ಕೊಟ್ಟಿಗೆಹಾರ:ಪೋಟೋಗ್ರಾಫಿ, ಫಿಶಿಂಗ್, ಪೈಂಟಿಂಗ್, ಸಾಹಿತ್ಯ ಹೀಗೆ ನಾನಾ ಬಗೆಯ ಆಸಕ್ತಿ ಕುತೂಹಲಗಳಿದ್ದ ತೇಜಸ್ವಿ ಅವರು ಕನ್ನಡದ ಸಂಯೋಜಕ ಪ್ರತಿಭೆ ಎಂದು ವಿಮರ್ಶಕ, ಲೇಖಕ ಡಾ.ಎಚ್.ಎಸ್.ಸತ್ಯನಾರಾಯಣ ಹೇಳಿದರು.
ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ನಡೆದ ಮೂರು ದಿನದ ಛಾಯಾಗ್ರಹಣ ಕಾರ್ಯಾಗಾರದಲ್ಲಿ ತೇಜಸ್ವಿಯವರ ಕ್ಯಾಮರಾ ಕಣ್ಣು ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಒಂದು ಸನ್ನಿವೇಶದ ಅರ್ಥಪೂರ್ಣತೆಗೆ ಅಗತ್ಯವಾದ ವಿಶಿಷ್ಟ ವಿವರಗಳನ್ನು ಗ್ರಹಿಸೋದನ್ನು ಪೋಟೋಗ್ರಫಿ ಹೇಳಿಕೊಡುತ್ತದೆ. ವಿಸ್ತಾರವಾದ ಅಸ್ತವ್ಯಸ್ತವಾದ ಜಗತ್ತನ್ನು ಒಂದು ಚೌಕಟ್ಟಿನೊಳಗೆ ನೋಡುವುದನ್ನು ಪೋಟೋಗ್ರಫಿ ಕಲಿಸುತ್ತದೆ. ವಾಸ್ತವ ಜಗತ್ತಿನ ಸರ್ವೇಸಾಧಾರಣ ದೃಶ್ಯ ಚೌಕಟ್ಟಿನೊಳಗೆ ನೋಡಿದಾಗ ವಿಶಿಷ್ಠವಾಗಿ ಕಾಣುತ್ತದೆ ಎಂಬುದು ಛಾಯಾಗ್ರಾಹಣದ ಕುರಿತ ತೇಜಸ್ವಿ ಅವರ ಮಾತು ಎಂದರು.
ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಪ್ರದೀಪ್ ಕೆಂಜಿಗೆ ಮಾತನಾಡಿ, ತೇಜಸ್ವಿ ಪ್ರತಿಷ್ಠಾನದಲ್ಲಿ ತೇಜಸ್ವಿ ಅವರ ಆಸಕ್ತಿಯ ವಿಷಯಗಳ ಕುರಿತು ಕುತೂಹಲ ಆಸಕ್ತಿ ಮೂಡಿಸುವ ವಾತಾವರಣವನ್ನು ನಿರ್ಮಿಸುವತ್ತ ಹೆಚ್ಚು ಆದ್ಯತೆ ನೀಡಲಾಗಿದೆ ಎಂದರು.
ತೇಜಸ್ವಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿಗಳು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ ರಮೇಶ್ ಮಾತನಾಡಿ, ಪೋಟೋಗ್ರಫಿ ಕಾರ್ಯಾಗಾರವು ಛಾಯಾಗ್ರಹಣದಲ್ಲಿ ಆಸಕ್ತಿರುವವರಿಗೆ ಉಪಯುಕ್ತವಾಗಿದೆ. ಕ್ಯಾಮರಾ ಬಳಸುವ ಬಗೆ, ತಾಂತ್ರಿಕ ವಿವರಗಳು ಮುಂತಾದವುಗಳನ್ನು ತಿಳಿದುಕೊಳ್ಳಲು ಈ ಕಾರ್ಯಾಗಾರ ಉಪಯುಕ್ತವಾಗಿದೆ ಎಂದರು.
ತೇಜಸ್ವಿ ಒಡನಾಡಿ ಮತ್ತು ಕಲಾವಿದ ಬಾಪುದಿನೇಶ್ ಮಾತನಾಡಿ ತೇಜಸ್ವಿ ಅವರ ಪೋಟೊಗ್ರಫಿ ಹವ್ಯಾಸ ಪ್ರತಿಯೊಂದನ್ನು ಹೊಸ ದೃಷ್ಟಿಕೋನದಿಂದ ನೋಡುವುದನ್ನು ಕಲಿಸಿದೆ. ಅವರ ದೃಷ್ಟಿಕೋನ ಅವರ ಬರಹಗಳನ್ನು ಪ್ರಭಾವಿಸಿದೆ ಎಂದರು. ಛಾಯಾಗ್ರಾಹಕ ಶಿವಕುಮಾರ್ ಹಿರೇಗೌಜ ಮಾತನಾಡಿ ತೇಜಸ್ವಿ ಪ್ರತಿಷ್ಠಾನದಲ್ಲಿ ತೇಜಸ್ವಿ ಅವರ ಆಸಕ್ತಿಗೆ ಸಂಬಂದಿಸಿದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಛಾಯಾಗ್ರಾಹಕರಾದ ಬೆಂಗಳೂರಿನ ಆನಂದ್‌ಕುಮಾರ್ ಮಾತನಾಡಿ, ತೇಜಸ್ವಿಯವರು ಪೋಟೋಗ್ರಫಿಯನ್ನು ಕೇವಲ ತಾಂತ್ರಿಕ ಕೌಶಲ್ಯವಾಗಿ ಅಲ್ಲ, ಬದುಕಿನೊಂದಿಗೆ ಪ್ರಕೃತಿಯೊಂದಿಗೆ ಸಂವಾದವಾಗಿ ನೋಡುತ್ತಿದ್ದರು.ಕಾರ್ಯಾಗಾರದ ಪ್ರತಿ ಅಧ್ಯಾಯವೂ ತಾತ್ವಿಕ ಚರ್ಚೆಯಿಂದ ಹಿಡಿದು ಪ್ರಾಯೋಗಿಕ ಚಿತ್ರಣದವರೆಗೆ ತೇಜಸ್ವಿಯವರ ಚಿಂತನೆಯನ್ನು ಪ್ರತಿನಿಧಿಸುತ್ತಿತ್ತು ಎಂದರು.
ಹೊಸಪೇಟೆಯ ಪಂಪಯ್ಯ ಮಳೇಮಠ ಮಾತನಾಡಿ, ಪಕ್ಷಿ ವೀಕ್ಷಣೆ ಮತ್ತು ಛಾಯಾಗ್ರಹಣಕ್ಕೆ ತಾಳ್ಮೆ ಮತ್ತು ಮೌನದಿಂದ ಇರಬೇಕಾಗುತ್ತದೆ. ಕ್ಯಾಮರಾದಲ್ಲಿ ಪಕ್ಷಿಗಳ ಪೋಟೋ ತೆಗೆಯುತ್ತಾ ಅವುಗಳ ಅದ್ಬುತ ಜಗತ್ತು ನಮ್ಮ ಮುಂದೆ ತೆರೆದುಕೊಳ್ಳುತ್ತದೆ ಎಂದರು.
ಕ ಬೆಂಗಳೂರು, ಮೈಸೂರು, ಗದಗ, ತುಮಕೂರು, ಹುಬ್ಬಳ್ಳಿ ಮುಂತಾದ ಜಿಲ್ಲೆಗಳಿಂದ ಆಗಮಿಸಿದ್ದ 25 ಶಿಬಿರಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಮೂರು ದಿನಗಳ ಕಾಲ ನಡೆದ ಕಾರ್ಯಾಗಾರದಲ್ಲಿ ಬೇಸಿಕ್ ಪೋಟೋಗ್ರಫಿ, ಲ್ಯಾಂಡ್‌ಸ್ಕೇಪ್ ಛಾಯಾಗ್ರಹಣ, ಕ್ಯಾಮರಾ ಬಳಕೆ ಸಂಯೋಜನೆ, ಪೋಟೋ ಎಡಿಟಿಂಗ್ ಕುರಿತು ತಿಳಿಸಿಕೊಡಲಾಯಿತು.
ಸಂತೆಯ ಚಿತ್ರಣ, ಗ್ರಾಮೀಣ ಜೀವನದ ಛಾಯಾಗ್ರಹಣ, ಪ್ರಕೃತಿ ನಡಿಗೆ ನಡೆಯಿತು.
ಈ ಸಂದರ್ಭದಲ್ಲಿ ತೇಜಸ್ವಿ ಪ್ರತಿಷ್ಠಾನದ ತಾಂತ್ರಿಕ ಸಹಾಯಕ ಪ್ರಜ್ವಲ್, ಕೀಟ ತಜ್ಞ ಡಾ.ಅವಿನಾಶ್, ಲೇಖಕ ಪೂರ್ಣೇಶ್ ಮತ್ತಾವರ, ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸತೀಶ್ ತರುವೆ, ಸಂಗೀತಾ ತರುವೆ, ಸುದಿತ್, ಪೂರ್ಣೇಶ್ ಮುಂತಾದವರು ಇದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ