ ಇದೆ. ಇದು ಮನಸ್ಸಿಗೆ ಶಾಂತಿ ಮತ್ತು ಮನರಂಜನೆಯನ್ನು ನೀಡುವುದಲ್ಲದೆ ಮನುಷ್ಯನಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸುತ್ತದೆ ಎಂದರು.

ಪತ್ರಕರ್ತರಾದ ಮಗ್ಗಲಮಕ್ಕಿ ಗಣೇಶ್ ಮಾತನಾಡಿ, ಕನ್ನಡ ಮತ್ತು ಜಾನಪದ ಸಾಹಿತ್ಯ ಕ್ಷೇತ್ರಕ್ಕೆ ಕನ್ನಡಪರ ಹೋರಾಟಗಾರ ಹೊರಟ್ಟಿ ರಘು ರವರ ಸೇವೆ ಅಪಾರ. ಕನ್ನಡವನ್ನು ಜೀವಂತವಾಗಿಡಲು ಅವರ ವಾಹನಗಳಿಗೆ ಕನ್ನಡ ಬಾವುಟವನ್ನು ಕಟ್ಟಿ ಎಲ್ಲೆಡೆ ಸಂಚರಿಸುವ ಮೂಲಕ ಕನ್ನಡಾಭಿಮಾನವನ್ನು ಪಸರಿಸುತ್ತಿದ್ದಾರೆ. ನಶಿಸಿ ಹೋಗುತ್ತಿರುವ ಜಾನಪದ ಕಲೆ ಸಾಹಿತ್ಯ ಸಂಗೀತವನ್ನು ತಳಮಟ್ಟದಲ್ಲಿ ಸಂಘಟಿಸಲು ಸಕ್ರಿಯವಾಗಿ ಕರ್ನಾಟಕ ಜಾನಪದ ಪರಿಷತ್ತು  ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ  ವಿಚಾರವಾಗಿದೆ ಎಂದರು.
ಕನ್ನಡ ಪರ ಹೋರಾಟಗಾರ ಹೊರಟ್ಟಿ ರಘು  ಮಾತನಾಡಿ ಇಂದಿನ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಜಾನಪದ ಕಲೆ ಸಾಹಿತ್ಯ ಸಂಗೀತ ಜೀವಂತವಾಗಿ ಉಳಿದಿದೆ. ಅದನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯ ಬೇಕಾದರೆ ಪ್ರತಿ  ಕುಟುಂಬದ ಹಿರಿಯರು ಅವರ ಮಕ್ಕಳಿಗೆ ಅದರ ಜ್ಞಾನ ಮತ್ತು ಉಪಯೋಗವನ್ನು ಹೇಳಿ  ಕೊಡಬೇಕಾಗಿದೆ ಎಂದರು.

ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ನವೀನ್, ಸಾಹಿತಿ ಎಂ.ಎಸ್ ನಾಗರಾಜ್, ಕರ್ನಾಟಕ ಜಾನಪದ ಪರಿಷತ್ತು ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಕುನ್ನಳ್ಳಿ ರವಿ, ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣಗೌಡ, ಉಪಾಧ್ಯಕ್ಷ ಚಂದ್ರೇಗೌಡ, ಗೌರವಾಧ್ಯಕ್ಷ ಸುಬ್ರಹ್ಮಣ್ಯ, ಮೂಡಿಗೆರೆ ತಾಲೂಕು ಕಸಾಪ ಅಧ್ಯಕ್ಷ ಲಕ್ಷ್ಮಣ್ ಗೌಡ ಕಸಾಪ ಮಾಜಿ ಅಧ್ಯಕ್ಷ ಶಾಂತಕುಮಾರ್, ದೀಪಿಕಾ, ಕೋಮರಾಜು, ಚಂದ್ರೇಶ, ಲೋಕೇಶ್ ಮುಂತಾದವರು ಇದ್ದರು.

ಗುರುವಾರ, ಜುಲೈ 16, 2026

ಚೆಸ್ ಕ್ರೀಡಾಕೂಟದಲ್ಲಿ ಸುವಿಧ್ ಪಿ ಪ್ರಥಮ

ಕೊಟ್ಟಿಗೆಹಾರ:ವಲಯ ಮಟ್ಟದ ಚೆಸ್ ಕ್ರೀಡಾಕೂಟದಲ್ಲಿ ಬಣಕಲ್‌ನ ನಜರೆತ್ ಶಾಲೆಯ ವಿದ್ಯಾರ್ಥಿ ಸುವಿಧ್ ಪಿ ಪ್ರಥಮ ಸ್ಥಾನ ಪಡೆದಿದ್ದಾನೆ.

 ಉಡುಪಿ ಜಿಲ್ಲೆಯ ಶಿರೂರಿನ ಗ್ರೀನ್ ವ್ಯಾಲಿ ಶಾಲೆಯಲ್ಲಿ ನಡೆದ ೭ ಜಿಲ್ಲೆಗಳನ್ನೊಳಗೊಂಡ ೧೪ರ ವಯೋಮಾನದ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾನೆ. ಸುವಿಧ್, ಶಿಕ್ಷಕ ಹಾಗೂ ಲೇಖಕ ಪೂರ್ಣೇಶ್ ಮತ್ತಾವರ ಮತ್ತು ಶಿಕ್ಷಕಿ ರೇಖಾಪೂರ್ಣೇಶ್ ದಂಪತಿಗಳ ಪುತ್ರ. ವಿದ್ಯಾರ್ಥಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ಚಿಕಿತ್ಸೆಗೆ ನೆರವಿನ ನಿರೀಕ್ಷೆಯಲ್ಲಿ ಬಡಕುಟುಂಬ


ಕೊಟ್ಟಿಗೆಹಾರ:ತಲೆಯೊಳಗೆ ಗೆಡ್ಡೆಯಾಗಿ ಚಿಕಿತ್ಸೆ ಪಡೆಯಲು ಹಣವಿಲ್ಲದೇ ಗಬ್ಗಲ್ ಗ್ರಾಮದ ಕುಟುಂಬವೊಂದು ದಾನಿಗಳಿಂದ ಚಿಕಿತ್ಸೆಗೆ ನೆರವಿನ ನಿರೀಕ್ಷೆಯಲ್ಲಿದೆ.
ಗಬ್ಗಲ್ ಗ್ರಾಮದ ಬಡಕುಟುಂಬದ ಗುಲಾಬಿ ಎಂಬುವವರು ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಕುಟುಂಬ ಚಿಕಿತ್ಸೆಗೆ ಹಣವಿಲ್ಲದೇ ಸಾಲ ಮಾಡಿ ಗುಲಾಬಿ ಅವರಿಗೆ ಚಿಕಿತ್ಸೆಗೆ ಕೊಡಿಸುತ್ತಿದ್ದು ಮುಂದಿನ ಚಿಕಿತ್ಸೆಗೆ ಹಣವಿಲ್ಲದೇ ಕೈ ಚೆಲ್ಲಿ ಕುಳಿತಿದೆ.

ಗುಲಾಬಿ ಅವರಿಗೆ ಕೆಲ ವರ್ಷದಿಂದ ಮಾತು ತೊದಲುವುದು, ನಡೆಯಲು ಸಾಧ್ಯವಾಗದೇ ಇರುವುದು, ಕಿವಿ ಕೇಳಿಸದೇ ಇರುವುದು, ದೃಷ್ಠಿ ಮಂಜಾಗುವ ಲಕ್ಷಣಗಳು ಕಾಣಿಸಿಕೊಂಡಿದ್ದು ಬಾಳೆಹೊನ್ನೂರು, ಮಾಗುಂಡಿ ಮುಂತಾದ ಸ್ಥಳೀಯ ಆಸ್ಪತ್ರೆಗೆ ತೋರಿಸಿದ್ದಾರೆ. ಆದರೂ ಕೂಡ ರೋಗ ಕಡಿಮೆಯಾಗದೇ ಇರುವುದರಿಂದ ಶಿವಮೊಗ್ಗ ಮತ್ತು ಪಡೀಲಿನ ಆಸ್ಪತ್ರೆಗೆ ಹೋದಾಗ ಪರಿಶೀಲಿಸಿದ ವೈದ್ಯರು, ಎಡ ಕಿವಿ ಸ್ವಲ್ಪ ಮೇಲೆ ತಲೆಯ ಒಳಭಾಗದಲ್ಲಿ ಗೆಡ್ಡೆ ಇದ್ದು ಶಸ್ತçಚಿಕಿತ್ಸೆ ಮಾಡಬೇಕು ಎಂದು ತಿಳಿಸಿದ್ದಾರೆ. ಇದಕ್ಕೆ ಸುಮಾರು 3 ಲಕ್ಷ ವೆಚ್ಚವಾಗಲಿದ್ದು ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವಂತಾಗಿದೆ,
ಗುಲಾಬಿ ಅವರ ಗಂಡ ವರ್ಷದ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗುಲಾಬಿ ಅವರಿಗೆ 8ನೇ ತರಗತಿ ಓದುವ ಮಗ ಮತ್ತು 6ನೇ ತರಗತಿ ಓದುವ ಮಗಳಿದ್ದಾಳೆ. ಗುಲಾಬಿ ಅವರ ತಾಯಿ ಹಾಗೂ ಅವರ ಕುಟುಂಬದವರು ಗುಲಾಬಿ ಅವರನ್ನು ನೋಡಿಕೊಳ್ಳುತ್ತಿದ್ದು ಚಿಕಿತ್ಸೆಗೆ ದಾನಿಗಳಿಂದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ನೆರವು ನೀಡುವ ದಾನಿಗಳು ಗುಲಾಬಿ ಅವರ ಕರ್ನಾಟಕ ಬ್ಯಾಂಕ್ ನ ಬಾಳೆಹೊನ್ನೂರು ಶಾಖೆಯ ಖಾತೆ ಸಂಖ್ಯೆ:5382500100803601, ಐಎಫ್‌ಎಸ್‌ಸಿ ಕೋಡ್:ಕೆಎಆರ್‌ಬಿ0000052ಗೆ ಹಣ ಸಂದಾಯ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ 7338628023 ಸಂಖ್ಯೆಗೆ ಸಂರ್ಪಕಿಸಬಹುದಾಗಿದೆ.

ಬುಧವಾರ, ಜೂನ್ 24, 2026

ಪರಿಸರ ಸಮತೋಲನದಲ್ಲಿ ಮಳೆಕಾಡುಗಳ ಪಾತ್ರ ಅಪಾರ

ಕೊಟ್ಟಿಗೆಹಾರ:ಪರಿಸರ ಸಮತೋಲನದಲ್ಲಿ ಮಳೆಕಾಡುಗಳ ಪಾತ್ರ ಹೊಂದಿದ್ದು ಮಳೆಕಾಡುಗಳ ಸಂರಕ್ಷಣೆ ನಮ್ಮೆಲರ ಹೊಣೆಯಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಬೋರಯ್ಯ ಹೇಳಿದರು.
ಅರಣ್ಯ ಇಲಾಖೆ ವತಿಯಿಂದ ಕೊಟ್ಟಿಗೆಹಾರದ ಕೆ.ಪಿಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ನಡೆದ ವಿಶ್ವ ಮಳೆಕಾಡುಗಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅತಿಯಾದ ಮಾನವನ ಹಸ್ತಕ್ಷೇಪ ಹಾಗೂ ಕೈಗಾರೀಕರಣ, ಅಕ್ರಮ ಮರ ಕಡಿತಲೆ ಇತ್ಯಾದಿ ಕಾರಣಗಳಿಂದಾಗಿ ಮಳೆಕಾಡುಗಳು ಅಪಾಯದ ಅಂಚಿನಲ್ಲಿವೆ. ಪಶ್ಚಿಮಘಟ್ಟಗಳ ಸಾಲಿನಲ್ಲಿರುವ ಮಳೆಕಾಡುಗಳ ಸಂರಕ್ಷಣೆಗೆ ಎಲ್ಲರೂ ಅರಣ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದರು.

ಮೂಡಿಗೆರೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಆಕರ್ಷ್ ಟಿ.ಎಂ ಮಾತನಾಡಿ, ಮಳೆ ಕಾಡುಗಳ ಸಂರಕ್ಷಣೆಯಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಬೇಕಿದೆ. ಮಳೆಕಾಡುಗಳ ಸಂರಕ್ಷಣೆ ಹಾಗೂ ರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಮುತ್ತೋಡಿ ವಲಯದ ಉಪ ವಲಯ ಅರಣ್ಯಾಧಿಕಾರಿಗಳಾದ ಕುಮಾರ್ ಬಿ ಮಾತನಾಡಿ ಭೂಮಿಯ ಹವಾಮಾನ ನಿಯಂತ್ರಣ, ಆಮ್ಲಜನಕ ಉತ್ಪಾದನೆ ಮತ್ತು ಜೀವವೈವಿಧ್ಯತೆಯ ಸಂರಕ್ಷಣೆಗೆ ಮಳೆಕಾಡುಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಮಳೆ ಕಾಡುಗಳ ಸಂರಕ್ಷಣೆ ಕುರಿತ ಜಾಗೃತಿಗೆ ಮಳೆಕಾಡು ಗಳ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಎಟಿಡಬ್ಲೂö್ಯಎಎಸ್ ಸಂಸ್ಥೆಯ ರಿಂಕಲ್ ಲೋಬೊ ಮಾತನಾಡಿ, ವನ್ಯಜೀವಿಗಳ ನೈಸರ್ಗಿಕ ಆವಾಸಸ್ಥಾನಗಳನ್ನು ರಕ್ಷಿಸುವುದು, ಜೀವವೈವಿಧ್ಯತೆಯನ್ನು ಕಾಪಾಡುವುದು ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿ ಸಸ್ಯಗಳನ್ನು ಉಳಿಸುವುದು ಎಲ್ಲರ ಆದ್ಯತೆ ಆಗಬೇಕು ಎಂದರು.
ಬಣಕಲ್ ಉಪ ವಲಯ ಅರಣ್ಯಾಧಿಕಾದಿ ರಂಜಿತ್ ಪ್ರಾಸ್ತಾವಿಕ ನುಡಿಗಳನಾಡಿದರು. ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಮಂಜುನಾಥ್, ತರುವೆ ಏಕಲವ್ಯ ಮಾದರಿ ವಸತಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಅರಣ್ಯ ಇಲಾಖೆ ಸಿಬ್ಬಂದಿಗಳು ಇದ್ದರು. ಎ.ವಿ ಮನು ಸ್ವಾಗತಿಸಿ, ಆದರ್ಶ್ ವಿ.ಎಸ್ ನಿರೂಪಿಸಿದರು.

ಬುಧವಾರ, ಜೂನ್ 17, 2026

ಚಿನ್ನದ ಪದಕ ಪಡೆದ ಡಾ.ಪೂಜಾ ಬಿ.ಜಿ


ಕೊಟ್ಟಿಗೆಹಾರ:ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ೨೮ನೇ ಘಟಿಕೋತ್ಸವದಲ್ಲಿ ಆಯುರ್ವೇದ ವೈದ್ಯಕೀಯ ಕ್ಷೇತ್ರದಲ್ಲಿ ಕಾಯಚಿಕಿತ್ಸಾ ಸ್ನಾತಕೋತ್ತರ ವಿಭಾಗದಲ್ಲಿ ಕೊಟ್ಟಿಗೆಹಾರ ಬಿನ್ನಡಿಯ ಡಾ.ಪೂಜಾ ಬಿ.ಜಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆದ ೨೮ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಮತ್ತು ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರಿಂದ ಚಿನ್ನದ ಪದಕವನ್ನು ಸ್ವೀಕರಿಸಿದರು. 
ಡಾ.ಪೂಜಾ ಅವರು ತರುವೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಸುಶೀಲ ಮತ್ತು ಗೋಪಾಲ್ ಬಿನ್ನಡಿ ಅವರ ಪುತ್ರಿ. 

ಗುರುವಾರ, ಜೂನ್ 11, 2026

ಜೂನ್ 13 ರಂದು ಮಾನಸಿಕ ಒತ್ತಡ ನಿರ್ವಹಣೆ ಉಪನ್ಯಾಸ


ಕೊಟ್ಟಿಗೆಹಾರ:ಪದ್ಮಶ್ರೀ ಪ್ರಶಸ್ತಿ ವಿಜೇತ ಖ್ಯಾತ ಮನೋವೈದ್ಯರಾದ ಡಾ. ಸಿ.ಆರ್‍.ಚಂದ್ರಶೇಖರ್‍ ಅವರು ಜೂನ್ 13 ರಂದು ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡ, ಕಲಿಕೆಗೆ ಸವಾಲು, ನಿರ್ವಹಣೆ ಮತ್ತು ಪರಿಹಾರ ಈ ವಿಷಯವಾಗಿ ಉಪನ್ಯಾಸ ಮತ್ತು ಸಂವಾದ ನಡೆಸಿಕೊಡಲಿದ್ದಾರೆ ಎಂದು ಚಿಕ್ಕಮಗಳೂರಿನ ಕದ್ರಿಮಿದ್ರಿಯ ಕುವೆಂಪು ವಿದ್ಯಾನಿಕೇತನ ಸಂಸ್ಥೆಯ ಕಾರ್ಯದರ್ಶಿ ಕೆ.ಸಿ ಶಂಕರ್‍ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಆಧುನಿಕ, ಯಾಂತ್ರಿಕ ವಾತಾವರಣದಲ್ಲಿ ಮಾನಸಿಕ ಒತ್ತಡ ನಿರ್ವಹಣೆಯು ಸುಗಮ ಕಲಿಕೆಗೆ ತುಂಬಾ ಮುಖ್ಯ. ಕಲಿಕಾ ಪ್ರಕ್ರಿಯೆಯಲ್ಲಿ ಪಾಲುದಾರರಾದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮಾನಸಿಕ ಒತ್ತಡ ಸಮಸ್ಯೆಯನ್ನು ಸಮಗ್ರವಾಗಿ ಮತ್ತು ವೈಜ್ಞಾನಿಕವಾಗಿ ತಿಳಿದುಕೊಳ್ಳುವುದು ತುಂಬಾ ಮುಖ್ಯ.  ಈ ಹಿನ್ನಲೆಯಲ್ಲಿ ಕದ್ರಿಮಿದ್ರಿಯ ಕುವೆಂಪು ವಿದ್ಯಾನಿಕೇತನ ಸಂಸ್ಥೆಯಲ್ಲಿ ಜೂನ್ 13 ರಂದು ಮನೋವೈದ್ಯರಾದ ಡಾ. ಸಿ.ಆರ್‍.ಚಂದ್ರಶೇಖರ್‍ ಅವರು ಮಾತನಾಡಲಿದ್ದಾರೆ ಎಂದರು.

ಈ ಕಾರ್ಯಕ್ರಮದ ಸದುಪಯೋಗವನ್ನು ಶಿಕ್ಷಕರು ಪಡೆದುಕೊಳ್ಳಬಹುದಾಗಿದ್ದು ಪ್ರತಿ ಶಾಲೆಯ ಇಬ್ಬರು ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.  ಹೆಚ್ಚಿನ ಮಾಹಿತಿಗೆ 9482381758 ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಶುಕ್ರವಾರ, ಏಪ್ರಿಲ್ 17, 2026

ತರಿಮಲೆಯಲ್ಲಿ ವಿಜೃಂಭಣೆಯಿಂದ ನಡೆದ ಕಲಾವಳಿ ಉತ್ಸವ


ತರಿಮಲೆಯಲ್ಲಿ ವಿಜೃಂಭಣೆಯಿಂದ ನಡೆದ ಕಲಾವಳಿ ಉತ್ಸವ
ಕೊಟ್ಟಿಗೆಹಾರ:ತರುವೆ ಸಮೀಪದ ಆದಿಸ್ಥಾನ ತರಿಮಲೆಯಲ್ಲಿ ವಾರ್ಷಿಕ ಕಲಾವಳಿ ಉತ್ಸವ ವಿಜೃಂಭಣೆಯಿಂದ ನಡೆಯಿತು.

ಉತ್ಸವದ ಅಂಗವಾಗಿ ಆದಿಸ್ಥಾನವನ್ನು ತಳಿರು ತೋರಣ ಪುಷ್ಪಾಲಂಕಾರಗಳಿಂದ ಸಿಂಗರಿಸಲಾಗಿತ್ತು. ಭಕ್ತಾದಿಗಳು ಹಣ್ಣು ಕಾಯಿ ಹಾಗೂ ಹರಕೆಯನ್ನು ದೇವರಿಗೆ ಅರ್ಪಿಸಿ ದೇವರ ದರ್ಶನ ಪಡೆದರು. ೧೨ ಪ್ರಧಾನ ದೇವತೆಗಳಿಗೆ ಎಡೆ ಅರ್ಪಿಸಿ ೧೦೧ ದೈವಗಳಿಗೆ ಪಂಜಿನ ದೀಪವನ್ನು ಬೆಳಗಲಾಯಿತು. ಏಪ್ರಿಲ್ ೧೪ ರಿಂದ ಉತ್ಸವ ಪ್ರಾರಂಭವಾಗಿದ್ದು ಶ್ರೀಚೌಡೇಶ್ವರಿ ದೇವಸ್ಥಾನದಲ್ಲಿ ಕಲಾಹೋಮ, ಕಲಶ ಪೂಜೆ, ಪಟ್ಟದಾರಣೆ ಪೂಜೆ, ಕುಂಕುಮಾರ್ಚನೆ, ಹೂವಿನ ಪೂಜೆ, ನೈವೇದ್ಯ ಪೂಜೆ, ದೀಪಾರಾಧನೆ ಪೂಜೆ, ಮಹಾ ಮಂಗಳಾರತಿ, ಹಣ್ಣುಕಾಯಿ ಪ್ರಸಾದ ವಿನಿಯೋಗ ನಡೆಯಿತು. ತರುವೆ, ಕೊಟ್ಟಿಗೆಹಾರ, ಬೆಂಗಳೂರು, ಹಾಸನ, ಶಿವಮೊಗ್ಗ, ಬಳ್ಳಾರಿ, ಮೈಸೂರು ಸೇರಿದಂತೇ ವಿವಿದೆಡೆಯಿಂದ ನೂರಾರು ಭಕ್ತಾಧಿಗಳು ಆಗಮಿಸಿದ್ದರು. ಪೂಜಾ ವಿಧಿವಿಧಾನಗಳು ವಿಜೃಂಭಣೆಯಿಂದ ಶಾಸ್ತ್ರೋಕ್ತವಾಗಿ ನಡೆಯಿತು. ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಟಿ.ಎಂ ರಾಮಚಂದ್ರಗೌಡ ಹಾಗೂ ಪದಾಧಿಕಾರಿಗಳು ಇದ್ದರು.

ಬುಧವಾರ, ಏಪ್ರಿಲ್ 8, 2026

ಕನ್ನಡದ ಸಂಯೋಜಕ ಪ್ರತಿಭೆ ತೇಜಸ್ವಿ


ಕೊಟ್ಟಿಗೆಹಾರ:ಪೋಟೋಗ್ರಾಫಿ, ಫಿಶಿಂಗ್, ಪೈಂಟಿಂಗ್, ಸಾಹಿತ್ಯ ಹೀಗೆ ನಾನಾ ಬಗೆಯ ಆಸಕ್ತಿ ಕುತೂಹಲಗಳಿದ್ದ ತೇಜಸ್ವಿ ಅವರು ಕನ್ನಡದ ಸಂಯೋಜಕ ಪ್ರತಿಭೆ ಎಂದು ವಿಮರ್ಶಕ, ಲೇಖಕ ಡಾ.ಎಚ್.ಎಸ್.ಸತ್ಯನಾರಾಯಣ ಹೇಳಿದರು.
ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ನಡೆದ ಮೂರು ದಿನದ ಛಾಯಾಗ್ರಹಣ ಕಾರ್ಯಾಗಾರದಲ್ಲಿ ತೇಜಸ್ವಿಯವರ ಕ್ಯಾಮರಾ ಕಣ್ಣು ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ಒಂದು ಸನ್ನಿವೇಶದ ಅರ್ಥಪೂರ್ಣತೆಗೆ ಅಗತ್ಯವಾದ ವಿಶಿಷ್ಟ ವಿವರಗಳನ್ನು ಗ್ರಹಿಸೋದನ್ನು ಪೋಟೋಗ್ರಫಿ ಹೇಳಿಕೊಡುತ್ತದೆ. ವಿಸ್ತಾರವಾದ ಅಸ್ತವ್ಯಸ್ತವಾದ ಜಗತ್ತನ್ನು ಒಂದು ಚೌಕಟ್ಟಿನೊಳಗೆ ನೋಡುವುದನ್ನು ಪೋಟೋಗ್ರಫಿ ಕಲಿಸುತ್ತದೆ. ವಾಸ್ತವ ಜಗತ್ತಿನ ಸರ್ವೇಸಾಧಾರಣ ದೃಶ್ಯ ಚೌಕಟ್ಟಿನೊಳಗೆ ನೋಡಿದಾಗ ವಿಶಿಷ್ಠವಾಗಿ ಕಾಣುತ್ತದೆ ಎಂಬುದು ಛಾಯಾಗ್ರಾಹಣದ ಕುರಿತ ತೇಜಸ್ವಿ ಅವರ ಮಾತು ಎಂದರು.

ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಪ್ರದೀಪ್ ಕೆಂಜಿಗೆ ಮಾತನಾಡಿ, ತೇಜಸ್ವಿ ಪ್ರತಿಷ್ಠಾನದಲ್ಲಿ ತೇಜಸ್ವಿ ಅವರ ಆಸಕ್ತಿಯ ವಿಷಯಗಳ ಕುರಿತು ಕುತೂಹಲ ಆಸಕ್ತಿ ಮೂಡಿಸುವ ವಾತಾವರಣವನ್ನು ನಿರ್ಮಿಸುವತ್ತ ಹೆಚ್ಚು ಆದ್ಯತೆ ನೀಡಲಾಗಿದೆ ಎಂದರು.

ತೇಜಸ್ವಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿಗಳು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ ರಮೇಶ್ ಮಾತನಾಡಿ, ಪೋಟೋಗ್ರಫಿ ಕಾರ್ಯಾಗಾರವು ಛಾಯಾಗ್ರಹಣದಲ್ಲಿ ಆಸಕ್ತಿರುವವರಿಗೆ ಉಪಯುಕ್ತವಾಗಿದೆ. ಕ್ಯಾಮರಾ ಬಳಸುವ ಬಗೆ, ತಾಂತ್ರಿಕ ವಿವರಗಳು ಮುಂತಾದವುಗಳನ್ನು ತಿಳಿದುಕೊಳ್ಳಲು ಈ ಕಾರ್ಯಾಗಾರ ಉಪಯುಕ್ತವಾಗಿದೆ ಎಂದರು.

ತೇಜಸ್ವಿ ಒಡನಾಡಿ ಮತ್ತು ಕಲಾವಿದ ಬಾಪುದಿನೇಶ್ ಮಾತನಾಡಿ ತೇಜಸ್ವಿ ಅವರ ಪೋಟೊಗ್ರಫಿ ಹವ್ಯಾಸ ಪ್ರತಿಯೊಂದನ್ನು ಹೊಸ ದೃಷ್ಟಿಕೋನದಿಂದ ನೋಡುವುದನ್ನು ಕಲಿಸಿದೆ. ಅವರ ದೃಷ್ಟಿಕೋನ ಅವರ ಬರಹಗಳನ್ನು ಪ್ರಭಾವಿಸಿದೆ ಎಂದರು. ಛಾಯಾಗ್ರಾಹಕ ಶಿವಕುಮಾರ್ ಹಿರೇಗೌಜ ಮಾತನಾಡಿ ತೇಜಸ್ವಿ ಪ್ರತಿಷ್ಠಾನದಲ್ಲಿ ತೇಜಸ್ವಿ ಅವರ ಆಸಕ್ತಿಗೆ ಸಂಬಂದಿಸಿದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.

 ಸಂಪನ್ಮೂಲ ವ್ಯಕ್ತಿಗಳಾದ ಛಾಯಾಗ್ರಾಹಕರಾದ ಬೆಂಗಳೂರಿನ ಆನಂದ್‌ಕುಮಾರ್ ಮಾತನಾಡಿ, ತೇಜಸ್ವಿಯವರು ಪೋಟೋಗ್ರಫಿಯನ್ನು ಕೇವಲ ತಾಂತ್ರಿಕ ಕೌಶಲ್ಯವಾಗಿ ಅಲ್ಲ, ಬದುಕಿನೊಂದಿಗೆ ಪ್ರಕೃತಿಯೊಂದಿಗೆ ಸಂವಾದವಾಗಿ ನೋಡುತ್ತಿದ್ದರು.ಕಾರ್ಯಾಗಾರದ ಪ್ರತಿ ಅಧ್ಯಾಯವೂ ತಾತ್ವಿಕ ಚರ್ಚೆಯಿಂದ ಹಿಡಿದು ಪ್ರಾಯೋಗಿಕ ಚಿತ್ರಣದವರೆಗೆ ತೇಜಸ್ವಿಯವರ ಚಿಂತನೆಯನ್ನು ಪ್ರತಿನಿಧಿಸುತ್ತಿತ್ತು ಎಂದರು.

 ಹೊಸಪೇಟೆಯ ಪಂಪಯ್ಯ ಮಳೇಮಠ ಮಾತನಾಡಿ, ಪಕ್ಷಿ ವೀಕ್ಷಣೆ ಮತ್ತು  ಛಾಯಾಗ್ರಹಣಕ್ಕೆ ತಾಳ್ಮೆ ಮತ್ತು ಮೌನದಿಂದ ಇರಬೇಕಾಗುತ್ತದೆ. ಕ್ಯಾಮರಾದಲ್ಲಿ ಪಕ್ಷಿಗಳ ಪೋಟೋ ತೆಗೆಯುತ್ತಾ ಅವುಗಳ ಅದ್ಬುತ ಜಗತ್ತು ನಮ್ಮ ಮುಂದೆ ತೆರೆದುಕೊಳ್ಳುತ್ತದೆ ಎಂದರು. 

ಕ ಬೆಂಗಳೂರು, ಮೈಸೂರು, ಗದಗ, ತುಮಕೂರು, ಹುಬ್ಬಳ್ಳಿ ಮುಂತಾದ ಜಿಲ್ಲೆಗಳಿಂದ ಆಗಮಿಸಿದ್ದ 25 ಶಿಬಿರಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಮೂರು ದಿನಗಳ ಕಾಲ ನಡೆದ ಕಾರ್ಯಾಗಾರದಲ್ಲಿ ಬೇಸಿಕ್ ಪೋಟೋಗ್ರಫಿ, ಲ್ಯಾಂಡ್‌ಸ್ಕೇಪ್ ಛಾಯಾಗ್ರಹಣ, ಕ್ಯಾಮರಾ ಬಳಕೆ ಸಂಯೋಜನೆ, ಪೋಟೋ ಎಡಿಟಿಂಗ್ ಕುರಿತು ತಿಳಿಸಿಕೊಡಲಾಯಿತು.

 ಸಂತೆಯ ಚಿತ್ರಣ, ಗ್ರಾಮೀಣ ಜೀವನದ ಛಾಯಾಗ್ರಹಣ, ಪ್ರಕೃತಿ ನಡಿಗೆ ನಡೆಯಿತು.
ಈ ಸಂದರ್ಭದಲ್ಲಿ ತೇಜಸ್ವಿ ಪ್ರತಿಷ್ಠಾನದ ತಾಂತ್ರಿಕ ಸಹಾಯಕ ಪ್ರಜ್ವಲ್, ಕೀಟ ತಜ್ಞ ಡಾ.ಅವಿನಾಶ್, ಲೇಖಕ ಪೂರ್ಣೇಶ್ ಮತ್ತಾವರ, ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸತೀಶ್ ತರುವೆ, ಸಂಗೀತಾ ತರುವೆ, ಸುದಿತ್, ಪೂರ್ಣೇಶ್ ಮುಂತಾದವರು ಇದ್ದರು.

ಗುರುವಾರ, ಮಾರ್ಚ್ 26, 2026

ಡಾ.ಪ್ರದೀಪ್ ಕೆಂಜಿಗೆ ಅವರ ಕೃತಿಗೆ ಕನ್ನಡ ಸಾಹಿತ್ಯ ಅಕಾಡೆಮಿ ಅತ್ಯುತ್ತಮ ಪುಸ್ತಕ ಪ್ರಶಸ್ತಿ


ಕೊಟ್ಟಿಗೆಹಾರ:ಲೇಖಕರಾದ ಡಾ.ಪ್ರದೀಪ್ ಕೆಂಜಿಗೆ ಅವರ ನರವಾನರ ಕೃತಿಗೆ ಕನ್ನಡ ಸಾಹಿತ್ಯ ಅಕಾಡೆಮಿಯಿಂದ ಕೊಡಮಾಡುವ ಅತ್ಯುತ್ತಮ ಪುಸ್ತಕ ಪ್ರಶಸ್ತಿ ದೊರೆತಿದೆ.
2024ರಲ್ಲಿ ಪ್ರಕಟವಾದ ವಿವಿಧ 17 ಸಾಹಿತ್ಯ ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯಗಳನ್ನು ಆಧರಿಸಿ ಅತ್ಯುತ್ತಮ ಕೃತಿಗಳೆಂದು ಪರಿಗಣಿಸಿ ಆಯ್ಕೆ ಮಾಡಲಾಗಿದ್ದು ಸಂಕೀರ್ಣ ಪ್ರಕಾರದಲ್ಲಿ ಡಾ.ಪ್ರದೀಪ್ ಕೆಂಜಿಗೆ ಅವರ ನರವಾನರ ಕೃತಿಗೆ ಅತ್ಯುತ್ತಮ ಪುಸ್ತಕ ಪ್ರಶಸ್ತಿ ದೊರೆತಿದೆ. ಪ್ರಶಸ್ತಿ 25 ಸಾವಿರ ನಗದು ಬಹುಮಾನ, ಫಲಕ ಪ್ರಮಾಣ ಪತ್ರವನ್ನು ಒಳಗೊಂಡಿದೆ.
ನರವಾನರ ಕೃತಿ ಚಿಂಪಾAಜಿಗಳ ನಡವಳಿಕೆ, ಜೀವನವಿಧಾನ ಮುಂತಾದವುಗಳನ್ನು ವಿಶ್ಲೇಷಿಸುವ ವೈಜ್ಞಾನಿಕ ಕೃತಿಯಾಗಿದ್ದು ಜೀವ ವಿಜ್ಞಾನದ ಸಂಶೋಧನೆಗಳನ್ನು, ಹಲವಾರು ವಿಸ್ಮಯಕಾರಿ ಸಂಗತಿಗಳನ್ನು ಮನಮುಟ್ಟುವಂತೇ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
 ಡಾ.ಪ್ರದೀಪ್ ಕೆಂಜಿಗೆ ಅವರು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರೊಡನೆ ಪ್ಯಾಪಿಲಾನ್ 1. 2, ವಿಸ್ಮಯ 1 2 3 ಕೃತಿಗಳನ್ನು ರಚಿಸಿದ್ದು ಪ್ಯಾಪಿಯೋನ್ 3, ಬರ್ಮುಡಾ ಟ್ರೆöÊಂಗಲ್, ಅದ್ಭುತಯಾನ, ಹೆಬ್ಬಾವಿನೊಡನೆ ಹೋರಾಟ ಕೃತಿಯನ್ನು ಸಹ ಪ್ರಕಟಿಸಿದ್ದಾರೆ. ಪಶ್ಚಿಮ ಘಟ್ಟಗಳ ಜೀವ ವೈವಿಧ್ಯತೆ ಹಾಗೂ ಅದರ ಮೇಲೆ ಕ್ರಿಮಿನಾಶಕಗಳ ದುಷ್ಪರಿಣಾಮಗಳ ಅಧ್ಯಯನದಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಕೆಫೆ ಕಾಫಿ ಡೇಯಲ್ಲಿ ಸಂಶೋಧನಾ ಮತ್ತು ಅಭಿವೃದ್ದಿ ವಿಭಾಗದ ಮುಖ್ಯ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದಾರೆ.

ಗುರುವಾರ, ಮಾರ್ಚ್ 12, 2026

ರಂಗ ಪ್ರಯೋಗ ಕಲಾವಿದರಿಂದ ಅರ್ಜಿ ಆಹ್ವಾನ

ಚಿಕ್ಕಮಗಳೂರು:ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯಾದ್ಯಂತ ಪ್ರದರ್ಶಿಸಲು ಉದ್ದೇಶಿಸಿರುವ ವಚನ ಕಲ್ಯಾಣ ರಂಗ ಪ್ರಯೋಗಕ್ಕೆ ರಂಗ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಚಿಕ್ಕಮಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ ರಮೇಶ್ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ೯ ಗಂಟೆಗಳ ವಚನ ಕಲ್ಯಾಣ ಎಂಬ ಅಹೋರಾತ್ರಿ  ನಾಟಕ ಸಿದ್ದಪಡಿಸಿ ನಾಡಿನಾದ್ಯಂತ ಪ್ರದರ್ಶಿಸಲು ಉದ್ದೇಶಿಸಲಾಗಿದ್ದು ಆಸಕ್ತ ಯುವಕ, ಯುವತಿಯರು ಹಾಗೂ ಅನುಭವಿ ರಂಗ ಕಲಾವಿದರು ಮತ್ತು ಗಾಯಕರಿಂದ ಅರ್ಜಿ ಆಹ್ವಾನಿಸಲಾಗಿದೆ. ೧೮ ರಿಂದ ೪೦ ವರ್ಷದೊಳಗಿನ ರಂಗಶಿಕ್ಷಣದಲ್ಲಿ ತರಬೇತಿ ಪಡೆದ ಹಾಗೂ ನಾಟಕಗಳಲ್ಲಿ ಅಭಿನಯಿಸಿದ ಕಲಾವಿದರಿಗೆ ಆದ್ಯತೆ ನೀಡಲಾಗುವುದು. ಭರ್ತಿ ಮಾಡಿದ ಅರ್ಜಿಗಳನ್ನು ಮಾ.೨೦ರೊಳಗೆ ಸದಸ್ಯ ಕಾರ್ಯದರ್ಶಿ, ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ ಬೆಂಗಳೂರು-೫೬೦೦೫೬ ಇಲ್ಲಿಗೆ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.

ಭಾನುವಾರ, ಜನವರಿ 4, 2026

ಎರಡು ದಶಕದ ನಂತರ ಒಂದಾದ ಸಹಪಾಠಿಗಳು, ಪ್ರಾರ್ಥನೆ, ಹಾಜರಾತಿ,ಪಾಠ: ಮತ್ತೆ ಮರುಕಳಿಸಿದ ಶಾಲಾ ದಿನಗಳು: ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದ ಸ್ನೇಹಸಮ್ಮೀಲನ

 ಬಣಕಲ್:ಇಪ್ಪತ್ತು ವರ್ಷದ ಹಿಂದೆ ಬಣಕಲ್ ಪ್ರೌಢಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಮತ್ತೆ ಅದೇ ಶಾಲೆಯ ಕೊಠಡಿಯಲ್ಲಿ ಕುಳಿತಿದ್ದರು. 
ಅಂದು ಪಾಠ ಮಾಡಿದ ಶಿಕ್ಷಕರು ಬಂದು ಶಾಲೆಯ ಇದೇ ವಿದ್ಯಾರ್ಥಿಗಳ ಹಾಜರಾತಿ ಪುಸ್ತಕದ ತೆಗೆದು ಹಾಜರಾತಿ ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಪಾಠ ಮಾಡಿದರು.
 ಪ್ರಶ್ನೆಗಳನ್ನು ಕೇಳಿ ವಿದ್ಯಾರ್ಥಿಗಳಿಂದ ಉತ್ತರ ಪಡೆದುಕೊಂಡರು. ಎರಡು ದಶಕದ ಹಿಂದಿನ ಶಾಲೆಯ ನೆನಪನ್ನು ಮತ್ತೆ ಮೆಲುಕು ಹಾಕಿದರು. ಪ್ರಾರ್ಥನೆಗೆ ಸಾಲಾಗಿ ನಿಂತು ನಾಡಗೀತೆಗೆ ಧ್ವನಿಯಾದರು.
ಬಣಕಲ್ ಪ್ರೌಢಶಾಲೆಯ ೨೦೦೬-೨೦೦೮ರ ಬ್ಯಾಚ್‌ನ ವಿದ್ಯಾರ್ಥಿಗಳ ಸ್ನೇಹ ಸಮ್ಮೀಲನ ಮತ್ತು ಗುರು ವಂದನಾ ಕಾರ್ಯಕ್ರಮ ಇಂತಹ ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾಯಿತು.
 ೪೦ ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ನೆನಪನ್ನು ಮೆಲುಕು ಹಾಕಿದರು. ಶಿಕ್ಷಕರಾದ ಎನ್ ಚಂದ್ರಶೇಖರ್, ಪಿ ವಾಸುದೇವ್, ಜಿ.ಎಚ್ ಶ್ರೀನಿವಾಸ್, ವಲ್ಸಮ್ಮ, ಕವಿತಾ, ಸಿ ಬೋರಕ್ಕ, ಡಿ.ಎನ್ ಪ್ರವೀಣ್, ಉಮಾ ಮಹೇಶ್ ಅವರನ್ನು ಗೌರವಿಸಲಾಯಿತು.
 ಬೇರೆ ಬೇರೆ ಊರುಗಳಿಂದ ಬಂದ ವಿದ್ಯಾರ್ಥಿಗಳು ಎರಡು ದಶಕಗಳ ನಂತರ ಸಿಕ್ಕ ತಮ್ಮ ಸಹಪಾಠಿಗಳನ್ನು ಕಂಡು ಕುಶಲೋಪರಿ ವಿಚಾರಿಸಿದರು. ಶಾಲಾ ದಿನಗಳನ್ನು ನೆನಪಿಸಿಕೊಂಡರು. ನೌಕರಿ, ಮದುವೆ, ಮಕ್ಕಳು ಮುಂತಾದವುಗಳ ಬಗ್ಗೆ ಪರಿಚಯ ಮಾಡಿಕೊಂಡರು. ಬದುಕಿನ ಜಂಜಾಟಗಳಲ್ಲಿ ಮುಳುಗಿ ಹೋಗಿದ್ದ ವಿದ್ಯಾರ್ಥಿಗಳು ಮತ್ತೆ ಶಾಲೆಯ ಚಂದದ ದಿನಗಳನ್ನು ಕಳೆದ ಶಾಲೆಯಲ್ಲಿ ಮತ್ತೆ ಸೇರಿ ಸಂತೋಷಪಟ್ಟರು.

 ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ವಿದೇಶದಲ್ಲಿ ನೌಕರಿಯಲ್ಲಿರುವ ಹಳೆಯ ವಿದ್ಯಾರ್ಥಿಗಳು ಗೂಗಲ್ ಮೀಟ್ ಮೂಲಕ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.
ಶಾಲೆಯ ಆವರಣದಲ್ಲಿ ತೆಂಗಿನ ಸಸಿಗಳನ್ನು ನೆಡಲಾಯಿತು. 
Water dispenser ನ್ನು ಶಾಲೆಗೆ ಕೊಡುಗೆಯಾಗಿ ನೀಡಲಾಯಿತು..
 ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಬಿ.ಎಲ್. ದಿವಾಕರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಈ ಸಂದರ್ಭದಲ್ಲಿ ಕೋಶಾಧಿಕಾರಿ ಬಿ.ಕೆ.ಪೃಥ್ವಿ, ನಿರ್ದೇಶಕರಾದ ಜಕವುಲ್ಲಾ, ಬಿ.ಎಸ್.ವಿಕ್ರಂ ೨೦೦೬-೨೦೦೮ರ ಬ್ಯಾಚ್‌ನ ವಿದ್ಯಾರ್ಥಿಗಳು ಮುಂತಾದವರು ಇದ್ದರು. 

ಸೋಮವಾರ, ಡಿಸೆಂಬರ್ 1, 2025

ತೇಜಸ್ವಿ ಪ್ರತಿಷ್ಠಾನದಲ್ಲಿ ಚಿಟ್ಟೆ ಉದ್ಯಾನವನ ವೀಕ್ಷಣೆಗೆ ಮುಕ್ತ


ಕೊಟ್ಟಿಗೆಹಾರ;ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಚಿಟ್ಟೆ ಉದ್ಯಾನವನ ವೀಕ್ಷಣೆಗೆ ಮುಕ್ತವಾಗಿದ್ದು ಚಿಟ್ಟೆಗಳಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ ಎಂದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಪ್ರದೀಪ್ ಕೆಂಜಿಗೆ ಹೇಳಿದರು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ಕೊಟ್ಟಿಗೆಹಾರದಲ್ಲಿ ನಡೆದ ಡಿಜಿಟಲ್ ಕನ್ನಡ ಫಾಂಟ್ ಕಾರ್ಯಾಗಾರ ಮತ್ತು ಕನ್ನಡ ಕೈಬರಹ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಚಿಟ್ಟೆ ಉದ್ಯಾನವನದಲ್ಲಿ ಚಿಟ್ಟೆಗಳಿಗೆ ಸಂಬಂಧಿಸಿದ ಅತಿಥೇಯ ಸಸ್ಯಗಳನ್ನು ನೆಡಲಾಗಿದ್ದು ಮಡ್ ಪಡ್ಲಿಂಗ್ ಮತ್ತು ಆಹಾರ ಪೂರಕಗಳನ್ನು ಮಾಡಲಾಗಿದೆ. ಚಿಟ್ಟೆಗಳ ಕುರಿತಾದ ಮಾಹಿತಿ ಫಲಕಗಳನ್ನು ಉದ್ಯಾನವನದಲ್ಲಿ ಹಾಕಲಾಗಿದ್ದು ಚಿಟ್ಟೆಗಳ ಜಗತ್ತಿನ ವಿವರಗಳು ಜ್ಞಾನಾಸಕ್ತರಿಗೆ ಸಿಗಲಿದೆ. ಆರ್ಕಿಡ್‌ಗಳ ಮಹತ್ವ ಮತ್ತು ಸಂರಕ್ಷಣೆಯ ಅರಿವು ಮೂಡಿಸುವ ಆರ್ಕಿಡ್ ಲೋಕ ಪ್ರಮುಖ ಆಕರ್ಷಣೆಯಾಗಿದೆ. ರಂಗಮಂದಿರ ಮತ್ತು ವಸತಿಗೃಹದ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳ್ಳಲಿದ್ದು ಕಾರ್ಯಾಗಾರ, ನಾಟಕ ಮುಂತಾದ ಚಟುವಟಿಕೆಗಳು ನಿರಂತರವಾಗಿ ನಡೆಯಲಿದೆ ಎಂದರು.
ತೇಜಸ್ವಿ ಪ್ರತಿಷ್ಠಾನದ ಸದಸ್ಯರಾದ ರವೀಶ್ ಬಸಪ್ಪ ಮಾತನಾಡಿ, ಕುತೂಹಲ, ಜೀವನ ಪ್ರೀತಿ, ಜೀವನೋತ್ಸಾಹವನ್ನು ಮಕ್ಕಳು ಬೆಳಸಿಕೊಳ್ಳಬೇಕು. ಬಹುಮುಖ ವ್ಯಕ್ತಿತ್ವದ ತೇಜಸ್ವಿ ಅವರ ಕೃತಿಗಳನ್ನು ಮಕ್ಕಳು ಓದಬೇಕು ಎಂದರು.
ತೇಜಸ್ವಿ ಪ್ರತಿಷ್ಠಾನದ ಸದಸ್ಯರಾದ ದೀಪಾ ಹಿರೇಗುತ್ತಿ ಮಾತನಾಡಿ, ತೇಜಸ್ವಿ ಅವರ ಮಿಲೇನಿಯಂ ಸರಣಿಯ ಪುಸ್ತಕಗಳು ಮಕ್ಕಳಲ್ಲಿ ಓದಿನ ಅಭಿರುಚಿಯನ್ನು ಬೆಳೆಸುತ್ತವೆ. ತೇಜಸ್ವಿ ಪ್ರತಿಷ್ಠಾನ ಬಹುಮುಖ ವ್ಯಕ್ತಿತ್ವದ ತೇಜಸ್ವಿ ಅವರ ಆಶಯಗಳನ್ನು ತಮ್ಮ ಕಾರ್ಯ ಚಟುವಟಿಕೆಗಳ ಮೂಲಕ ಸಕ್ರಿಯವಾಗಿಟ್ಟಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ.ರಮೇಶ್ ಮಾತನಾಡಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯನ್ನು ಬಲಿಷ್ಠವಾಗಿ ಬೆಳೆಸಲು ಸಾಧ್ಯವಾದರೇ ಮಾತ್ರ ಕನ್ನಡ ಭಾಷೆ ಉಳಿಯುತ್ತದೆ ಎಂಬುದು ತೇಜಸ್ವಿ ಅವರ ಅಭಿಪ್ರಾಯವಾಗಿತ್ತು. ಕನ್ನಡ ಭಾಷೆಯನ್ನು ತಂತ್ರಜ್ಞಾನಸ್ನೇಹಿ ಭಾಷೆಯಾಗಿಸಲು ಡಿಜಿಟಲ್ ಕನ್ನಡ ಫಾಂಟ್ ಕಾರ್ಯಾಗಾರದಂತಹ  ಕಾರ್ಯಕ್ರಮಗಳು  ಸಹಾಯಕ ಎಂದರು.
ಡಿಜಿಟಲ್  ಕನ್ನಡ ಫಾಂಟ್ ವಿನ್ಯಾಸಕಾರರಾದ ಮಂಜುನಾಥ್ ಆರ್, ಡಿಜಿಟಲ್ ಕನ್ನಡ ಫಾಂಟ್ ಕುರಿತು ಮಾಹಿತಿ ನೀಡಿದರು. ತೇಜಸ್ವಿ ಪ್ರತಿಷ್ಠಾನದ ಸದಸ್ಯ ರವೀಶ್ ಬಸಪ್ಪ ಅವರು, ೨೦೨೬ನೇ ಸಾಲಿನ ಕ್ಯಾಲೆಂಡರ್‌ನ ವಿನ್ಯಾಸ ಬಿಡುಗಡೆ ಮಾಡಿದರು. ಸದಸ್ಯರಾದ ದೀಪಾ ಹಿರೇಗುತ್ತಿ ಅವರು ಆರ್ಕಿಡ್ ಮಾಹಿತಿ ಫಲಕಗಳನ್ನು ಉದ್ಘಾಟನೆ ಮಾಡಿದರು. ತೇಜಸ್ವಿ ಪ್ರತಿಷ್ಠಾನದ ಆವರಣದಲ್ಲಿ ಕಂಡು ಬರುವ ಅಪರೂಪದ  ಚಿಟ್ಟೆಗಳ ಪರಿಚಯ ಫಲಕಗಳು ಮತ್ತು ಚಿಟ್ಟೆ ಉದ್ಯಾನ ಸಂಬಂಧಿಸಿದ ಮಾಹಿತಿ ಫಲಕವನ್ನು ಕಲಾವಿದರಾದ ಸುರೇಶ್ ಚಂದ್ರ ದತ್ತ ನೆರವೇರಿಸಿದರು. ಕೈ ಬರಹ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಿಜ್ಞಾನಿಗಳಾದ ಡಾ.ಸುಚಿತ್ರಕುಮಾರಿ, ಕೀಟ ತಜ್ಞ ಡಾ.ಅವಿನಾಶ್, ತೇಜಸ್ವಿ ಪ್ರತಿಷ್ಠಾನದ ತಾಂತ್ರಿಕ ಸಂಯೋಜಕ ಪ್ರಜ್ವಲ್, ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್ ತರುವೆ, ಪೂರ್ಣೇಶ್, ಸಂಗೀತಾ, ಸಿದ್ದಿಕ್, ಕಲಾವಿದರಾದ ಬಾಪು ದಿನೇಶ್, ಟಿ.ಡಿ ಸುರೇಶ್, ಸಾಮಾಜಿಕ ಕಾರ್ಯಕರ್ತ ಸಂಜಯಗೌಡ, ರೈತ ಮುಖಂಡ ಗುರುಶಾಂತಪ್ಪ, ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಕೈಬರಹ ಸ್ಪರ್ಧೆಯ ವಿಜೇತರು ಹಾಜರಿದ್ದರು.

ಸೋಮವಾರ, ನವೆಂಬರ್ 10, 2025

ತೇಜಸ್ವಿ ಪ್ರತಿಷ್ಠಾನದಿಂದ ಕನ್ನಡ ಕೈಬರಹ ಸ್ಪರ್ಧೆ


ಕೊಟ್ಟಿಗೆಹಾರ:೭೦ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ತೇಜಸ್ವಿ ಅವರಿಗೊಂದು ಪತ್ರ-ಕನ್ನಡ ಕೈ ಬರಹ ಸ್ಪರ್ಧೆಗೆ ಕೈ ಬರಹವನ್ನು ಆಹ್ವಾನಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ತೇಜಸ್ವಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿಗಳಾದ ಡಾ.ಸಿ.ರಮೇಶ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೈ ಬರಹ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಫರ್ಧಾರ್ಥಿಗಳು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರಿಗೆ ಕಾಲ್ಪನಿಕ ಪತ್ರವನ್ನು ತಮ್ಮ ಸ್ವಂತ ಕನ್ನಡ ಕೈ ಬರಹದಲ್ಲಿ ಬರೆಯಬೇಕು. ೧೮ ವರ್ಷದೊಳಗಿನ ಸ್ಪರ್ಧಿಗಳಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದ್ದು ಪತ್ರವನ್ನು ಎ೪ ಸೈಜಿನ ಹಾಳೆಯಲ್ಲಿ ಬರೆಯಬೇಕು. ಕೈ ಬರಹದ ಮೂಲ ಪ್ರತಿಯನ್ನೇ ಕಳುಹಿಸಬೇಕು. ಜೆರಾಕ್ಸ್ ಅಥವಾ ಪ್ರಿಂಟ್ ಪ್ರತಿಗಳನ್ನು ಸ್ವೀಕರಿಸಲಾಗುವುದಿಲ್ಲ . ಪತ್ರದೊಂದಿಗೆ ಪ್ರತ್ಯೇಕ ಹಾಳೆಯಲ್ಲಿ ಸ್ಪರ್ಧಿಗಳ ಪರಿಚಯ, ವಿಳಾಸ, ಮೊಬೈಲ್ ಸಂಖ್ಯೆಯನ್ನು ಬರೆದು ಆಧಾರ್ ಕಾರ್ಡ್ ನಕಲು, ಪಾಸ್ ಪೋರ್ಟ್ ಸೈಜಿನ ಭಾವಚಿತ್ರ ಮತ್ತು ಕೈ ಬರಹ ಸ್ಪರ್ಧಾರ್ಥಿಗಳದ್ದೇ ಎಂಬ ಕುರಿತ ಸ್ವಯಂ ಘೋಷಣಾ ಪತ್ರವನ್ನ ಲಗತ್ತಿಸಬೇಕು ಎಂದು ತಿಳಿಸಿದ್ದಾರೆ.
ಕೈ ಬರಹದ ಪತ್ರವನ್ನು ನವೆಂಬರ್ ೨೦ ರೊಳಗೆ ತಲುಪುವಂತೇ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ (ರಿ), ಕೊಟ್ಟಿಗೆಹಾರ ಅಂಚೆ, ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ-೫೭೭೧೧೩ ಈ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ತಲುಪಿಸಬಹುದು. ಅತ್ಯುತ್ತಮ ಕೈ ಬರಹ ಮತ್ತು ಅತ್ಯುತ್ತಮ ಪತ್ರ ಎಂಬ ಎರಡು ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಆಯ್ಕೆ ಮಾಡಲಾಗುತ್ತದೆ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದ್ದು ಪ್ರಥಮ ಬಹುಮಾನ ೫೦೦೦, ದ್ವಿತೀಯ ಬಹುಮಾನ ೩೦೦೦, ತೃತೀಯ ಬಹುಮಾನ ೨೦೦೦ ನಗದು ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ. ವಿಜೇತರ ಪಟ್ಟಿಯನ್ನು ನವೆಂಬರ್ ೨೫ ರ ಸಂಜೆ ೫ ಗಂಟೆಗೆ ತೇಜಸ್ವಿ ಪ್ರತಿಷ್ಠಾನದ ಅಧಿಕೃತ ಜಾಲತಾಣ @ಞಠಿಠಿಣಡಿusಣ ನಲ್ಲಿ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗೆ ೯೬೬೩೦೯೮೮೭೩, ೯೪೪೯೩೦೯೦೬೭ ಗೆ ಸಂರ್ಪಕಿಸಬಹುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗುರುವಾರ, ಸೆಪ್ಟೆಂಬರ್ 4, 2025

ಸೆಪ್ಟೆಂಬರ್ ೭ ರಂದು ಚಿಂತನ ಮಂಥನ ಸಭೆ


  ಚಿಕ್ಕಮಗಳೂರು:ಭಗೀರಥ ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ಸೆಪ್ಟೆಂಬರ್ ೭ ರ ಭಾನುವಾರ ಮೈಸೂರಿನಲ್ಲಿ ಚಿಂತನ ಮಂಥನ ಸಭೆ ನಡೆಯಲಿದೆ ಎಂದು ಭಗೀರಥ ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟ್ ನ  ಸದಸ್ಯರಾದ ಬೀರೂರಿನ ಶ್ರೀನಿವಾಸ ಬಿ.ಎನ್ ಮತ್ತು ಕಡೂರಿನ ಲಕ್ಕಪ್ಪ ಅವರು ತಿಳಿಸಿದ್ದಾರೆ.

ಈ ಬಗ್ಗೆ ಜಂಟಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು ಸಪ್ಟೆಂಬರ್ ೭ ರಂದು ಮೈಸೂರಿನ ಸರಸ್ವತಿಪುರಂನಲ್ಲಿರುವ ಉಪ್ಪಾರ ವಿದ್ಯಾರ್ಥಿ ನಿಲಯದಲ್ಲಿ ಟ್ರಸ್ಟಿನ ಆಡಳಿತ ಮಂಡಳಿ ಸಭೆ  ಮತ್ತು ಉಪ್ಪಾರ ಸಮಾಜದ ಬಂಧುಗಳೊAದಿಗೆ ಚಿಂತನ ಮಂಥನ ಸಭೆ ನಡೆಯಲಿದೆ. ಮ್ಯಾನೇಜಿಂಗ್ ಟ್ರಸ್ಟಿಗಳಾದ ಪಿ.ಶಿವಶಂಕರ್ ಅವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ ೧೧ ಗಂಟೆಗೆ ಚಿಂತನಾ ಮಂಥನ ಸಭೆ ನಡೆಯಲಿದ್ದು ಮಧ್ಯಾಹ್ನ  ೨ ಗಂಟೆಗೆ ಟ್ರಸ್ಟಿನ ಸರ್ವ ಸದಸ್ಯರ ಸಭೆ ನಡೆಯಲಿದೆ. ಈ ಸಭೆಗೆ ಸಮಾಜ ಭಾಂದವರು ಭಾಗವಹಿಸಿ ಸಮಾಜದ ಏಳಿಗೆಯ ಕುರಿತ ಚಿಂತನ ಮಂಥನ ಸಭೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದ್ದಾರೆ.
ಭಗೀರಥ ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟ್  ಉಪ್ಪಾರ ಸಮಾಜದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ಔದ್ಯೋಗಿಕ ಏಳಿಗೆಗೆ ಕಂಕಣಬದ್ದವಾಗಿದ್ದು ಸಮಾಜದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡುತ್ತಾ ಬಂದಿದೆ. ೨೦೨೪-೨೫ನೇ ಸಾಲಿನಲ್ಲಿ ವೈದ್ಯಕೀಯ, ಇಂಜಿನಿಯರಿಂಗ, ಆರ್ಯುವೇದಿಕ್, ಕೃಷಿ, ತೋಟಗಾರಿಕೆ, ಭಿ ಫಾರ್ಮಾ, ಪ್ಯಾರಾಮೆಡಿಕಲ್, ಬಿ ಎಡ್, ಕಾನೂನು, ಸ್ನಾತಕೋತರ ಕೋರ್ಸ್ಗಳನ್ನು ವ್ಯಾಸಂಗ ಮಾಡುತ್ತಿರುವ ರಾಜ್ಯದ ೪ ವಿವಿಧ ಜಿಲ್ಲೆಗಳಿಗೆ ಸೇರಿದ ೧೨೮ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಸುಮಾರು ಇಪ್ಪತ್ಮೂರು ಲಕ್ಷ ಆರ್ಥಿಕ ನೆರವನ್ನು ನೀಡಲಾಗಿದೆ. ಸಮಾಜ ಭಾಂದವರ ಸರ್ವಾಂಗೀಣ ಅಭಿವೃದ್ದಿಗೆ ಪೂರಕವಾಗಿ ಸೆಪ್ಟೆಂಬರ್ ೭ ರಂದು ನಡೆಯುವ ಸಭೆಯ ಕುರಿತ ಹೆಚ್ಚಿನ ಮಾಹಿತಿಗೆ ೯೮೪೪೫೯೦೬೨೪/೯೯೬೪೧೨೫೩೪೧ ಗೆ ಸಂರ್ಪಕಿಸಬಹುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶುಕ್ರವಾರ, ಆಗಸ್ಟ್ 15, 2025

ಶ್ರಮಜೀವಿ ಆಟೋ ಮಾಲೀಕರು ಮತ್ತು ಚಾಲಕರ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ


ಕೊಟ್ಟಿಗೆಹಾರ:ಸ್ವಾತಂತ್ರ್ಯ ತಂದು ಕೊಡಲು ಶ್ರಮಿಸಿದ ಸಾವಿರಾರು ಹೋರಾಟಗಾರರ ತ್ಯಾಗ ಬಲಿದಾನವನ್ನು ಸ್ಮರಿಸಬೇಕಿದೆ ಎಂದು ಬಣಕಲ್ ಪ್ರೌಢಶಾಲೆಯ ಮುಖ್ಯಶಿಕ್ಷಕ ಶ್ರೀನಿವಾಸ್ ಹೇಳಿದರು.
ಬಣಕಲ್‌ನ ಶ್ರಮಜೀವಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ನಡೆದ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಿಜ ಅರ್ಥದಲ್ಲಿ ಪೂರ್ಣ ಸ್ವಾತಂತ್ರ ಇನ್ನೂ ಸಿಕ್ಕಿಲ್ಲ. ಎಲ್ಲರಿಗೂ ಸಮನಾಗಿ ಸ್ವಾತಂತ್ರ್ಯವೂ ಸಿಗುವಂತಾಗಬೇಕಿದೆ. ರಾಷ್ಟ್ರೀಯ ಹಬ್ಬಗಳ ಆಚರಣೆ ಮಕ್ಕಳು ಸೇರಿದಂತೇ ಎಲ್ಲರಲ್ಲೂ ದೇಶಾಭಿಮಾನವನ್ನು ಹೆಚ್ಚಿಸಲು ವೇದಿಕೆಯಾಗಿದೆ ಎಂದರು.
ದಾನಿಗಳಾದ ಬಿ.ಎನ್.ದಿವ್ಯಪ್ರಸಾದ್ ಧ್ವಜರೋಹಣ ನೆರವೇರಿಸಿದರು. 
ಸಾಧಕರಾದ ಹಿಲಾರಿ ಜೋಸೆಫ್, ನಂದೀಶ್ ಬಂಕೇನಹಳ್ಳಿ, ಸೂರಿ ಬಣಕಲ್, ಮಾನವಿ ಬಗ್ಗಸಗೋಡು, ಶೇಖರ್ ಸಬ್ಲಿ ಮತ್ತು ದಾನಿಗಳಾದ ಬಿ.ಎನ್.ದೀಪಕ್, ಬಿ.ಎನ್.ದಿವ್ಯಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.
ಸ್ವಾತಂತ್ರ ದಿನಾಚರಣೆ ಅಂಗವಾಗಿ ಆಟೋಗಳನ್ನು ಆಕರ್ಷಕವಾಗಿ ಸಿಂಗರಿಸಲಾಯಿತು. ಬಣಕಲ್ ಪ್ರೌಢಶಾಲೆ ಮತ್ತು ರಿವರ್ ವ್ಯೂವ್ ಶಾಲೆಯ ವಿದ್ಯಾರ್ಥಿಗಳು ಬಣಕಲ್ ಮುಖ್ಯ ರಸ್ತೆಯಲ್ಲಿ ಮೆರವಣ ಗೆ ನಡೆಸಿದರು. 
ಈ ಸಂದರ್ಭದಲ್ಲಿ ಶ್ರಮಜೀವಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಸುರೇಶ್, ಗೌರವ ಅಧ್ಯಕ್ಷರಾದ ಸಬ್ಲಿ ದೇವರಾಜ್ ಹಾಗೂ ಪದಾಧಿಕಾರಿಗಳು ಇದ್ದರು.
ವಿವಿಧೆಡೆ ಸಂಭ್ರಮದ ಸ್ವಾತಂತ್ರ ದಿನಾಚರಣೆ: ಬಣಕಲ್‌ನಲ್ಲಿ ವಿವಿದೆಡೆ ಸ್ವಾತಂತ್ರ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಧ್ವಜಾರೋಹಣವನ್ನು ಬಣಕಲ್ ಗ್ರಾ.ಪಂಯಲ್ಲಿ ಅಧ್ಯಕ್ಷರಾದ ಜರೀನಾ, ವಿದ್ಯಾಭಾರತಿ ಶಾಲೆಯಲ್ಲಿ ಸವಿತಾ ಸಮಾಜದ ಅಧ್ಯಕ್ಷ ಹರೀಶ್ ಫಲ್ಗುಣ , ಬಣಕಲ್ ಪ್ರೌಢಶಾಲೆಯಲ್ಲಿ ಕೋಶಾಧಿಕಾರಿ ಬಿ.ಕೆ.ಪೃಥ್ವಿ, ನಜರೆತ್ ಶಾಲೆಯಲ್ಲಿ ಪೋಷಕರಾದ ಭವ್ಯಾಭಟ್ ನೆರವೇರಿಸಿದರು.

ಬುಧವಾರ, ಆಗಸ್ಟ್ 6, 2025

ಶಾಸಕರ ತೇಜೋವಧೆ ಸರಿಯಲ್ಲ:ಸಬ್ಲಿ ದೇವರಾಜ್

 ಬಣಕಲ್:ಮೂಡಿಗೆರೆ ಶಾಸಕರಾದ ನಯನ ಮೋಟಮ್ಮ ಅವರು ತಾಲ್ಲೂಕು ಗಣೇಶೋತ್ಸವ ಸಮಿತಿ ಲೋಗೋ ಮತ್ತು ಭಗವಾಧ್ವಜ ಸ್ತಂಭ ಸ್ಥಾಪನಾ ಕಾರ್ಯಕ್ರಮದಲ್ಲಿ ಕೇಸರಿ ಬಣ್ಣದ ಶಾಲು ಧರಿಸಿದ ಕಾರಣ ಶಾಸಕರನ್ನು ತೇಜೋವಧೆ ಮಾಡುವುದು ಸರಿಯಲ್ಲ ಎಂದು ತಾ.ಪಂ ಮಾಜಿ ಸದಸ್ಯರಾದ ಸಬ್ಲಿ ದೇವರಾಜು ಹೇಳಿದರು.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಾಸಕರಾಗಿ ಅವರು ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಶಾಸಕರಾದ ಮೇಲೆ ಒಂದು ಜಾತಿಗೆ, ಧರ್ಮಕ್ಕೆ ಹೇಗೆ ಸೀಮಿತರಾಗಲು ಸಾಧ್ಯ?. ಯಾವುದೇ ಧರ್ಮದ ಕಾರ್ಯಕ್ರಮದಲ್ಲ್ಲಿ ಆ ಧರ್ಮದ ಆಚರಣೆಯಂತೆಯೇ ಭಾಗವಹಿಸಬೇಕು ಅದು ಆ ಧರ್ಮಕ್ಕೆ ಕೊಡುವ ಗೌರವ. ಶಾಸಕರು ಮೊದಲಿನಿಂದಲೂ ದೇವರ ಮೇಲೆ ಅಪಾರ ಭಕ್ತಿ ಭಾವ ಹೊಂದಿರುವ ವ್ಯಕ್ತಿ. ಒಬ್ಬ ಶಾಸಕ ಹಿಂದೂ ಆಗಿರಲಿ, ಮುಸ್ಲಿಂ ಅಥವಾ ಕ್ರೈಸ್ತ ಅಥವಾ ಇನ್ನಾವುದೇ ಧರ್ಮದವರಾಗಿರಲಿ. ಇತರೆ ಧರ್ಮದ ಪೂಜೆ ಪುರಸ್ಕಾರ ಹಬ್ಬ ಹರಿದಿನಗಳಿಗೆ ಅವರ ಸಂಪ್ರದಾಯದಂತೆ ಭಾಗವಹಿಸಬೇಕು. ಅದು ಅಲ್ಲದೆ ಗಣೇಶ ಚತುರ್ಥಿ ಎಂಬುದು ಧರ್ಮ ಜಾತಿ ಮೀರಿ ನಡೆಯುವ ಹಬ್ಬವಾಗಿದೆ ಎಂದರು.
ಕೇಸರಿ ಬಣ್ಣದ ಶಾಲು ಯಾವುದೇ ಒಂದು ಸಂಘಟನೆಯ ಸ್ವತ್ತಲ್ಲ. ಮನೆಯ ಅಥವಾ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲರೂ ಕೇಸರಿ ಶಾಲನ್ನು ಧರಿಸುತ್ತಾರೆ. ಅದು ಸಹಜವೂ ಕೂಡ. ಅದರಲ್ಲಿ ತಪ್ಪು ಹುಡುಕುವ ಅಗತ್ಯವಿಲ್ಲ. ಒಬ್ಬ ಶಾಸಕರಿಂದ  ಜನರಿಗೆ ಸ್ಪಂದನೆ, ಸೌಲಭ್ಯ, ಅನ್ಯ ಜಾತಿ, ಧರ್ಮಗಳೊಂದಿಗೆ ಸೌಹಾರ್ದತೆ ಇದೆಯೇ ಎಂಬುದನ್ನು ಗಮನಿಸಬೇಕೇ ಹೊರತು ಈ ರೀತಿಯ ವಿಷಯಗಳನಲ್ಲ. ಶಾಸಕರು ತಾಲ್ಲೂಕು ಗಣೇಶೋತ್ಸವ ಸಮಿತಿಯ ಕಾರ್ಯಕ್ರಮದ ವೇದಿಕೆಯಲ್ಲಿ ಯಾವ ಧರ್ಮದ ಬಗ್ಗೆಯೂ ಕೂಡ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಹೀಗಿರುವಾಗ ಈ ವಿಚಾರದಲ್ಲಿ ತಪ್ಪು ಹುಡುಕುವುದರಲ್ಲಿ ಅರ್ಥವಿಲ್ಲ ಎಂದು ತಿಳಿಸಿದ್ದಾರೆ.

ಬುಧವಾರ, ಜೂನ್ 25, 2025

ವನ್ ಧನ್ ವಿಕಾಸ ಕೇಂದ್ರದ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಿ


ಬಣಕಲ್:ವನ್ ಧನ್ ವಿಕಾಸ ಕೇಂದ್ರದ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಸ್ವಾವಲಂಭಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಎನ್‌ಆರ್‌ಎಲ್‌ಎಂನ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶಾಲಿನಿ ಹೇಳಿದರು.
ಬಣಕಲ್ ಗ್ರಾ.ಪಂ ಸಭಾಂಗಣದಲ್ಲಿ ನಡೆದ ವಿಡಿವಿಕೆ ಮತ್ತು ಎಂಬ್ರಾಯಿಡರಿ ತರಬೇತಿ ಕುರಿತ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಮೀಣ ಮಹಿಳೆಯರ ಆರ್ಥಿಕ ಅಭಿವೃದ್ದಿ ಹಾಗೂ ಅರಣ್ಯ ಉತ್ಪನ್ನಗಳ ಮೌಲ್ಯವರ್ಧನೆಗಾಗಿ ಕೇಂದ್ರ ಸರ್ಕಾರದ ದೀನದಯಾಳ್ ಅಂತ್ಯೋದಯ ಯೋಜನೆಯ ರಾಷ್ಟೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಅಡಿಯಲ್ಲಿ ವನ್ ಧನ್ ವಿಕಾಸ್ ಕೇಂದ್ರಗಳು ಸ್ಥಾಪನೆಯಾಗಿವೆ. ಈ ಯೋಜನೆಯು ಮಹಿಳಾ ಸ್ವಸಹಾಯ ಗುಂಪುಗಳ ಮೂಲಕ ಪ್ರಾದೇಶಿಕ ಅರಣ್ಯ ಉತ್ಪನ್ನಗಳ ಸಂಗ್ರಹ, ಸಂಸ್ಕರಣೆ, ಪ್ಯಾಕೇಜಿಂಗ್ ಮತ್ತು ಮಾರಾಟಕ್ಕೆ ಅವಕಾಶ ನೀಡುತ್ತದೆ ಎಂದರು.
ಪಿಡಿಓ ಕೃಷ್ಣಪ್ಪ ಮಾತನಾಡಿ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು ಮಹಿಳೆಯರು ಆರ್ಥಿಕ ಸ್ವಾವಲಂಬನೆ ಪಡೆದುಕೊಳ್ಳಬಹುದಾಗಿದೆ. ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಕುಟುಂಬದ ಆದಾಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸಂಶುನ್ನಿಸ, ಎಫ್‌ಎಲ್‌ಸಿ ಉಮಾ, ಪ್ರಸಾದ್, ದೀಪಿಕಾ, ವಲಯ ಮೇಲ್ವಿಚಾರಕ ನಾಜೀಮ್, ಚೈತ್ರ ಬಣಕಲ್, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಇದ್ದರು.

ಸೋಮವಾರ, ಜೂನ್ 16, 2025

ಗುಂಡಿಗೆ ಬಿದ್ದು ಗಾಯಗೊಂಡಿದ್ದ ಜಿಂಕೆಯ ರಕ್ಷಣೆ

ಉದುಸೆ ಗ್ರಾಮದ ಮನೆಯೊಂದರ ಸಮೀಪ ನಿರ್ಮಾಣ ಹಂತದಲ್ಲಿದ್ದ ಶೌಚಾಲಯದ ಗುಂಡಿಗೆ ಬಿದ್ದು ಗಾಯಗೊಂಡಿದ್ದ ಜಿಂಕೆಯನ್ನು ರಕ್ಷಣೆ ಮಾಡಲಾಯಿತು.
ಉದುಸೆ ಗ್ರಾಮದ ಮನೆಯೊಂದರ ಬಳಿ ನಿರ್ಮಾಣ ಹಂತದಲ್ಲಿದ್ದ ಶೌಚಾಲಯದ ಗುಂಡಿಗೆ ಬಿದ್ದು ಜಿಂಕೆಯೊಂದು ಗಾಯಗೊಂಡಿದ್ದು ಕೂಡಲೇ ಸ್ಥಳೀಯರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ವಲಯ ಅರಣ್ಯಾಧಿಕಾರಿ ಕಾವ್ಯ, ಉಪವಲಯ ಅರಣ್ಯಾಧಿಕಾರಿ ರವಿರಾಜ್ ಜಿಂಕೆಯನ್ನು ರಕ್ಷಣೆ ಮಾಡಿದರು. ಬಣಕಲ್ ಪಶು ಆಸ್ಪತ್ರೆಯ ಪಶು ವೈದ್ಯಾಧಿಕಾರಿ ಡಾ.ಪೂಜಾ ಮತ್ತು ಸಹ ಪಶುವೈದ್ಯರಾದ ಡಾ.ಮಸಿಯಣ್ಣ ಗಾಯಗೊಂಡ ಜಿಂಕೆಗೆ ಚಿಕಿತ್ಸೆ ನೀಡಿದರು. ಚೇತರಿಸಿಕೊಂಡ ಜಿಂಕೆಯನ್ನು ಅರಣ್ಯಕ್ಕೆ ಬಿಡಲಾಯಿತು.
 ಈ ಸಂದರ್ಭದಲ್ಲಿ ಅರಣ್ಯ ಕ್ಷೇಮಾಭಿವೃದ್ದಿ ನೌಕರ ಉದಯ್ ಹಾಗೂ ಗ್ರಾ.ಪಂ ಸದಸ್ಯೆ ಇಂದ್ರಮ್ಮ ರಾಜೇಗೌಡ, ಗ್ರಾಮಸ್ಥ ಮಧು ಮುಂತಾದವರು ಇದ್ದರು.

ಮಂಗಳವಾರ, ಜೂನ್ 10, 2025

ತೇಜಸ್ವಿ ಪ್ರತಿಷ್ಠಾನದಲ್ಲಿ ಮೂಡಿಗೆರೆ ಸಿನಿಮಾಹಬ್ಬ

ಕೊಟ್ಟಿಗೆಹಾರ:ಜಾಗತಿಕ ಸಿನಿಮಾಗಳ ವೀಕ್ಷಣೆಯಿಂದ ಅರಿವನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯ ಐವಾನ್ ಡಿಸಿಲ್ವಾ ಹೇಳಿದರು.

ಮನುಜಮತ ಸಿನಿಯಾನ ಮತ್ತು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ಕೊಟ್ಟಿಗೆಹಾರದ ತೇಜಸ್ವಿ ಪ್ರತಿಷ್ಠಾನದಲ್ಲಿ ಎರಡು ದಿನಗಳ ಕಾಲ ನಡೆದ ಮೂಡಿಗೆರೆ ಸಿನಿಮಾಹಬ್ಬದಲ್ಲಿ ಭಾಗವಹಿಸಿ ಮಾತನಾಡಿದರು.
ಮನುಜಮತ ಸಿನಿಯಾನ ೨೦೧೬ ರಲ್ಲಿ ಜಾಗತಿಕ ಸಿನಿಮಾಗಳ ವೀಕ್ಷಣೆ ಮತ್ತು ಸಂವಾದಕ್ಕಾಗಿ ಹುಟ್ಟಿಕೊಂಡ ಸಿನಿಮಾಸಕ್ತರ ತಂಡ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಸ್ಥಳೀಯ ಸಿನಿಮಾಸಕ್ತರೊಂದಿಗೆ ಸೇರಿಕೊಂಡು ಎರಡು ದಿನಗಳ ನಿರ್ದಿಷ್ಟ ವಿಷಯಾಧಾರಿತ ಸಿನಿಮಾ ಹಬ್ಬಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ದೇಶೀಯ, ಅಂತರಾಷ್ಟೀಯ ಸಿನಿಮಾಗಳ ವೀಕ್ಷಣೆ, ಚರ್ಚೆ ಮತ್ತು ಸಂವಾದವನ್ನು ಏರ್ಪಡಿಸುವುದು, ಈ ಮೂಲಕ ಪ್ರಜ್ಞಾವಂತ ಪ್ರಬುದ್ದ ಸಿನಿಮಾ ವೀಕ್ಷಕರನ್ನು ಸೃಷ್ಟಿಸುವುದು ಮನುಜಮತ ಸಿನಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯರಾದ ಪ್ರದೀಪ್ ಕೆಂಜಿಗೆ ಮಾತನಾಡಿ, ಸಿನಿಮಾ ಮತ್ತು ನಾಟಕ ಮುಂತಾದ ಚಟುವಟಿಕೆಗಳಿಗೆ ಪೂರಕವಾಗಿರುವ ಸಭಾಂಗಣ ಮತ್ತು ವಸತಿಗೃಹ ನಿರ್ಮಾಣವಾಗುತ್ತಿದ್ದು ಕೆಲ ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಸಿನಿಮಾ ಪ್ರದರ್ಶನ, ನಾಟಕ, ವಿಚಾರ ಸಂಕಿರಣ, ಸಂವಾದ, ಕಾರ್ಯಾಗಾರಗಳು ನಿರಂತರವಾಗಿ ನಡೆಯಲಿದೆ ಎಂದರು.
ವನ್ಯಜೀವಿ ಛಾಯಾಗ್ರಾಹಕ ಡಾ.ಲೋಕೇಶ್ ಮೊಸಳೆ ಅವರಿಂದ ಸಿನಿಮಾದಲ್ಲಿ ಧ್ವನಿ ಬೆಳಕು, ಸಿನಿಮಾಟೋಗ್ರಫಿ ಕುರಿತ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ನಡೆಯಿತು. ಅಬ್ಬಾಸ್ ಅಮೀನಿ ನಿರ್ದೇಶನದ ಎಂಡ್ ಲೆಸ್ ಬಾಡರ‍್ಸ್, ಇಂಗ್ಮರ್ ಬರ್ಗ್ ಮೆನ್ ನಿರ್ದೇಶನದ ಶೇಮ್, ಎಲೆಮ್ ಕ್ಲಿಮೋವ್ ನಿರ್ದೇಶನದ ಕಮ್ ಆಂಡ್ ಸೀ ಸಿನಿಮಾ ಹಾಗೂ ಯುವಲ್ ಅವ್ರಹಾಮ್, ಬಾಸೆಲ್ ಅಡ್ರಾ ಮತ್ತು ಹಂದಾನ್ ಬಳ್ಳಾಲ್ ನಿರ್ದೇಶನದ ನೋ ಅದರ್ ಲ್ಯಾಂಡ್ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.
ಕಲಾವಿದ ಮತ್ತು ತೇಜಸ್ವಿ ಒಡನಾಡಿ ಬಾಪು ದಿನೇಶ್ ಮಾತನಾಡಿ, ಅಂತರಾಷ್ಟೀಯ ಸಿನಿಮಾಗಳ ವೀಕ್ಷಣೆಯಿಂದ ಆ ನೆಲದ ಜನಜೀವನ, ಸಂಕಷ್ಟ, ರಾಜಕೀಯದ ಚಿತ್ರಣ ನೋಡುಗರ ಎದೆಗೆ ದಾಟುತ್ತದೆ. ಸಿನಿಮಾ ಪರಿಣಾಮಕಾರಿ ಮಾಧ್ಯಮವಾಗಿದ್ದು ಹೊಸ ನೋಟವನ್ನು ನೀಡುತ್ತದೆ ಎಂದರು.
ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರಾದ ವಿಷ್ಣುಕುಮಾರ್, ದೇಶಾದ್ರಿ ಹೊಸಮನಿ, ಶಿವಮೊಗ್ಗ ಜಿಲ್ಲಾ ವಾರ್ತಾಧಿಕಾರಿ ಭಾಗ್ಯ ಕೆ.ಟಿ, ಕುವೆಂಪು ಭಾಷಾಪ್ರಾಧಿಕಾರದ ಸದಸ್ಯರಾದ ಭಾರತಿ ದೇವಿ, ಸಾಹಿತಿ ಹಾಗೂ ಸಿನಿಮಾ ಚಿತ್ರಕಥಾಕಾರರಾದ ಶಿಲ್ಪ ಕೆ.ಆರ್, ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿಗಳಾದ ಸತೀಶ್ ತರುವೆ, ಸಂಗೀತಾ, ಕೀಟ ತಜ್ಞರಾದ ಡಾ.ಅವಿನಾಶ್, ಲೇಖಕ ಪೂರ್ಣೇಶ್ ಮತ್ತಾವರ ಮುಂತಾದವರು ಇದ್ದರು.

ಮಂಗಳವಾರ, ಏಪ್ರಿಲ್ 22, 2025

ಬಣಕಲ್ ಸುತ್ತಮುತ್ತ ಭಾರಿ ಗಾಳಿ‌ ಮಳೆ:ಹಾರಿ ಹೋದ ಬಣಕಲ್ ವಿಧ್ಯಾಭಾರತಿ ಶಾಲೆಯ ಮೇಲ್ಛಾವಣಿ

 ಬಣಕಲ್:ಬಣಕಲ್ ಸುತ್ತಮುತ್ತ ಸೋಮವಾರ ರಾತ್ರಿ ಗಾಳಿ ಸಹಿತ ಭಾರಿ ಮಳೆಯಾಗಿದ್ದು ಮಳೆಯಿಂದಾಗಿ ಬಣಕಲ್ ಶ್ರೀವಿದ್ಯಾಭಾರತಿ ಶಾಲೆಯ ಕಬ್ಬಿಣದ ಮೇಲ್ಛಾವಣಿ ಹಾರಿ ಹೋಗಿದೆ.
 ಗಾಳಿ ಮಳೆಯ ತೀವ್ರತೆಯಿಂದಾಗಿ ಮೇಲ್ಛಾವಣಿಯ ಕಬ್ಬಿಣದ ಕಂಬಿಗಳು ಬಾಗಿದ್ದು ಗೋಡೆಗಳು ಬಿರುಕು ಬಿಟ್ಟಿದ್ದೆ. ಅಧೃಷ್ಟವಶಾತ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಸ್ಥಳಕ್ಕೆ ಶಾಲಾ ಸಮಿತಿಯ ಪದಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು
. ಈ ಸಂದರ್ಭದಲ್ಲಿಮಾತನಾಡಿದ ಶಾಲಾ ಸಮಿತಿಯ ಅಧ್ಯಕ್ಷರಾದ ಶಿವರಾಮ ಶೆಟ್ಟಿ ಮಾತನಾಡಿ, ಸಂಸದರ ಅನುದಾನದಲ್ಲಿ ನಿರ್ಮಿಸಲಾಗಿದ್ದ ಮೇಲ್ಛಾವಣಿ  ಗಾಳಿ ಮಳೆಯಿಂದ  ಹಾರಿ ಹೋಗಿ ಸುಮಾರು 4 ಲಕ್ಷ ನಷ್ಟ ಸಂಭವಿಸಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ ಅವರಿಗೂ ದುರಸ್ತಿ ಮಾಡಿ ಕೊಡುವಂತೇ ಮನವಿ ಮಾಡಲಾಗಿದೆ. ಶಾಲೆಗೆ ರಜೆ ಇದ್ದುದ್ದರಿಂದ ಮತ್ತು ರಾತ್ರಿ ಸಮಯದಲ್ಲಿ ಈ ಘಟನೆ ನಡೆದಿದ್ದುರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
 ಬಣಕಲ್ ನ ಶ್ರೀವಿದ್ಯಾಭಾರತಿ ಶಾಲೆಯೂ ಹಲವು ವರ್ಷಗಳಿಂದ ಶೇ 100 ಫಲಿತಾಂಶವನ್ನು ಪಡೆದುಕೊಂಡು ಬರುತ್ತಿದೆ. ಶಾಲೆಗೆ ಬರುವ ರಸ್ತೆಯೂ ಸಂಪೂರ್ಣ ಹಾಳಾಗಿದೆ. ಇದೀಗ ಶಾಲಾ ಕಟ್ಟಡದ ಮೇಲ್ಚಾವಣಿಯೂ ಹಾನಿಯಾಗಿದ್ದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನೆರವಿಗೆ ಬರಬೇಕಿದೆ. ಎಂದರು.
ಈ ಸಂದರ್ಭದಲ್ಲಿ ಶಾಲಾ ಸಮಿತಿಯ ಲಿಂಗಪ್ಪ ಹಾಗೂ ಶಿಕ್ಷಕರು ಇದ್ದರು‌.