ಗುರುವಾರ, ಜುಲೈ 16, 2026

ಚೆಸ್ ಕ್ರೀಡಾಕೂಟದಲ್ಲಿ ಸುವಿಧ್ ಪಿ ಪ್ರಥಮ

ಕೊಟ್ಟಿಗೆಹಾರ:ವಲಯ ಮಟ್ಟದ ಚೆಸ್ ಕ್ರೀಡಾಕೂಟದಲ್ಲಿ ಬಣಕಲ್‌ನ ನಜರೆತ್ ಶಾಲೆಯ ವಿದ್ಯಾರ್ಥಿ ಸುವಿಧ್ ಪಿ ಪ್ರಥಮ ಸ್ಥಾನ ಪಡೆದಿದ್ದಾನೆ.

 ಉಡುಪಿ ಜಿಲ್ಲೆಯ ಶಿರೂರಿನ ಗ್ರೀನ್ ವ್ಯಾಲಿ ಶಾಲೆಯಲ್ಲಿ ನಡೆದ ೭ ಜಿಲ್ಲೆಗಳನ್ನೊಳಗೊಂಡ ೧೪ರ ವಯೋಮಾನದ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾನೆ. ಸುವಿಧ್, ಶಿಕ್ಷಕ ಹಾಗೂ ಲೇಖಕ ಪೂರ್ಣೇಶ್ ಮತ್ತಾವರ ಮತ್ತು ಶಿಕ್ಷಕಿ ರೇಖಾಪೂರ್ಣೇಶ್ ದಂಪತಿಗಳ ಪುತ್ರ. ವಿದ್ಯಾರ್ಥಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ಚಿಕಿತ್ಸೆಗೆ ನೆರವಿನ ನಿರೀಕ್ಷೆಯಲ್ಲಿ ಬಡಕುಟುಂಬ


ಕೊಟ್ಟಿಗೆಹಾರ:ತಲೆಯೊಳಗೆ ಗೆಡ್ಡೆಯಾಗಿ ಚಿಕಿತ್ಸೆ ಪಡೆಯಲು ಹಣವಿಲ್ಲದೇ ಗಬ್ಗಲ್ ಗ್ರಾಮದ ಕುಟುಂಬವೊಂದು ದಾನಿಗಳಿಂದ ಚಿಕಿತ್ಸೆಗೆ ನೆರವಿನ ನಿರೀಕ್ಷೆಯಲ್ಲಿದೆ.
ಗಬ್ಗಲ್ ಗ್ರಾಮದ ಬಡಕುಟುಂಬದ ಗುಲಾಬಿ ಎಂಬುವವರು ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಕುಟುಂಬ ಚಿಕಿತ್ಸೆಗೆ ಹಣವಿಲ್ಲದೇ ಸಾಲ ಮಾಡಿ ಗುಲಾಬಿ ಅವರಿಗೆ ಚಿಕಿತ್ಸೆಗೆ ಕೊಡಿಸುತ್ತಿದ್ದು ಮುಂದಿನ ಚಿಕಿತ್ಸೆಗೆ ಹಣವಿಲ್ಲದೇ ಕೈ ಚೆಲ್ಲಿ ಕುಳಿತಿದೆ.

ಗುಲಾಬಿ ಅವರಿಗೆ ಕೆಲ ವರ್ಷದಿಂದ ಮಾತು ತೊದಲುವುದು, ನಡೆಯಲು ಸಾಧ್ಯವಾಗದೇ ಇರುವುದು, ಕಿವಿ ಕೇಳಿಸದೇ ಇರುವುದು, ದೃಷ್ಠಿ ಮಂಜಾಗುವ ಲಕ್ಷಣಗಳು ಕಾಣಿಸಿಕೊಂಡಿದ್ದು ಬಾಳೆಹೊನ್ನೂರು, ಮಾಗುಂಡಿ ಮುಂತಾದ ಸ್ಥಳೀಯ ಆಸ್ಪತ್ರೆಗೆ ತೋರಿಸಿದ್ದಾರೆ. ಆದರೂ ಕೂಡ ರೋಗ ಕಡಿಮೆಯಾಗದೇ ಇರುವುದರಿಂದ ಶಿವಮೊಗ್ಗ ಮತ್ತು ಪಡೀಲಿನ ಆಸ್ಪತ್ರೆಗೆ ಹೋದಾಗ ಪರಿಶೀಲಿಸಿದ ವೈದ್ಯರು, ಎಡ ಕಿವಿ ಸ್ವಲ್ಪ ಮೇಲೆ ತಲೆಯ ಒಳಭಾಗದಲ್ಲಿ ಗೆಡ್ಡೆ ಇದ್ದು ಶಸ್ತçಚಿಕಿತ್ಸೆ ಮಾಡಬೇಕು ಎಂದು ತಿಳಿಸಿದ್ದಾರೆ. ಇದಕ್ಕೆ ಸುಮಾರು 3 ಲಕ್ಷ ವೆಚ್ಚವಾಗಲಿದ್ದು ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವಂತಾಗಿದೆ,
ಗುಲಾಬಿ ಅವರ ಗಂಡ ವರ್ಷದ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗುಲಾಬಿ ಅವರಿಗೆ 8ನೇ ತರಗತಿ ಓದುವ ಮಗ ಮತ್ತು 6ನೇ ತರಗತಿ ಓದುವ ಮಗಳಿದ್ದಾಳೆ. ಗುಲಾಬಿ ಅವರ ತಾಯಿ ಹಾಗೂ ಅವರ ಕುಟುಂಬದವರು ಗುಲಾಬಿ ಅವರನ್ನು ನೋಡಿಕೊಳ್ಳುತ್ತಿದ್ದು ಚಿಕಿತ್ಸೆಗೆ ದಾನಿಗಳಿಂದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ನೆರವು ನೀಡುವ ದಾನಿಗಳು ಗುಲಾಬಿ ಅವರ ಕರ್ನಾಟಕ ಬ್ಯಾಂಕ್ ನ ಬಾಳೆಹೊನ್ನೂರು ಶಾಖೆಯ ಖಾತೆ ಸಂಖ್ಯೆ:5382500100803601, ಐಎಫ್‌ಎಸ್‌ಸಿ ಕೋಡ್:ಕೆಎಆರ್‌ಬಿ0000052ಗೆ ಹಣ ಸಂದಾಯ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ 7338628023 ಸಂಖ್ಯೆಗೆ ಸಂರ್ಪಕಿಸಬಹುದಾಗಿದೆ.

ಬುಧವಾರ, ಜೂನ್ 24, 2026

ಪರಿಸರ ಸಮತೋಲನದಲ್ಲಿ ಮಳೆಕಾಡುಗಳ ಪಾತ್ರ ಅಪಾರ

ಕೊಟ್ಟಿಗೆಹಾರ:ಪರಿಸರ ಸಮತೋಲನದಲ್ಲಿ ಮಳೆಕಾಡುಗಳ ಪಾತ್ರ ಹೊಂದಿದ್ದು ಮಳೆಕಾಡುಗಳ ಸಂರಕ್ಷಣೆ ನಮ್ಮೆಲರ ಹೊಣೆಯಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಬೋರಯ್ಯ ಹೇಳಿದರು.
ಅರಣ್ಯ ಇಲಾಖೆ ವತಿಯಿಂದ ಕೊಟ್ಟಿಗೆಹಾರದ ಕೆ.ಪಿಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ನಡೆದ ವಿಶ್ವ ಮಳೆಕಾಡುಗಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅತಿಯಾದ ಮಾನವನ ಹಸ್ತಕ್ಷೇಪ ಹಾಗೂ ಕೈಗಾರೀಕರಣ, ಅಕ್ರಮ ಮರ ಕಡಿತಲೆ ಇತ್ಯಾದಿ ಕಾರಣಗಳಿಂದಾಗಿ ಮಳೆಕಾಡುಗಳು ಅಪಾಯದ ಅಂಚಿನಲ್ಲಿವೆ. ಪಶ್ಚಿಮಘಟ್ಟಗಳ ಸಾಲಿನಲ್ಲಿರುವ ಮಳೆಕಾಡುಗಳ ಸಂರಕ್ಷಣೆಗೆ ಎಲ್ಲರೂ ಅರಣ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದರು.

ಮೂಡಿಗೆರೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಆಕರ್ಷ್ ಟಿ.ಎಂ ಮಾತನಾಡಿ, ಮಳೆ ಕಾಡುಗಳ ಸಂರಕ್ಷಣೆಯಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಬೇಕಿದೆ. ಮಳೆಕಾಡುಗಳ ಸಂರಕ್ಷಣೆ ಹಾಗೂ ರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಮುತ್ತೋಡಿ ವಲಯದ ಉಪ ವಲಯ ಅರಣ್ಯಾಧಿಕಾರಿಗಳಾದ ಕುಮಾರ್ ಬಿ ಮಾತನಾಡಿ ಭೂಮಿಯ ಹವಾಮಾನ ನಿಯಂತ್ರಣ, ಆಮ್ಲಜನಕ ಉತ್ಪಾದನೆ ಮತ್ತು ಜೀವವೈವಿಧ್ಯತೆಯ ಸಂರಕ್ಷಣೆಗೆ ಮಳೆಕಾಡುಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಮಳೆ ಕಾಡುಗಳ ಸಂರಕ್ಷಣೆ ಕುರಿತ ಜಾಗೃತಿಗೆ ಮಳೆಕಾಡು ಗಳ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಎಟಿಡಬ್ಲೂö್ಯಎಎಸ್ ಸಂಸ್ಥೆಯ ರಿಂಕಲ್ ಲೋಬೊ ಮಾತನಾಡಿ, ವನ್ಯಜೀವಿಗಳ ನೈಸರ್ಗಿಕ ಆವಾಸಸ್ಥಾನಗಳನ್ನು ರಕ್ಷಿಸುವುದು, ಜೀವವೈವಿಧ್ಯತೆಯನ್ನು ಕಾಪಾಡುವುದು ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿ ಸಸ್ಯಗಳನ್ನು ಉಳಿಸುವುದು ಎಲ್ಲರ ಆದ್ಯತೆ ಆಗಬೇಕು ಎಂದರು.
ಬಣಕಲ್ ಉಪ ವಲಯ ಅರಣ್ಯಾಧಿಕಾದಿ ರಂಜಿತ್ ಪ್ರಾಸ್ತಾವಿಕ ನುಡಿಗಳನಾಡಿದರು. ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಮಂಜುನಾಥ್, ತರುವೆ ಏಕಲವ್ಯ ಮಾದರಿ ವಸತಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಅರಣ್ಯ ಇಲಾಖೆ ಸಿಬ್ಬಂದಿಗಳು ಇದ್ದರು. ಎ.ವಿ ಮನು ಸ್ವಾಗತಿಸಿ, ಆದರ್ಶ್ ವಿ.ಎಸ್ ನಿರೂಪಿಸಿದರು.

ಬುಧವಾರ, ಜೂನ್ 17, 2026

ಚಿನ್ನದ ಪದಕ ಪಡೆದ ಡಾ.ಪೂಜಾ ಬಿ.ಜಿ


ಕೊಟ್ಟಿಗೆಹಾರ:ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ೨೮ನೇ ಘಟಿಕೋತ್ಸವದಲ್ಲಿ ಆಯುರ್ವೇದ ವೈದ್ಯಕೀಯ ಕ್ಷೇತ್ರದಲ್ಲಿ ಕಾಯಚಿಕಿತ್ಸಾ ಸ್ನಾತಕೋತ್ತರ ವಿಭಾಗದಲ್ಲಿ ಕೊಟ್ಟಿಗೆಹಾರ ಬಿನ್ನಡಿಯ ಡಾ.ಪೂಜಾ ಬಿ.ಜಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆದ ೨೮ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಮತ್ತು ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರಿಂದ ಚಿನ್ನದ ಪದಕವನ್ನು ಸ್ವೀಕರಿಸಿದರು. 
ಡಾ.ಪೂಜಾ ಅವರು ತರುವೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಸುಶೀಲ ಮತ್ತು ಗೋಪಾಲ್ ಬಿನ್ನಡಿ ಅವರ ಪುತ್ರಿ. 

ಗುರುವಾರ, ಜೂನ್ 11, 2026

ಜೂನ್ 13 ರಂದು ಮಾನಸಿಕ ಒತ್ತಡ ನಿರ್ವಹಣೆ ಉಪನ್ಯಾಸ


ಕೊಟ್ಟಿಗೆಹಾರ:ಪದ್ಮಶ್ರೀ ಪ್ರಶಸ್ತಿ ವಿಜೇತ ಖ್ಯಾತ ಮನೋವೈದ್ಯರಾದ ಡಾ. ಸಿ.ಆರ್‍.ಚಂದ್ರಶೇಖರ್‍ ಅವರು ಜೂನ್ 13 ರಂದು ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡ, ಕಲಿಕೆಗೆ ಸವಾಲು, ನಿರ್ವಹಣೆ ಮತ್ತು ಪರಿಹಾರ ಈ ವಿಷಯವಾಗಿ ಉಪನ್ಯಾಸ ಮತ್ತು ಸಂವಾದ ನಡೆಸಿಕೊಡಲಿದ್ದಾರೆ ಎಂದು ಚಿಕ್ಕಮಗಳೂರಿನ ಕದ್ರಿಮಿದ್ರಿಯ ಕುವೆಂಪು ವಿದ್ಯಾನಿಕೇತನ ಸಂಸ್ಥೆಯ ಕಾರ್ಯದರ್ಶಿ ಕೆ.ಸಿ ಶಂಕರ್‍ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಆಧುನಿಕ, ಯಾಂತ್ರಿಕ ವಾತಾವರಣದಲ್ಲಿ ಮಾನಸಿಕ ಒತ್ತಡ ನಿರ್ವಹಣೆಯು ಸುಗಮ ಕಲಿಕೆಗೆ ತುಂಬಾ ಮುಖ್ಯ. ಕಲಿಕಾ ಪ್ರಕ್ರಿಯೆಯಲ್ಲಿ ಪಾಲುದಾರರಾದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮಾನಸಿಕ ಒತ್ತಡ ಸಮಸ್ಯೆಯನ್ನು ಸಮಗ್ರವಾಗಿ ಮತ್ತು ವೈಜ್ಞಾನಿಕವಾಗಿ ತಿಳಿದುಕೊಳ್ಳುವುದು ತುಂಬಾ ಮುಖ್ಯ.  ಈ ಹಿನ್ನಲೆಯಲ್ಲಿ ಕದ್ರಿಮಿದ್ರಿಯ ಕುವೆಂಪು ವಿದ್ಯಾನಿಕೇತನ ಸಂಸ್ಥೆಯಲ್ಲಿ ಜೂನ್ 13 ರಂದು ಮನೋವೈದ್ಯರಾದ ಡಾ. ಸಿ.ಆರ್‍.ಚಂದ್ರಶೇಖರ್‍ ಅವರು ಮಾತನಾಡಲಿದ್ದಾರೆ ಎಂದರು.

ಈ ಕಾರ್ಯಕ್ರಮದ ಸದುಪಯೋಗವನ್ನು ಶಿಕ್ಷಕರು ಪಡೆದುಕೊಳ್ಳಬಹುದಾಗಿದ್ದು ಪ್ರತಿ ಶಾಲೆಯ ಇಬ್ಬರು ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.  ಹೆಚ್ಚಿನ ಮಾಹಿತಿಗೆ 9482381758 ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಶುಕ್ರವಾರ, ಏಪ್ರಿಲ್ 17, 2026

ತರಿಮಲೆಯಲ್ಲಿ ವಿಜೃಂಭಣೆಯಿಂದ ನಡೆದ ಕಲಾವಳಿ ಉತ್ಸವ


ತರಿಮಲೆಯಲ್ಲಿ ವಿಜೃಂಭಣೆಯಿಂದ ನಡೆದ ಕಲಾವಳಿ ಉತ್ಸವ
ಕೊಟ್ಟಿಗೆಹಾರ:ತರುವೆ ಸಮೀಪದ ಆದಿಸ್ಥಾನ ತರಿಮಲೆಯಲ್ಲಿ ವಾರ್ಷಿಕ ಕಲಾವಳಿ ಉತ್ಸವ ವಿಜೃಂಭಣೆಯಿಂದ ನಡೆಯಿತು.

ಉತ್ಸವದ ಅಂಗವಾಗಿ ಆದಿಸ್ಥಾನವನ್ನು ತಳಿರು ತೋರಣ ಪುಷ್ಪಾಲಂಕಾರಗಳಿಂದ ಸಿಂಗರಿಸಲಾಗಿತ್ತು. ಭಕ್ತಾದಿಗಳು ಹಣ್ಣು ಕಾಯಿ ಹಾಗೂ ಹರಕೆಯನ್ನು ದೇವರಿಗೆ ಅರ್ಪಿಸಿ ದೇವರ ದರ್ಶನ ಪಡೆದರು. ೧೨ ಪ್ರಧಾನ ದೇವತೆಗಳಿಗೆ ಎಡೆ ಅರ್ಪಿಸಿ ೧೦೧ ದೈವಗಳಿಗೆ ಪಂಜಿನ ದೀಪವನ್ನು ಬೆಳಗಲಾಯಿತು. ಏಪ್ರಿಲ್ ೧೪ ರಿಂದ ಉತ್ಸವ ಪ್ರಾರಂಭವಾಗಿದ್ದು ಶ್ರೀಚೌಡೇಶ್ವರಿ ದೇವಸ್ಥಾನದಲ್ಲಿ ಕಲಾಹೋಮ, ಕಲಶ ಪೂಜೆ, ಪಟ್ಟದಾರಣೆ ಪೂಜೆ, ಕುಂಕುಮಾರ್ಚನೆ, ಹೂವಿನ ಪೂಜೆ, ನೈವೇದ್ಯ ಪೂಜೆ, ದೀಪಾರಾಧನೆ ಪೂಜೆ, ಮಹಾ ಮಂಗಳಾರತಿ, ಹಣ್ಣುಕಾಯಿ ಪ್ರಸಾದ ವಿನಿಯೋಗ ನಡೆಯಿತು. ತರುವೆ, ಕೊಟ್ಟಿಗೆಹಾರ, ಬೆಂಗಳೂರು, ಹಾಸನ, ಶಿವಮೊಗ್ಗ, ಬಳ್ಳಾರಿ, ಮೈಸೂರು ಸೇರಿದಂತೇ ವಿವಿದೆಡೆಯಿಂದ ನೂರಾರು ಭಕ್ತಾಧಿಗಳು ಆಗಮಿಸಿದ್ದರು. ಪೂಜಾ ವಿಧಿವಿಧಾನಗಳು ವಿಜೃಂಭಣೆಯಿಂದ ಶಾಸ್ತ್ರೋಕ್ತವಾಗಿ ನಡೆಯಿತು. ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಟಿ.ಎಂ ರಾಮಚಂದ್ರಗೌಡ ಹಾಗೂ ಪದಾಧಿಕಾರಿಗಳು ಇದ್ದರು.

ಬುಧವಾರ, ಏಪ್ರಿಲ್ 8, 2026

ಕನ್ನಡದ ಸಂಯೋಜಕ ಪ್ರತಿಭೆ ತೇಜಸ್ವಿ


ಕೊಟ್ಟಿಗೆಹಾರ:ಪೋಟೋಗ್ರಾಫಿ, ಫಿಶಿಂಗ್, ಪೈಂಟಿಂಗ್, ಸಾಹಿತ್ಯ ಹೀಗೆ ನಾನಾ ಬಗೆಯ ಆಸಕ್ತಿ ಕುತೂಹಲಗಳಿದ್ದ ತೇಜಸ್ವಿ ಅವರು ಕನ್ನಡದ ಸಂಯೋಜಕ ಪ್ರತಿಭೆ ಎಂದು ವಿಮರ್ಶಕ, ಲೇಖಕ ಡಾ.ಎಚ್.ಎಸ್.ಸತ್ಯನಾರಾಯಣ ಹೇಳಿದರು.
ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ನಡೆದ ಮೂರು ದಿನದ ಛಾಯಾಗ್ರಹಣ ಕಾರ್ಯಾಗಾರದಲ್ಲಿ ತೇಜಸ್ವಿಯವರ ಕ್ಯಾಮರಾ ಕಣ್ಣು ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ಒಂದು ಸನ್ನಿವೇಶದ ಅರ್ಥಪೂರ್ಣತೆಗೆ ಅಗತ್ಯವಾದ ವಿಶಿಷ್ಟ ವಿವರಗಳನ್ನು ಗ್ರಹಿಸೋದನ್ನು ಪೋಟೋಗ್ರಫಿ ಹೇಳಿಕೊಡುತ್ತದೆ. ವಿಸ್ತಾರವಾದ ಅಸ್ತವ್ಯಸ್ತವಾದ ಜಗತ್ತನ್ನು ಒಂದು ಚೌಕಟ್ಟಿನೊಳಗೆ ನೋಡುವುದನ್ನು ಪೋಟೋಗ್ರಫಿ ಕಲಿಸುತ್ತದೆ. ವಾಸ್ತವ ಜಗತ್ತಿನ ಸರ್ವೇಸಾಧಾರಣ ದೃಶ್ಯ ಚೌಕಟ್ಟಿನೊಳಗೆ ನೋಡಿದಾಗ ವಿಶಿಷ್ಠವಾಗಿ ಕಾಣುತ್ತದೆ ಎಂಬುದು ಛಾಯಾಗ್ರಾಹಣದ ಕುರಿತ ತೇಜಸ್ವಿ ಅವರ ಮಾತು ಎಂದರು.

ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಪ್ರದೀಪ್ ಕೆಂಜಿಗೆ ಮಾತನಾಡಿ, ತೇಜಸ್ವಿ ಪ್ರತಿಷ್ಠಾನದಲ್ಲಿ ತೇಜಸ್ವಿ ಅವರ ಆಸಕ್ತಿಯ ವಿಷಯಗಳ ಕುರಿತು ಕುತೂಹಲ ಆಸಕ್ತಿ ಮೂಡಿಸುವ ವಾತಾವರಣವನ್ನು ನಿರ್ಮಿಸುವತ್ತ ಹೆಚ್ಚು ಆದ್ಯತೆ ನೀಡಲಾಗಿದೆ ಎಂದರು.

ತೇಜಸ್ವಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿಗಳು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ ರಮೇಶ್ ಮಾತನಾಡಿ, ಪೋಟೋಗ್ರಫಿ ಕಾರ್ಯಾಗಾರವು ಛಾಯಾಗ್ರಹಣದಲ್ಲಿ ಆಸಕ್ತಿರುವವರಿಗೆ ಉಪಯುಕ್ತವಾಗಿದೆ. ಕ್ಯಾಮರಾ ಬಳಸುವ ಬಗೆ, ತಾಂತ್ರಿಕ ವಿವರಗಳು ಮುಂತಾದವುಗಳನ್ನು ತಿಳಿದುಕೊಳ್ಳಲು ಈ ಕಾರ್ಯಾಗಾರ ಉಪಯುಕ್ತವಾಗಿದೆ ಎಂದರು.

ತೇಜಸ್ವಿ ಒಡನಾಡಿ ಮತ್ತು ಕಲಾವಿದ ಬಾಪುದಿನೇಶ್ ಮಾತನಾಡಿ ತೇಜಸ್ವಿ ಅವರ ಪೋಟೊಗ್ರಫಿ ಹವ್ಯಾಸ ಪ್ರತಿಯೊಂದನ್ನು ಹೊಸ ದೃಷ್ಟಿಕೋನದಿಂದ ನೋಡುವುದನ್ನು ಕಲಿಸಿದೆ. ಅವರ ದೃಷ್ಟಿಕೋನ ಅವರ ಬರಹಗಳನ್ನು ಪ್ರಭಾವಿಸಿದೆ ಎಂದರು. ಛಾಯಾಗ್ರಾಹಕ ಶಿವಕುಮಾರ್ ಹಿರೇಗೌಜ ಮಾತನಾಡಿ ತೇಜಸ್ವಿ ಪ್ರತಿಷ್ಠಾನದಲ್ಲಿ ತೇಜಸ್ವಿ ಅವರ ಆಸಕ್ತಿಗೆ ಸಂಬಂದಿಸಿದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.

 ಸಂಪನ್ಮೂಲ ವ್ಯಕ್ತಿಗಳಾದ ಛಾಯಾಗ್ರಾಹಕರಾದ ಬೆಂಗಳೂರಿನ ಆನಂದ್‌ಕುಮಾರ್ ಮಾತನಾಡಿ, ತೇಜಸ್ವಿಯವರು ಪೋಟೋಗ್ರಫಿಯನ್ನು ಕೇವಲ ತಾಂತ್ರಿಕ ಕೌಶಲ್ಯವಾಗಿ ಅಲ್ಲ, ಬದುಕಿನೊಂದಿಗೆ ಪ್ರಕೃತಿಯೊಂದಿಗೆ ಸಂವಾದವಾಗಿ ನೋಡುತ್ತಿದ್ದರು.ಕಾರ್ಯಾಗಾರದ ಪ್ರತಿ ಅಧ್ಯಾಯವೂ ತಾತ್ವಿಕ ಚರ್ಚೆಯಿಂದ ಹಿಡಿದು ಪ್ರಾಯೋಗಿಕ ಚಿತ್ರಣದವರೆಗೆ ತೇಜಸ್ವಿಯವರ ಚಿಂತನೆಯನ್ನು ಪ್ರತಿನಿಧಿಸುತ್ತಿತ್ತು ಎಂದರು.

 ಹೊಸಪೇಟೆಯ ಪಂಪಯ್ಯ ಮಳೇಮಠ ಮಾತನಾಡಿ, ಪಕ್ಷಿ ವೀಕ್ಷಣೆ ಮತ್ತು  ಛಾಯಾಗ್ರಹಣಕ್ಕೆ ತಾಳ್ಮೆ ಮತ್ತು ಮೌನದಿಂದ ಇರಬೇಕಾಗುತ್ತದೆ. ಕ್ಯಾಮರಾದಲ್ಲಿ ಪಕ್ಷಿಗಳ ಪೋಟೋ ತೆಗೆಯುತ್ತಾ ಅವುಗಳ ಅದ್ಬುತ ಜಗತ್ತು ನಮ್ಮ ಮುಂದೆ ತೆರೆದುಕೊಳ್ಳುತ್ತದೆ ಎಂದರು. 

ಕ ಬೆಂಗಳೂರು, ಮೈಸೂರು, ಗದಗ, ತುಮಕೂರು, ಹುಬ್ಬಳ್ಳಿ ಮುಂತಾದ ಜಿಲ್ಲೆಗಳಿಂದ ಆಗಮಿಸಿದ್ದ 25 ಶಿಬಿರಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಮೂರು ದಿನಗಳ ಕಾಲ ನಡೆದ ಕಾರ್ಯಾಗಾರದಲ್ಲಿ ಬೇಸಿಕ್ ಪೋಟೋಗ್ರಫಿ, ಲ್ಯಾಂಡ್‌ಸ್ಕೇಪ್ ಛಾಯಾಗ್ರಹಣ, ಕ್ಯಾಮರಾ ಬಳಕೆ ಸಂಯೋಜನೆ, ಪೋಟೋ ಎಡಿಟಿಂಗ್ ಕುರಿತು ತಿಳಿಸಿಕೊಡಲಾಯಿತು.

 ಸಂತೆಯ ಚಿತ್ರಣ, ಗ್ರಾಮೀಣ ಜೀವನದ ಛಾಯಾಗ್ರಹಣ, ಪ್ರಕೃತಿ ನಡಿಗೆ ನಡೆಯಿತು.
ಈ ಸಂದರ್ಭದಲ್ಲಿ ತೇಜಸ್ವಿ ಪ್ರತಿಷ್ಠಾನದ ತಾಂತ್ರಿಕ ಸಹಾಯಕ ಪ್ರಜ್ವಲ್, ಕೀಟ ತಜ್ಞ ಡಾ.ಅವಿನಾಶ್, ಲೇಖಕ ಪೂರ್ಣೇಶ್ ಮತ್ತಾವರ, ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸತೀಶ್ ತರುವೆ, ಸಂಗೀತಾ ತರುವೆ, ಸುದಿತ್, ಪೂರ್ಣೇಶ್ ಮುಂತಾದವರು ಇದ್ದರು.