ಚಿಕ್ಕಮಗಳೂರು:ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯಾದ್ಯಂತ ಪ್ರದರ್ಶಿಸಲು ಉದ್ದೇಶಿಸಿರುವ ವಚನ ಕಲ್ಯಾಣ ರಂಗ ಪ್ರಯೋಗಕ್ಕೆ ರಂಗ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಚಿಕ್ಕಮಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ ರಮೇಶ್ ತಿಳಿಸಿದ್ದಾರೆ.
ಗುರುವಾರ, ಮಾರ್ಚ್ 12, 2026
ಭಾನುವಾರ, ಜನವರಿ 4, 2026
ಎರಡು ದಶಕದ ನಂತರ ಒಂದಾದ ಸಹಪಾಠಿಗಳು, ಪ್ರಾರ್ಥನೆ, ಹಾಜರಾತಿ,ಪಾಠ: ಮತ್ತೆ ಮರುಕಳಿಸಿದ ಶಾಲಾ ದಿನಗಳು: ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದ ಸ್ನೇಹಸಮ್ಮೀಲನ
ಬಣಕಲ್:ಇಪ್ಪತ್ತು ವರ್ಷದ ಹಿಂದೆ ಬಣಕಲ್ ಪ್ರೌಢಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಮತ್ತೆ ಅದೇ ಶಾಲೆಯ ಕೊಠಡಿಯಲ್ಲಿ ಕುಳಿತಿದ್ದರು.
ಅಂದು ಪಾಠ ಮಾಡಿದ ಶಿಕ್ಷಕರು ಬಂದು ಶಾಲೆಯ ಇದೇ ವಿದ್ಯಾರ್ಥಿಗಳ ಹಾಜರಾತಿ ಪುಸ್ತಕದ ತೆಗೆದು ಹಾಜರಾತಿ ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಪಾಠ ಮಾಡಿದರು.
ಪ್ರಶ್ನೆಗಳನ್ನು ಕೇಳಿ ವಿದ್ಯಾರ್ಥಿಗಳಿಂದ ಉತ್ತರ ಪಡೆದುಕೊಂಡರು. ಎರಡು ದಶಕದ ಹಿಂದಿನ ಶಾಲೆಯ ನೆನಪನ್ನು ಮತ್ತೆ ಮೆಲುಕು ಹಾಕಿದರು. ಪ್ರಾರ್ಥನೆಗೆ ಸಾಲಾಗಿ ನಿಂತು ನಾಡಗೀತೆಗೆ ಧ್ವನಿಯಾದರು.
ಬಣಕಲ್ ಪ್ರೌಢಶಾಲೆಯ ೨೦೦೬-೨೦೦೮ರ ಬ್ಯಾಚ್‌ನ ವಿದ್ಯಾರ್ಥಿಗಳ ಸ್ನೇಹ ಸಮ್ಮೀಲನ ಮತ್ತು ಗುರು ವಂದನಾ ಕಾರ್ಯಕ್ರಮ ಇಂತಹ ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾಯಿತು.
೪೦ ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ನೆನಪನ್ನು ಮೆಲುಕು ಹಾಕಿದರು. ಶಿಕ್ಷಕರಾದ ಎನ್ ಚಂದ್ರಶೇಖರ್, ಪಿ ವಾಸುದೇವ್, ಜಿ.ಎಚ್ ಶ್ರೀನಿವಾಸ್, ವಲ್ಸಮ್ಮ, ಕವಿತಾ, ಸಿ ಬೋರಕ್ಕ, ಡಿ.ಎನ್ ಪ್ರವೀಣ್, ಉಮಾ ಮಹೇಶ್ ಅವರನ್ನು ಗೌರವಿಸಲಾಯಿತು.
ಬೇರೆ ಬೇರೆ ಊರುಗಳಿಂದ ಬಂದ ವಿದ್ಯಾರ್ಥಿಗಳು ಎರಡು ದಶಕಗಳ ನಂತರ ಸಿಕ್ಕ ತಮ್ಮ ಸಹಪಾಠಿಗಳನ್ನು ಕಂಡು ಕುಶಲೋಪರಿ ವಿಚಾರಿಸಿದರು. ಶಾಲಾ ದಿನಗಳನ್ನು ನೆನಪಿಸಿಕೊಂಡರು. ನೌಕರಿ, ಮದುವೆ, ಮಕ್ಕಳು ಮುಂತಾದವುಗಳ ಬಗ್ಗೆ ಪರಿಚಯ ಮಾಡಿಕೊಂಡರು. ಬದುಕಿನ ಜಂಜಾಟಗಳಲ್ಲಿ ಮುಳುಗಿ ಹೋಗಿದ್ದ ವಿದ್ಯಾರ್ಥಿಗಳು ಮತ್ತೆ ಶಾಲೆಯ ಚಂದದ ದಿನಗಳನ್ನು ಕಳೆದ ಶಾಲೆಯಲ್ಲಿ ಮತ್ತೆ ಸೇರಿ ಸಂತೋಷಪಟ್ಟರು.
ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ವಿದೇಶದಲ್ಲಿ ನೌಕರಿಯಲ್ಲಿರುವ ಹಳೆಯ ವಿದ್ಯಾರ್ಥಿಗಳು ಗೂಗಲ್ ಮೀಟ್ ಮೂಲಕ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.
ಶಾಲೆಯ ಆವರಣದಲ್ಲಿ ತೆಂಗಿನ ಸಸಿಗಳನ್ನು ನೆಡಲಾಯಿತು.
Water dispenser ನ್ನು ಶಾಲೆಗೆ ಕೊಡುಗೆಯಾಗಿ ನೀಡಲಾಯಿತು..
ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಬಿ.ಎಲ್. ದಿವಾಕರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಈ ಸಂದರ್ಭದಲ್ಲಿ ಕೋಶಾಧಿಕಾರಿ ಬಿ.ಕೆ.ಪೃಥ್ವಿ, ನಿರ್ದೇಶಕರಾದ ಜಕವುಲ್ಲಾ, ಬಿ.ಎಸ್.ವಿಕ್ರಂ ೨೦೦೬-೨೦೦೮ರ ಬ್ಯಾಚ್‌ನ ವಿದ್ಯಾರ್ಥಿಗಳು ಮುಂತಾದವರು ಇದ್ದರು.
ಸೋಮವಾರ, ಡಿಸೆಂಬರ್ 1, 2025
ತೇಜಸ್ವಿ ಪ್ರತಿಷ್ಠಾನದಲ್ಲಿ ಚಿಟ್ಟೆ ಉದ್ಯಾನವನ ವೀಕ್ಷಣೆಗೆ ಮುಕ್ತ
ಕೊಟ್ಟಿಗೆಹಾರ;ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಚಿಟ್ಟೆ ಉದ್ಯಾನವನ ವೀಕ್ಷಣೆಗೆ ಮುಕ್ತವಾಗಿದ್ದು ಚಿಟ್ಟೆಗಳಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ ಎಂದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಪ್ರದೀಪ್ ಕೆಂಜಿಗೆ ಹೇಳಿದರು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ಕೊಟ್ಟಿಗೆಹಾರದಲ್ಲಿ ನಡೆದ ಡಿಜಿಟಲ್ ಕನ್ನಡ ಫಾಂಟ್ ಕಾರ್ಯಾಗಾರ ಮತ್ತು ಕನ್ನಡ ಕೈಬರಹ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಚಿಟ್ಟೆ ಉದ್ಯಾನವನದಲ್ಲಿ ಚಿಟ್ಟೆಗಳಿಗೆ ಸಂಬಂಧಿಸಿದ ಅತಿಥೇಯ ಸಸ್ಯಗಳನ್ನು ನೆಡಲಾಗಿದ್ದು ಮಡ್ ಪಡ್ಲಿಂಗ್ ಮತ್ತು ಆಹಾರ ಪೂರಕಗಳನ್ನು ಮಾಡಲಾಗಿದೆ. ಚಿಟ್ಟೆಗಳ ಕುರಿತಾದ ಮಾಹಿತಿ ಫಲಕಗಳನ್ನು ಉದ್ಯಾನವನದಲ್ಲಿ ಹಾಕಲಾಗಿದ್ದು ಚಿಟ್ಟೆಗಳ ಜಗತ್ತಿನ ವಿವರಗಳು ಜ್ಞಾನಾಸಕ್ತರಿಗೆ ಸಿಗಲಿದೆ. ಆರ್ಕಿಡ್‌ಗಳ ಮಹತ್ವ ಮತ್ತು ಸಂರಕ್ಷಣೆಯ ಅರಿವು ಮೂಡಿಸುವ ಆರ್ಕಿಡ್ ಲೋಕ ಪ್ರಮುಖ ಆಕರ್ಷಣೆಯಾಗಿದೆ. ರಂಗಮಂದಿರ ಮತ್ತು ವಸತಿಗೃಹದ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳ್ಳಲಿದ್ದು ಕಾರ್ಯಾಗಾರ, ನಾಟಕ ಮುಂತಾದ ಚಟುವಟಿಕೆಗಳು ನಿರಂತರವಾಗಿ ನಡೆಯಲಿದೆ ಎಂದರು.
ತೇಜಸ್ವಿ ಪ್ರತಿಷ್ಠಾನದ ಸದಸ್ಯರಾದ ರವೀಶ್ ಬಸಪ್ಪ ಮಾತನಾಡಿ, ಕುತೂಹಲ, ಜೀವನ ಪ್ರೀತಿ, ಜೀವನೋತ್ಸಾಹವನ್ನು ಮಕ್ಕಳು ಬೆಳಸಿಕೊಳ್ಳಬೇಕು. ಬಹುಮುಖ ವ್ಯಕ್ತಿತ್ವದ ತೇಜಸ್ವಿ ಅವರ ಕೃತಿಗಳನ್ನು ಮಕ್ಕಳು ಓದಬೇಕು ಎಂದರು.
ತೇಜಸ್ವಿ ಪ್ರತಿಷ್ಠಾನದ ಸದಸ್ಯರಾದ ದೀಪಾ ಹಿರೇಗುತ್ತಿ ಮಾತನಾಡಿ, ತೇಜಸ್ವಿ ಅವರ ಮಿಲೇನಿಯಂ ಸರಣಿಯ ಪುಸ್ತಕಗಳು ಮಕ್ಕಳಲ್ಲಿ ಓದಿನ ಅಭಿರುಚಿಯನ್ನು ಬೆಳೆಸುತ್ತವೆ. ತೇಜಸ್ವಿ ಪ್ರತಿಷ್ಠಾನ ಬಹುಮುಖ ವ್ಯಕ್ತಿತ್ವದ ತೇಜಸ್ವಿ ಅವರ ಆಶಯಗಳನ್ನು ತಮ್ಮ ಕಾರ್ಯ ಚಟುವಟಿಕೆಗಳ ಮೂಲಕ ಸಕ್ರಿಯವಾಗಿಟ್ಟಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ.ರಮೇಶ್ ಮಾತನಾಡಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯನ್ನು ಬಲಿಷ್ಠವಾಗಿ ಬೆಳೆಸಲು ಸಾಧ್ಯವಾದರೇ ಮಾತ್ರ ಕನ್ನಡ ಭಾಷೆ ಉಳಿಯುತ್ತದೆ ಎಂಬುದು ತೇಜಸ್ವಿ ಅವರ ಅಭಿಪ್ರಾಯವಾಗಿತ್ತು. ಕನ್ನಡ ಭಾಷೆಯನ್ನು ತಂತ್ರಜ್ಞಾನಸ್ನೇಹಿ ಭಾಷೆಯಾಗಿಸಲು ಡಿಜಿಟಲ್ ಕನ್ನಡ ಫಾಂಟ್ ಕಾರ್ಯಾಗಾರದಂತಹ ಕಾರ್ಯಕ್ರಮಗಳು ಸಹಾಯಕ ಎಂದರು.
ಡಿಜಿಟಲ್ ಕನ್ನಡ ಫಾಂಟ್ ವಿನ್ಯಾಸಕಾರರಾದ ಮಂಜುನಾಥ್ ಆರ್, ಡಿಜಿಟಲ್ ಕನ್ನಡ ಫಾಂಟ್ ಕುರಿತು ಮಾಹಿತಿ ನೀಡಿದರು. ತೇಜಸ್ವಿ ಪ್ರತಿಷ್ಠಾನದ ಸದಸ್ಯ ರವೀಶ್ ಬಸಪ್ಪ ಅವರು, ೨೦೨೬ನೇ ಸಾಲಿನ ಕ್ಯಾಲೆಂಡರ್‌ನ ವಿನ್ಯಾಸ ಬಿಡುಗಡೆ ಮಾಡಿದರು. ಸದಸ್ಯರಾದ ದೀಪಾ ಹಿರೇಗುತ್ತಿ ಅವರು ಆರ್ಕಿಡ್ ಮಾಹಿತಿ ಫಲಕಗಳನ್ನು ಉದ್ಘಾಟನೆ ಮಾಡಿದರು. ತೇಜಸ್ವಿ ಪ್ರತಿಷ್ಠಾನದ ಆವರಣದಲ್ಲಿ ಕಂಡು ಬರುವ ಅಪರೂಪದ ಚಿಟ್ಟೆಗಳ ಪರಿಚಯ ಫಲಕಗಳು ಮತ್ತು ಚಿಟ್ಟೆ ಉದ್ಯಾನ ಸಂಬಂಧಿಸಿದ ಮಾಹಿತಿ ಫಲಕವನ್ನು ಕಲಾವಿದರಾದ ಸುರೇಶ್ ಚಂದ್ರ ದತ್ತ ನೆರವೇರಿಸಿದರು. ಕೈ ಬರಹ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಿಜ್ಞಾನಿಗಳಾದ ಡಾ.ಸುಚಿತ್ರಕುಮಾರಿ, ಕೀಟ ತಜ್ಞ ಡಾ.ಅವಿನಾಶ್, ತೇಜಸ್ವಿ ಪ್ರತಿಷ್ಠಾನದ ತಾಂತ್ರಿಕ ಸಂಯೋಜಕ ಪ್ರಜ್ವಲ್, ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್ ತರುವೆ, ಪೂರ್ಣೇಶ್, ಸಂಗೀತಾ, ಸಿದ್ದಿಕ್, ಕಲಾವಿದರಾದ ಬಾಪು ದಿನೇಶ್, ಟಿ.ಡಿ ಸುರೇಶ್, ಸಾಮಾಜಿಕ ಕಾರ್ಯಕರ್ತ ಸಂಜಯಗೌಡ, ರೈತ ಮುಖಂಡ ಗುರುಶಾಂತಪ್ಪ, ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಕೈಬರಹ ಸ್ಪರ್ಧೆಯ ವಿಜೇತರು ಹಾಜರಿದ್ದರು.
ಸೋಮವಾರ, ನವೆಂಬರ್ 10, 2025
ತೇಜಸ್ವಿ ಪ್ರತಿಷ್ಠಾನದಿಂದ ಕನ್ನಡ ಕೈಬರಹ ಸ್ಪರ್ಧೆ
ಕೊಟ್ಟಿಗೆಹಾರ:೭೦ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ತೇಜಸ್ವಿ ಅವರಿಗೊಂದು ಪತ್ರ-ಕನ್ನಡ ಕೈ ಬರಹ ಸ್ಪರ್ಧೆಗೆ ಕೈ ಬರಹವನ್ನು ಆಹ್ವಾನಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ತೇಜಸ್ವಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿಗಳಾದ ಡಾ.ಸಿ.ರಮೇಶ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೈ ಬರಹ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಫರ್ಧಾರ್ಥಿಗಳು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರಿಗೆ ಕಾಲ್ಪನಿಕ ಪತ್ರವನ್ನು ತಮ್ಮ ಸ್ವಂತ ಕನ್ನಡ ಕೈ ಬರಹದಲ್ಲಿ ಬರೆಯಬೇಕು. ೧೮ ವರ್ಷದೊಳಗಿನ ಸ್ಪರ್ಧಿಗಳಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದ್ದು ಪತ್ರವನ್ನು ಎ೪ ಸೈಜಿನ ಹಾಳೆಯಲ್ಲಿ ಬರೆಯಬೇಕು. ಕೈ ಬರಹದ ಮೂಲ ಪ್ರತಿಯನ್ನೇ ಕಳುಹಿಸಬೇಕು. ಜೆರಾಕ್ಸ್ ಅಥವಾ ಪ್ರಿಂಟ್ ಪ್ರತಿಗಳನ್ನು ಸ್ವೀಕರಿಸಲಾಗುವುದಿಲ್ಲ . ಪತ್ರದೊಂದಿಗೆ ಪ್ರತ್ಯೇಕ ಹಾಳೆಯಲ್ಲಿ ಸ್ಪರ್ಧಿಗಳ ಪರಿಚಯ, ವಿಳಾಸ, ಮೊಬೈಲ್ ಸಂಖ್ಯೆಯನ್ನು ಬರೆದು ಆಧಾರ್ ಕಾರ್ಡ್ ನಕಲು, ಪಾಸ್ ಪೋರ್ಟ್ ಸೈಜಿನ ಭಾವಚಿತ್ರ ಮತ್ತು ಕೈ ಬರಹ ಸ್ಪರ್ಧಾರ್ಥಿಗಳದ್ದೇ ಎಂಬ ಕುರಿತ ಸ್ವಯಂ ಘೋಷಣಾ ಪತ್ರವನ್ನ ಲಗತ್ತಿಸಬೇಕು ಎಂದು ತಿಳಿಸಿದ್ದಾರೆ.
ಕೈ ಬರಹದ ಪತ್ರವನ್ನು ನವೆಂಬರ್ ೨೦ ರೊಳಗೆ ತಲುಪುವಂತೇ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ (ರಿ), ಕೊಟ್ಟಿಗೆಹಾರ ಅಂಚೆ, ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ-೫೭೭೧೧೩ ಈ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ತಲುಪಿಸಬಹುದು. ಅತ್ಯುತ್ತಮ ಕೈ ಬರಹ ಮತ್ತು ಅತ್ಯುತ್ತಮ ಪತ್ರ ಎಂಬ ಎರಡು ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಆಯ್ಕೆ ಮಾಡಲಾಗುತ್ತದೆ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದ್ದು ಪ್ರಥಮ ಬಹುಮಾನ ೫೦೦೦, ದ್ವಿತೀಯ ಬಹುಮಾನ ೩೦೦೦, ತೃತೀಯ ಬಹುಮಾನ ೨೦೦೦ ನಗದು ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ. ವಿಜೇತರ ಪಟ್ಟಿಯನ್ನು ನವೆಂಬರ್ ೨೫ ರ ಸಂಜೆ ೫ ಗಂಟೆಗೆ ತೇಜಸ್ವಿ ಪ್ರತಿಷ್ಠಾನದ ಅಧಿಕೃತ ಜಾಲತಾಣ @ಞಠಿಠಿಣಡಿusಣ ನಲ್ಲಿ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗೆ ೯೬೬೩೦೯೮೮೭೩, ೯೪೪೯೩೦೯೦೬೭ ಗೆ ಸಂರ್ಪಕಿಸಬಹುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗುರುವಾರ, ಸೆಪ್ಟೆಂಬರ್ 4, 2025
ಸೆಪ್ಟೆಂಬರ್ ೭ ರಂದು ಚಿಂತನ ಮಂಥನ ಸಭೆ
ಚಿಕ್ಕಮಗಳೂರು:ಭಗೀರಥ ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ಸೆಪ್ಟೆಂಬರ್ ೭ ರ ಭಾನುವಾರ ಮೈಸೂರಿನಲ್ಲಿ ಚಿಂತನ ಮಂಥನ ಸಭೆ ನಡೆಯಲಿದೆ ಎಂದು ಭಗೀರಥ ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟ್ ನ ಸದಸ್ಯರಾದ ಬೀರೂರಿನ ಶ್ರೀನಿವಾಸ ಬಿ.ಎನ್ ಮತ್ತು ಕಡೂರಿನ ಲಕ್ಕಪ್ಪ ಅವರು ತಿಳಿಸಿದ್ದಾರೆ.
ಈ ಬಗ್ಗೆ ಜಂಟಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು ಸಪ್ಟೆಂಬರ್ ೭ ರಂದು ಮೈಸೂರಿನ ಸರಸ್ವತಿಪುರಂನಲ್ಲಿರುವ ಉಪ್ಪಾರ ವಿದ್ಯಾರ್ಥಿ ನಿಲಯದಲ್ಲಿ ಟ್ರಸ್ಟಿನ ಆಡಳಿತ ಮಂಡಳಿ ಸಭೆ ಮತ್ತು ಉಪ್ಪಾರ ಸಮಾಜದ ಬಂಧುಗಳೊAದಿಗೆ ಚಿಂತನ ಮಂಥನ ಸಭೆ ನಡೆಯಲಿದೆ. ಮ್ಯಾನೇಜಿಂಗ್ ಟ್ರಸ್ಟಿಗಳಾದ ಪಿ.ಶಿವಶಂಕರ್ ಅವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ ೧೧ ಗಂಟೆಗೆ ಚಿಂತನಾ ಮಂಥನ ಸಭೆ ನಡೆಯಲಿದ್ದು ಮಧ್ಯಾಹ್ನ ೨ ಗಂಟೆಗೆ ಟ್ರಸ್ಟಿನ ಸರ್ವ ಸದಸ್ಯರ ಸಭೆ ನಡೆಯಲಿದೆ. ಈ ಸಭೆಗೆ ಸಮಾಜ ಭಾಂದವರು ಭಾಗವಹಿಸಿ ಸಮಾಜದ ಏಳಿಗೆಯ ಕುರಿತ ಚಿಂತನ ಮಂಥನ ಸಭೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದ್ದಾರೆ.
ಭಗೀರಥ ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟ್ ಉಪ್ಪಾರ ಸಮಾಜದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ಔದ್ಯೋಗಿಕ ಏಳಿಗೆಗೆ ಕಂಕಣಬದ್ದವಾಗಿದ್ದು ಸಮಾಜದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡುತ್ತಾ ಬಂದಿದೆ. ೨೦೨೪-೨೫ನೇ ಸಾಲಿನಲ್ಲಿ ವೈದ್ಯಕೀಯ, ಇಂಜಿನಿಯರಿಂಗ, ಆರ್ಯುವೇದಿಕ್, ಕೃಷಿ, ತೋಟಗಾರಿಕೆ, ಭಿ ಫಾರ್ಮಾ, ಪ್ಯಾರಾಮೆಡಿಕಲ್, ಬಿ ಎಡ್, ಕಾನೂನು, ಸ್ನಾತಕೋತರ ಕೋರ್ಸ್ಗಳನ್ನು ವ್ಯಾಸಂಗ ಮಾಡುತ್ತಿರುವ ರಾಜ್ಯದ ೪ ವಿವಿಧ ಜಿಲ್ಲೆಗಳಿಗೆ ಸೇರಿದ ೧೨೮ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಸುಮಾರು ಇಪ್ಪತ್ಮೂರು ಲಕ್ಷ ಆರ್ಥಿಕ ನೆರವನ್ನು ನೀಡಲಾಗಿದೆ. ಸಮಾಜ ಭಾಂದವರ ಸರ್ವಾಂಗೀಣ ಅಭಿವೃದ್ದಿಗೆ ಪೂರಕವಾಗಿ ಸೆಪ್ಟೆಂಬರ್ ೭ ರಂದು ನಡೆಯುವ ಸಭೆಯ ಕುರಿತ ಹೆಚ್ಚಿನ ಮಾಹಿತಿಗೆ ೯೮೪೪೫೯೦೬೨೪/೯೯೬೪೧೨೫೩೪೧ ಗೆ ಸಂರ್ಪಕಿಸಬಹುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶುಕ್ರವಾರ, ಆಗಸ್ಟ್ 15, 2025
ಶ್ರಮಜೀವಿ ಆಟೋ ಮಾಲೀಕರು ಮತ್ತು ಚಾಲಕರ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ
ಕೊಟ್ಟಿಗೆಹಾರ:ಸ್ವಾತಂತ್ರ್ಯ ತಂದು ಕೊಡಲು ಶ್ರಮಿಸಿದ ಸಾವಿರಾರು ಹೋರಾಟಗಾರರ ತ್ಯಾಗ ಬಲಿದಾನವನ್ನು ಸ್ಮರಿಸಬೇಕಿದೆ ಎಂದು ಬಣಕಲ್ ಪ್ರೌಢಶಾಲೆಯ ಮುಖ್ಯಶಿಕ್ಷಕ ಶ್ರೀನಿವಾಸ್ ಹೇಳಿದರು.
ಬಣಕಲ್‌ನ ಶ್ರಮಜೀವಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ನಡೆದ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಿಜ ಅರ್ಥದಲ್ಲಿ ಪೂರ್ಣ ಸ್ವಾತಂತ್ರ ಇನ್ನೂ ಸಿಕ್ಕಿಲ್ಲ. ಎಲ್ಲರಿಗೂ ಸಮನಾಗಿ ಸ್ವಾತಂತ್ರ್ಯವೂ ಸಿಗುವಂತಾಗಬೇಕಿದೆ. ರಾಷ್ಟ್ರೀಯ ಹಬ್ಬಗಳ ಆಚರಣೆ ಮಕ್ಕಳು ಸೇರಿದಂತೇ ಎಲ್ಲರಲ್ಲೂ ದೇಶಾಭಿಮಾನವನ್ನು ಹೆಚ್ಚಿಸಲು ವೇದಿಕೆಯಾಗಿದೆ ಎಂದರು.
ದಾನಿಗಳಾದ ಬಿ.ಎನ್.ದಿವ್ಯಪ್ರಸಾದ್ ಧ್ವಜರೋಹಣ ನೆರವೇರಿಸಿದರು.
ಸಾಧಕರಾದ ಹಿಲಾರಿ ಜೋಸೆಫ್, ನಂದೀಶ್ ಬಂಕೇನಹಳ್ಳಿ, ಸೂರಿ ಬಣಕಲ್, ಮಾನವಿ ಬಗ್ಗಸಗೋಡು, ಶೇಖರ್ ಸಬ್ಲಿ ಮತ್ತು ದಾನಿಗಳಾದ ಬಿ.ಎನ್.ದೀಪಕ್, ಬಿ.ಎನ್.ದಿವ್ಯಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.
ಸ್ವಾತಂತ್ರ ದಿನಾಚರಣೆ ಅಂಗವಾಗಿ ಆಟೋಗಳನ್ನು ಆಕರ್ಷಕವಾಗಿ ಸಿಂಗರಿಸಲಾಯಿತು. ಬಣಕಲ್ ಪ್ರೌಢಶಾಲೆ ಮತ್ತು ರಿವರ್ ವ್ಯೂವ್ ಶಾಲೆಯ ವಿದ್ಯಾರ್ಥಿಗಳು ಬಣಕಲ್ ಮುಖ್ಯ ರಸ್ತೆಯಲ್ಲಿ ಮೆರವಣ ಗೆ ನಡೆಸಿದರು.
ಈ ಸಂದರ್ಭದಲ್ಲಿ ಶ್ರಮಜೀವಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಸುರೇಶ್, ಗೌರವ ಅಧ್ಯಕ್ಷರಾದ ಸಬ್ಲಿ ದೇವರಾಜ್ ಹಾಗೂ ಪದಾಧಿಕಾರಿಗಳು ಇದ್ದರು.
ವಿವಿಧೆಡೆ ಸಂಭ್ರಮದ ಸ್ವಾತಂತ್ರ ದಿನಾಚರಣೆ: ಬಣಕಲ್‌ನಲ್ಲಿ ವಿವಿದೆಡೆ ಸ್ವಾತಂತ್ರ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಧ್ವಜಾರೋಹಣವನ್ನು ಬಣಕಲ್ ಗ್ರಾ.ಪಂಯಲ್ಲಿ ಅಧ್ಯಕ್ಷರಾದ ಜರೀನಾ, ವಿದ್ಯಾಭಾರತಿ ಶಾಲೆಯಲ್ಲಿ ಸವಿತಾ ಸಮಾಜದ ಅಧ್ಯಕ್ಷ ಹರೀಶ್ ಫಲ್ಗುಣ , ಬಣಕಲ್ ಪ್ರೌಢಶಾಲೆಯಲ್ಲಿ ಕೋಶಾಧಿಕಾರಿ ಬಿ.ಕೆ.ಪೃಥ್ವಿ, ನಜರೆತ್ ಶಾಲೆಯಲ್ಲಿ ಪೋಷಕರಾದ ಭವ್ಯಾಭಟ್ ನೆರವೇರಿಸಿದರು.
ಬುಧವಾರ, ಆಗಸ್ಟ್ 6, 2025
ಶಾಸಕರ ತೇಜೋವಧೆ ಸರಿಯಲ್ಲ:ಸಬ್ಲಿ ದೇವರಾಜ್
ಬಣಕಲ್:ಮೂಡಿಗೆರೆ ಶಾಸಕರಾದ ನಯನ ಮೋಟಮ್ಮ ಅವರು ತಾಲ್ಲೂಕು ಗಣೇಶೋತ್ಸವ ಸಮಿತಿ ಲೋಗೋ ಮತ್ತು ಭಗವಾಧ್ವಜ ಸ್ತಂಭ ಸ್ಥಾಪನಾ ಕಾರ್ಯಕ್ರಮದಲ್ಲಿ ಕೇಸರಿ ಬಣ್ಣದ ಶಾಲು ಧರಿಸಿದ ಕಾರಣ ಶಾಸಕರನ್ನು ತೇಜೋವಧೆ ಮಾಡುವುದು ಸರಿಯಲ್ಲ ಎಂದು ತಾ.ಪಂ ಮಾಜಿ ಸದಸ್ಯರಾದ ಸಬ್ಲಿ ದೇವರಾಜು ಹೇಳಿದರು.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಾಸಕರಾಗಿ ಅವರು ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಶಾಸಕರಾದ ಮೇಲೆ ಒಂದು ಜಾತಿಗೆ, ಧರ್ಮಕ್ಕೆ ಹೇಗೆ ಸೀಮಿತರಾಗಲು ಸಾಧ್ಯ?. ಯಾವುದೇ ಧರ್ಮದ ಕಾರ್ಯಕ್ರಮದಲ್ಲ್ಲಿ ಆ ಧರ್ಮದ ಆಚರಣೆಯಂತೆಯೇ ಭಾಗವಹಿಸಬೇಕು ಅದು ಆ ಧರ್ಮಕ್ಕೆ ಕೊಡುವ ಗೌರವ. ಶಾಸಕರು ಮೊದಲಿನಿಂದಲೂ ದೇವರ ಮೇಲೆ ಅಪಾರ ಭಕ್ತಿ ಭಾವ ಹೊಂದಿರುವ ವ್ಯಕ್ತಿ. ಒಬ್ಬ ಶಾಸಕ ಹಿಂದೂ ಆಗಿರಲಿ, ಮುಸ್ಲಿಂ ಅಥವಾ ಕ್ರೈಸ್ತ ಅಥವಾ ಇನ್ನಾವುದೇ ಧರ್ಮದವರಾಗಿರಲಿ. ಇತರೆ ಧರ್ಮದ ಪೂಜೆ ಪುರಸ್ಕಾರ ಹಬ್ಬ ಹರಿದಿನಗಳಿಗೆ ಅವರ ಸಂಪ್ರದಾಯದಂತೆ ಭಾಗವಹಿಸಬೇಕು. ಅದು ಅಲ್ಲದೆ ಗಣೇಶ ಚತುರ್ಥಿ ಎಂಬುದು ಧರ್ಮ ಜಾತಿ ಮೀರಿ ನಡೆಯುವ ಹಬ್ಬವಾಗಿದೆ ಎಂದರು.
ಕೇಸರಿ ಬಣ್ಣದ ಶಾಲು ಯಾವುದೇ ಒಂದು ಸಂಘಟನೆಯ ಸ್ವತ್ತಲ್ಲ. ಮನೆಯ ಅಥವಾ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲರೂ ಕೇಸರಿ ಶಾಲನ್ನು ಧರಿಸುತ್ತಾರೆ. ಅದು ಸಹಜವೂ ಕೂಡ. ಅದರಲ್ಲಿ ತಪ್ಪು ಹುಡುಕುವ ಅಗತ್ಯವಿಲ್ಲ. ಒಬ್ಬ ಶಾಸಕರಿಂದ ಜನರಿಗೆ ಸ್ಪಂದನೆ, ಸೌಲಭ್ಯ, ಅನ್ಯ ಜಾತಿ, ಧರ್ಮಗಳೊಂದಿಗೆ ಸೌಹಾರ್ದತೆ ಇದೆಯೇ ಎಂಬುದನ್ನು ಗಮನಿಸಬೇಕೇ ಹೊರತು ಈ ರೀತಿಯ ವಿಷಯಗಳನಲ್ಲ. ಶಾಸಕರು ತಾಲ್ಲೂಕು ಗಣೇಶೋತ್ಸವ ಸಮಿತಿಯ ಕಾರ್ಯಕ್ರಮದ ವೇದಿಕೆಯಲ್ಲಿ ಯಾವ ಧರ್ಮದ ಬಗ್ಗೆಯೂ ಕೂಡ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಹೀಗಿರುವಾಗ ಈ ವಿಚಾರದಲ್ಲಿ ತಪ್ಪು ಹುಡುಕುವುದರಲ್ಲಿ ಅರ್ಥವಿಲ್ಲ ಎಂದು ತಿಳಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)