ಈ ಹಿಂದೆ ಸಚಿವೆಯಾಗಿ, ಕ್ಷೇತ್ರದ ಶಾಸಕಿಯಾಗಿ ಜನರ ಸೇವೆ ಮಾಡಿದ್ದ ತಾಯಿ ಮೋಟಮ್ಮ ಅವರ ರಾಜಕೀಯ ಅನುಭವ ಮತ್ತು ನನ್ನ ಕ್ರೀಯಾಶೀಲತೆಯೊಂದಿಗೆ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಲು ಕಂಕಣಬದ್ದವಾಗಿದ್ದು ಈ ಬಾರಿ ಮತದಾರರು ಕೈ ಹಿಡಿಯಲಿದ್ದಾರೆ ಎಂದು ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಯನಾ ಮೋಟಮ್ಮ ಹೇಳಿದರು.
ಸೋಮವಾರ, ಬಣಕಲ್, ಕೊಟ್ಟಿಗೆಹಾರ, ಸಬ್ಬೇನಹಳ್ಳಿ, ಬಂಕೇನಹಳ್ಳಿ, ಚಕ್ಕಮಕ್ಕಿ ಮುಂತಾದ ಕಡೆಗಳಲ್ಲಿ ಮತಯಾಚನೆ ವೇಳೆ ಕೊಟ್ಟಿಗೆಹಾರದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಜನರ ಮೂಲಭೂತ ಸೌಕರ್ಯಗಳ ಪೂರೈಕೆಗೆ ಅನುಗುಣವಾಗಿ ಸಂಪನ್ಮೂಲವನ್ನು ಕ್ರೋಡಿಕರಿಸಿ ಫಲಾನುಭವಿಗಳಿಗೆ ನೀಡುವುದೇ ಕಾಂಗ್ರೆಸ್ ಪಕ್ಷದ ಕಾರ್ಯವಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸನ್ನು ಗೆಲ್ಲಿಸಿದ್ದಲ್ಲಿ ಹೆಚ್ಚು ಅನುದಾನವನ್ನು ಕ್ಷೇತ್ರಕ್ಕೆ ತರಿಸಿ ಜನರ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುವುದು ನನ್ನ ಮೊದಲ ಕೆಲಸವಾಗಿದೆ. ಮಲೆನಾಡು ಭಾಗದಲ್ಲಿ ಹಲವು ರೈತರ ಸಮಸ್ಯೆಗಳಿದ್ಧು ಅದನ್ನು ಕಾರ್ಯರೂಪಕ್ಕೆ ತರುತ್ತೇನೆ. ಪ್ರತಿಯೊಂದು ಗ್ರಾಮದ ಜನರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ತರುವೆ ಗ್ರಾ.ಪಂ ಅಧ್ಯಕ್ಷ ಸತೀಶ್ ಮಾತನಾಡಿ, ಮಾಜಿ ಸಚಿವೆ ಮೋಟಮ್ಮನವರ ಜನಪರ ಕಾರ್ಯಗಳನ್ನು ಜನರು ಇಂದಿಗೂ ಸ್ಮರಿಸುತ್ತಾರೆ. ತರುವೆ ಗ್ರಾ.ಪಂಗೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದರು. ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸುಂದರೇಶ್‌ಗೌಡ, ಸಬ್ಲಿ ದೇವರಾಜ್, ಟಿ.ಎ.ಖಾದರ್, ಇರ್ಪಾನ್, ರಾಮಚಂದ್ರೆಗೌಡ, ಸುಬ್ರಹ್ಮಣ್ಯ, ದಿಲ್‌ದಾರ್ ಬೇಗಂ, ಅಜೀಜ್, ಮನು, ಇರ್ಪಾನ್, ಮಹೇಶ್, ಕುಮಾರ್ ಮುಂತಾದವರು ಇದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ