ಬಣಕಲ್:ಮೂಡಿಗೆರೆ ಶಾಸಕರಾದ ನಯನ ಮೋಟಮ್ಮ ಅವರು ತಾಲ್ಲೂಕು ಗಣೇಶೋತ್ಸವ ಸಮಿತಿ ಲೋಗೋ ಮತ್ತು ಭಗವಾಧ್ವಜ ಸ್ತಂಭ ಸ್ಥಾಪನಾ ಕಾರ್ಯಕ್ರಮದಲ್ಲಿ ಕೇಸರಿ ಬಣ್ಣದ ಶಾಲು ಧರಿಸಿದ ಕಾರಣ ಶಾಸಕರನ್ನು ತೇಜೋವಧೆ ಮಾಡುವುದು ಸರಿಯಲ್ಲ ಎಂದು ತಾ.ಪಂ ಮಾಜಿ ಸದಸ್ಯರಾದ ಸಬ್ಲಿ ದೇವರಾಜು ಹೇಳಿದರು.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಾಸಕರಾಗಿ ಅವರು ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಶಾಸಕರಾದ ಮೇಲೆ ಒಂದು ಜಾತಿಗೆ, ಧರ್ಮಕ್ಕೆ ಹೇಗೆ ಸೀಮಿತರಾಗಲು ಸಾಧ್ಯ?. ಯಾವುದೇ ಧರ್ಮದ ಕಾರ್ಯಕ್ರಮದಲ್ಲ್ಲಿ ಆ ಧರ್ಮದ ಆಚರಣೆಯಂತೆಯೇ ಭಾಗವಹಿಸಬೇಕು ಅದು ಆ ಧರ್ಮಕ್ಕೆ ಕೊಡುವ ಗೌರವ. ಶಾಸಕರು ಮೊದಲಿನಿಂದಲೂ ದೇವರ ಮೇಲೆ ಅಪಾರ ಭಕ್ತಿ ಭಾವ ಹೊಂದಿರುವ ವ್ಯಕ್ತಿ. ಒಬ್ಬ ಶಾಸಕ ಹಿಂದೂ ಆಗಿರಲಿ, ಮುಸ್ಲಿಂ ಅಥವಾ ಕ್ರೈಸ್ತ ಅಥವಾ ಇನ್ನಾವುದೇ ಧರ್ಮದವರಾಗಿರಲಿ. ಇತರೆ ಧರ್ಮದ ಪೂಜೆ ಪುರಸ್ಕಾರ ಹಬ್ಬ ಹರಿದಿನಗಳಿಗೆ ಅವರ ಸಂಪ್ರದಾಯದಂತೆ ಭಾಗವಹಿಸಬೇಕು. ಅದು ಅಲ್ಲದೆ ಗಣೇಶ ಚತುರ್ಥಿ ಎಂಬುದು ಧರ್ಮ ಜಾತಿ ಮೀರಿ ನಡೆಯುವ ಹಬ್ಬವಾಗಿದೆ ಎಂದರು.
ಕೇಸರಿ ಬಣ್ಣದ ಶಾಲು ಯಾವುದೇ ಒಂದು ಸಂಘಟನೆಯ ಸ್ವತ್ತಲ್ಲ. ಮನೆಯ ಅಥವಾ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲರೂ ಕೇಸರಿ ಶಾಲನ್ನು ಧರಿಸುತ್ತಾರೆ. ಅದು ಸಹಜವೂ ಕೂಡ. ಅದರಲ್ಲಿ ತಪ್ಪು ಹುಡುಕುವ ಅಗತ್ಯವಿಲ್ಲ. ಒಬ್ಬ ಶಾಸಕರಿಂದ ಜನರಿಗೆ ಸ್ಪಂದನೆ, ಸೌಲಭ್ಯ, ಅನ್ಯ ಜಾತಿ, ಧರ್ಮಗಳೊಂದಿಗೆ ಸೌಹಾರ್ದತೆ ಇದೆಯೇ ಎಂಬುದನ್ನು ಗಮನಿಸಬೇಕೇ ಹೊರತು ಈ ರೀತಿಯ ವಿಷಯಗಳನಲ್ಲ. ಶಾಸಕರು ತಾಲ್ಲೂಕು ಗಣೇಶೋತ್ಸವ ಸಮಿತಿಯ ಕಾರ್ಯಕ್ರಮದ ವೇದಿಕೆಯಲ್ಲಿ ಯಾವ ಧರ್ಮದ ಬಗ್ಗೆಯೂ ಕೂಡ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಹೀಗಿರುವಾಗ ಈ ವಿಚಾರದಲ್ಲಿ ತಪ್ಪು ಹುಡುಕುವುದರಲ್ಲಿ ಅರ್ಥವಿಲ್ಲ ಎಂದು ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ