ಬುಧವಾರ, ಆಗಸ್ಟ್ 6, 2025

ಶಾಸಕರ ತೇಜೋವಧೆ ಸರಿಯಲ್ಲ:ಸಬ್ಲಿ ದೇವರಾಜ್

 ಬಣಕಲ್:ಮೂಡಿಗೆರೆ ಶಾಸಕರಾದ ನಯನ ಮೋಟಮ್ಮ ಅವರು ತಾಲ್ಲೂಕು ಗಣೇಶೋತ್ಸವ ಸಮಿತಿ ಲೋಗೋ ಮತ್ತು ಭಗವಾಧ್ವಜ ಸ್ತಂಭ ಸ್ಥಾಪನಾ ಕಾರ್ಯಕ್ರಮದಲ್ಲಿ ಕೇಸರಿ ಬಣ್ಣದ ಶಾಲು ಧರಿಸಿದ ಕಾರಣ ಶಾಸಕರನ್ನು ತೇಜೋವಧೆ ಮಾಡುವುದು ಸರಿಯಲ್ಲ ಎಂದು ತಾ.ಪಂ ಮಾಜಿ ಸದಸ್ಯರಾದ ಸಬ್ಲಿ ದೇವರಾಜು ಹೇಳಿದರು.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಾಸಕರಾಗಿ ಅವರು ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಶಾಸಕರಾದ ಮೇಲೆ ಒಂದು ಜಾತಿಗೆ, ಧರ್ಮಕ್ಕೆ ಹೇಗೆ ಸೀಮಿತರಾಗಲು ಸಾಧ್ಯ?. ಯಾವುದೇ ಧರ್ಮದ ಕಾರ್ಯಕ್ರಮದಲ್ಲ್ಲಿ ಆ ಧರ್ಮದ ಆಚರಣೆಯಂತೆಯೇ ಭಾಗವಹಿಸಬೇಕು ಅದು ಆ ಧರ್ಮಕ್ಕೆ ಕೊಡುವ ಗೌರವ. ಶಾಸಕರು ಮೊದಲಿನಿಂದಲೂ ದೇವರ ಮೇಲೆ ಅಪಾರ ಭಕ್ತಿ ಭಾವ ಹೊಂದಿರುವ ವ್ಯಕ್ತಿ. ಒಬ್ಬ ಶಾಸಕ ಹಿಂದೂ ಆಗಿರಲಿ, ಮುಸ್ಲಿಂ ಅಥವಾ ಕ್ರೈಸ್ತ ಅಥವಾ ಇನ್ನಾವುದೇ ಧರ್ಮದವರಾಗಿರಲಿ. ಇತರೆ ಧರ್ಮದ ಪೂಜೆ ಪುರಸ್ಕಾರ ಹಬ್ಬ ಹರಿದಿನಗಳಿಗೆ ಅವರ ಸಂಪ್ರದಾಯದಂತೆ ಭಾಗವಹಿಸಬೇಕು. ಅದು ಅಲ್ಲದೆ ಗಣೇಶ ಚತುರ್ಥಿ ಎಂಬುದು ಧರ್ಮ ಜಾತಿ ಮೀರಿ ನಡೆಯುವ ಹಬ್ಬವಾಗಿದೆ ಎಂದರು.
ಕೇಸರಿ ಬಣ್ಣದ ಶಾಲು ಯಾವುದೇ ಒಂದು ಸಂಘಟನೆಯ ಸ್ವತ್ತಲ್ಲ. ಮನೆಯ ಅಥವಾ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲರೂ ಕೇಸರಿ ಶಾಲನ್ನು ಧರಿಸುತ್ತಾರೆ. ಅದು ಸಹಜವೂ ಕೂಡ. ಅದರಲ್ಲಿ ತಪ್ಪು ಹುಡುಕುವ ಅಗತ್ಯವಿಲ್ಲ. ಒಬ್ಬ ಶಾಸಕರಿಂದ  ಜನರಿಗೆ ಸ್ಪಂದನೆ, ಸೌಲಭ್ಯ, ಅನ್ಯ ಜಾತಿ, ಧರ್ಮಗಳೊಂದಿಗೆ ಸೌಹಾರ್ದತೆ ಇದೆಯೇ ಎಂಬುದನ್ನು ಗಮನಿಸಬೇಕೇ ಹೊರತು ಈ ರೀತಿಯ ವಿಷಯಗಳನಲ್ಲ. ಶಾಸಕರು ತಾಲ್ಲೂಕು ಗಣೇಶೋತ್ಸವ ಸಮಿತಿಯ ಕಾರ್ಯಕ್ರಮದ ವೇದಿಕೆಯಲ್ಲಿ ಯಾವ ಧರ್ಮದ ಬಗ್ಗೆಯೂ ಕೂಡ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಹೀಗಿರುವಾಗ ಈ ವಿಚಾರದಲ್ಲಿ ತಪ್ಪು ಹುಡುಕುವುದರಲ್ಲಿ ಅರ್ಥವಿಲ್ಲ ಎಂದು ತಿಳಿಸಿದ್ದಾರೆ.

ಬುಧವಾರ, ಜೂನ್ 25, 2025

ವನ್ ಧನ್ ವಿಕಾಸ ಕೇಂದ್ರದ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಿ


ಬಣಕಲ್:ವನ್ ಧನ್ ವಿಕಾಸ ಕೇಂದ್ರದ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಸ್ವಾವಲಂಭಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಎನ್‌ಆರ್‌ಎಲ್‌ಎಂನ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶಾಲಿನಿ ಹೇಳಿದರು.
ಬಣಕಲ್ ಗ್ರಾ.ಪಂ ಸಭಾಂಗಣದಲ್ಲಿ ನಡೆದ ವಿಡಿವಿಕೆ ಮತ್ತು ಎಂಬ್ರಾಯಿಡರಿ ತರಬೇತಿ ಕುರಿತ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಮೀಣ ಮಹಿಳೆಯರ ಆರ್ಥಿಕ ಅಭಿವೃದ್ದಿ ಹಾಗೂ ಅರಣ್ಯ ಉತ್ಪನ್ನಗಳ ಮೌಲ್ಯವರ್ಧನೆಗಾಗಿ ಕೇಂದ್ರ ಸರ್ಕಾರದ ದೀನದಯಾಳ್ ಅಂತ್ಯೋದಯ ಯೋಜನೆಯ ರಾಷ್ಟೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಅಡಿಯಲ್ಲಿ ವನ್ ಧನ್ ವಿಕಾಸ್ ಕೇಂದ್ರಗಳು ಸ್ಥಾಪನೆಯಾಗಿವೆ. ಈ ಯೋಜನೆಯು ಮಹಿಳಾ ಸ್ವಸಹಾಯ ಗುಂಪುಗಳ ಮೂಲಕ ಪ್ರಾದೇಶಿಕ ಅರಣ್ಯ ಉತ್ಪನ್ನಗಳ ಸಂಗ್ರಹ, ಸಂಸ್ಕರಣೆ, ಪ್ಯಾಕೇಜಿಂಗ್ ಮತ್ತು ಮಾರಾಟಕ್ಕೆ ಅವಕಾಶ ನೀಡುತ್ತದೆ ಎಂದರು.
ಪಿಡಿಓ ಕೃಷ್ಣಪ್ಪ ಮಾತನಾಡಿ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು ಮಹಿಳೆಯರು ಆರ್ಥಿಕ ಸ್ವಾವಲಂಬನೆ ಪಡೆದುಕೊಳ್ಳಬಹುದಾಗಿದೆ. ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಕುಟುಂಬದ ಆದಾಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸಂಶುನ್ನಿಸ, ಎಫ್‌ಎಲ್‌ಸಿ ಉಮಾ, ಪ್ರಸಾದ್, ದೀಪಿಕಾ, ವಲಯ ಮೇಲ್ವಿಚಾರಕ ನಾಜೀಮ್, ಚೈತ್ರ ಬಣಕಲ್, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಇದ್ದರು.

ಸೋಮವಾರ, ಜೂನ್ 16, 2025

ಗುಂಡಿಗೆ ಬಿದ್ದು ಗಾಯಗೊಂಡಿದ್ದ ಜಿಂಕೆಯ ರಕ್ಷಣೆ

ಉದುಸೆ ಗ್ರಾಮದ ಮನೆಯೊಂದರ ಸಮೀಪ ನಿರ್ಮಾಣ ಹಂತದಲ್ಲಿದ್ದ ಶೌಚಾಲಯದ ಗುಂಡಿಗೆ ಬಿದ್ದು ಗಾಯಗೊಂಡಿದ್ದ ಜಿಂಕೆಯನ್ನು ರಕ್ಷಣೆ ಮಾಡಲಾಯಿತು.
ಉದುಸೆ ಗ್ರಾಮದ ಮನೆಯೊಂದರ ಬಳಿ ನಿರ್ಮಾಣ ಹಂತದಲ್ಲಿದ್ದ ಶೌಚಾಲಯದ ಗುಂಡಿಗೆ ಬಿದ್ದು ಜಿಂಕೆಯೊಂದು ಗಾಯಗೊಂಡಿದ್ದು ಕೂಡಲೇ ಸ್ಥಳೀಯರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ವಲಯ ಅರಣ್ಯಾಧಿಕಾರಿ ಕಾವ್ಯ, ಉಪವಲಯ ಅರಣ್ಯಾಧಿಕಾರಿ ರವಿರಾಜ್ ಜಿಂಕೆಯನ್ನು ರಕ್ಷಣೆ ಮಾಡಿದರು. ಬಣಕಲ್ ಪಶು ಆಸ್ಪತ್ರೆಯ ಪಶು ವೈದ್ಯಾಧಿಕಾರಿ ಡಾ.ಪೂಜಾ ಮತ್ತು ಸಹ ಪಶುವೈದ್ಯರಾದ ಡಾ.ಮಸಿಯಣ್ಣ ಗಾಯಗೊಂಡ ಜಿಂಕೆಗೆ ಚಿಕಿತ್ಸೆ ನೀಡಿದರು. ಚೇತರಿಸಿಕೊಂಡ ಜಿಂಕೆಯನ್ನು ಅರಣ್ಯಕ್ಕೆ ಬಿಡಲಾಯಿತು.
 ಈ ಸಂದರ್ಭದಲ್ಲಿ ಅರಣ್ಯ ಕ್ಷೇಮಾಭಿವೃದ್ದಿ ನೌಕರ ಉದಯ್ ಹಾಗೂ ಗ್ರಾ.ಪಂ ಸದಸ್ಯೆ ಇಂದ್ರಮ್ಮ ರಾಜೇಗೌಡ, ಗ್ರಾಮಸ್ಥ ಮಧು ಮುಂತಾದವರು ಇದ್ದರು.

ಮಂಗಳವಾರ, ಜೂನ್ 10, 2025

ತೇಜಸ್ವಿ ಪ್ರತಿಷ್ಠಾನದಲ್ಲಿ ಮೂಡಿಗೆರೆ ಸಿನಿಮಾಹಬ್ಬ

ಕೊಟ್ಟಿಗೆಹಾರ:ಜಾಗತಿಕ ಸಿನಿಮಾಗಳ ವೀಕ್ಷಣೆಯಿಂದ ಅರಿವನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯ ಐವಾನ್ ಡಿಸಿಲ್ವಾ ಹೇಳಿದರು.

ಮನುಜಮತ ಸಿನಿಯಾನ ಮತ್ತು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ಕೊಟ್ಟಿಗೆಹಾರದ ತೇಜಸ್ವಿ ಪ್ರತಿಷ್ಠಾನದಲ್ಲಿ ಎರಡು ದಿನಗಳ ಕಾಲ ನಡೆದ ಮೂಡಿಗೆರೆ ಸಿನಿಮಾಹಬ್ಬದಲ್ಲಿ ಭಾಗವಹಿಸಿ ಮಾತನಾಡಿದರು.
ಮನುಜಮತ ಸಿನಿಯಾನ ೨೦೧೬ ರಲ್ಲಿ ಜಾಗತಿಕ ಸಿನಿಮಾಗಳ ವೀಕ್ಷಣೆ ಮತ್ತು ಸಂವಾದಕ್ಕಾಗಿ ಹುಟ್ಟಿಕೊಂಡ ಸಿನಿಮಾಸಕ್ತರ ತಂಡ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಸ್ಥಳೀಯ ಸಿನಿಮಾಸಕ್ತರೊಂದಿಗೆ ಸೇರಿಕೊಂಡು ಎರಡು ದಿನಗಳ ನಿರ್ದಿಷ್ಟ ವಿಷಯಾಧಾರಿತ ಸಿನಿಮಾ ಹಬ್ಬಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ದೇಶೀಯ, ಅಂತರಾಷ್ಟೀಯ ಸಿನಿಮಾಗಳ ವೀಕ್ಷಣೆ, ಚರ್ಚೆ ಮತ್ತು ಸಂವಾದವನ್ನು ಏರ್ಪಡಿಸುವುದು, ಈ ಮೂಲಕ ಪ್ರಜ್ಞಾವಂತ ಪ್ರಬುದ್ದ ಸಿನಿಮಾ ವೀಕ್ಷಕರನ್ನು ಸೃಷ್ಟಿಸುವುದು ಮನುಜಮತ ಸಿನಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯರಾದ ಪ್ರದೀಪ್ ಕೆಂಜಿಗೆ ಮಾತನಾಡಿ, ಸಿನಿಮಾ ಮತ್ತು ನಾಟಕ ಮುಂತಾದ ಚಟುವಟಿಕೆಗಳಿಗೆ ಪೂರಕವಾಗಿರುವ ಸಭಾಂಗಣ ಮತ್ತು ವಸತಿಗೃಹ ನಿರ್ಮಾಣವಾಗುತ್ತಿದ್ದು ಕೆಲ ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಸಿನಿಮಾ ಪ್ರದರ್ಶನ, ನಾಟಕ, ವಿಚಾರ ಸಂಕಿರಣ, ಸಂವಾದ, ಕಾರ್ಯಾಗಾರಗಳು ನಿರಂತರವಾಗಿ ನಡೆಯಲಿದೆ ಎಂದರು.
ವನ್ಯಜೀವಿ ಛಾಯಾಗ್ರಾಹಕ ಡಾ.ಲೋಕೇಶ್ ಮೊಸಳೆ ಅವರಿಂದ ಸಿನಿಮಾದಲ್ಲಿ ಧ್ವನಿ ಬೆಳಕು, ಸಿನಿಮಾಟೋಗ್ರಫಿ ಕುರಿತ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ನಡೆಯಿತು. ಅಬ್ಬಾಸ್ ಅಮೀನಿ ನಿರ್ದೇಶನದ ಎಂಡ್ ಲೆಸ್ ಬಾಡರ‍್ಸ್, ಇಂಗ್ಮರ್ ಬರ್ಗ್ ಮೆನ್ ನಿರ್ದೇಶನದ ಶೇಮ್, ಎಲೆಮ್ ಕ್ಲಿಮೋವ್ ನಿರ್ದೇಶನದ ಕಮ್ ಆಂಡ್ ಸೀ ಸಿನಿಮಾ ಹಾಗೂ ಯುವಲ್ ಅವ್ರಹಾಮ್, ಬಾಸೆಲ್ ಅಡ್ರಾ ಮತ್ತು ಹಂದಾನ್ ಬಳ್ಳಾಲ್ ನಿರ್ದೇಶನದ ನೋ ಅದರ್ ಲ್ಯಾಂಡ್ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.
ಕಲಾವಿದ ಮತ್ತು ತೇಜಸ್ವಿ ಒಡನಾಡಿ ಬಾಪು ದಿನೇಶ್ ಮಾತನಾಡಿ, ಅಂತರಾಷ್ಟೀಯ ಸಿನಿಮಾಗಳ ವೀಕ್ಷಣೆಯಿಂದ ಆ ನೆಲದ ಜನಜೀವನ, ಸಂಕಷ್ಟ, ರಾಜಕೀಯದ ಚಿತ್ರಣ ನೋಡುಗರ ಎದೆಗೆ ದಾಟುತ್ತದೆ. ಸಿನಿಮಾ ಪರಿಣಾಮಕಾರಿ ಮಾಧ್ಯಮವಾಗಿದ್ದು ಹೊಸ ನೋಟವನ್ನು ನೀಡುತ್ತದೆ ಎಂದರು.
ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರಾದ ವಿಷ್ಣುಕುಮಾರ್, ದೇಶಾದ್ರಿ ಹೊಸಮನಿ, ಶಿವಮೊಗ್ಗ ಜಿಲ್ಲಾ ವಾರ್ತಾಧಿಕಾರಿ ಭಾಗ್ಯ ಕೆ.ಟಿ, ಕುವೆಂಪು ಭಾಷಾಪ್ರಾಧಿಕಾರದ ಸದಸ್ಯರಾದ ಭಾರತಿ ದೇವಿ, ಸಾಹಿತಿ ಹಾಗೂ ಸಿನಿಮಾ ಚಿತ್ರಕಥಾಕಾರರಾದ ಶಿಲ್ಪ ಕೆ.ಆರ್, ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿಗಳಾದ ಸತೀಶ್ ತರುವೆ, ಸಂಗೀತಾ, ಕೀಟ ತಜ್ಞರಾದ ಡಾ.ಅವಿನಾಶ್, ಲೇಖಕ ಪೂರ್ಣೇಶ್ ಮತ್ತಾವರ ಮುಂತಾದವರು ಇದ್ದರು.

ಮಂಗಳವಾರ, ಏಪ್ರಿಲ್ 22, 2025

ಬಣಕಲ್ ಸುತ್ತಮುತ್ತ ಭಾರಿ ಗಾಳಿ‌ ಮಳೆ:ಹಾರಿ ಹೋದ ಬಣಕಲ್ ವಿಧ್ಯಾಭಾರತಿ ಶಾಲೆಯ ಮೇಲ್ಛಾವಣಿ

 ಬಣಕಲ್:ಬಣಕಲ್ ಸುತ್ತಮುತ್ತ ಸೋಮವಾರ ರಾತ್ರಿ ಗಾಳಿ ಸಹಿತ ಭಾರಿ ಮಳೆಯಾಗಿದ್ದು ಮಳೆಯಿಂದಾಗಿ ಬಣಕಲ್ ಶ್ರೀವಿದ್ಯಾಭಾರತಿ ಶಾಲೆಯ ಕಬ್ಬಿಣದ ಮೇಲ್ಛಾವಣಿ ಹಾರಿ ಹೋಗಿದೆ.
 ಗಾಳಿ ಮಳೆಯ ತೀವ್ರತೆಯಿಂದಾಗಿ ಮೇಲ್ಛಾವಣಿಯ ಕಬ್ಬಿಣದ ಕಂಬಿಗಳು ಬಾಗಿದ್ದು ಗೋಡೆಗಳು ಬಿರುಕು ಬಿಟ್ಟಿದ್ದೆ. ಅಧೃಷ್ಟವಶಾತ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಸ್ಥಳಕ್ಕೆ ಶಾಲಾ ಸಮಿತಿಯ ಪದಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು
. ಈ ಸಂದರ್ಭದಲ್ಲಿಮಾತನಾಡಿದ ಶಾಲಾ ಸಮಿತಿಯ ಅಧ್ಯಕ್ಷರಾದ ಶಿವರಾಮ ಶೆಟ್ಟಿ ಮಾತನಾಡಿ, ಸಂಸದರ ಅನುದಾನದಲ್ಲಿ ನಿರ್ಮಿಸಲಾಗಿದ್ದ ಮೇಲ್ಛಾವಣಿ  ಗಾಳಿ ಮಳೆಯಿಂದ  ಹಾರಿ ಹೋಗಿ ಸುಮಾರು 4 ಲಕ್ಷ ನಷ್ಟ ಸಂಭವಿಸಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ ಅವರಿಗೂ ದುರಸ್ತಿ ಮಾಡಿ ಕೊಡುವಂತೇ ಮನವಿ ಮಾಡಲಾಗಿದೆ. ಶಾಲೆಗೆ ರಜೆ ಇದ್ದುದ್ದರಿಂದ ಮತ್ತು ರಾತ್ರಿ ಸಮಯದಲ್ಲಿ ಈ ಘಟನೆ ನಡೆದಿದ್ದುರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
 ಬಣಕಲ್ ನ ಶ್ರೀವಿದ್ಯಾಭಾರತಿ ಶಾಲೆಯೂ ಹಲವು ವರ್ಷಗಳಿಂದ ಶೇ 100 ಫಲಿತಾಂಶವನ್ನು ಪಡೆದುಕೊಂಡು ಬರುತ್ತಿದೆ. ಶಾಲೆಗೆ ಬರುವ ರಸ್ತೆಯೂ ಸಂಪೂರ್ಣ ಹಾಳಾಗಿದೆ. ಇದೀಗ ಶಾಲಾ ಕಟ್ಟಡದ ಮೇಲ್ಚಾವಣಿಯೂ ಹಾನಿಯಾಗಿದ್ದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನೆರವಿಗೆ ಬರಬೇಕಿದೆ. ಎಂದರು.
ಈ ಸಂದರ್ಭದಲ್ಲಿ ಶಾಲಾ ಸಮಿತಿಯ ಲಿಂಗಪ್ಪ ಹಾಗೂ ಶಿಕ್ಷಕರು ಇದ್ದರು‌.

ಶುಕ್ರವಾರ, ಏಪ್ರಿಲ್ 18, 2025

ತೇಜಸ್ವಿ ಪ್ರತಿಷ್ಠಾನಕ್ಕೆ ತರೀಕೆರೆ ಶಾಸಕರಾದ ಜಿ.ಹೆಚ್.ಶ್ರೀನಿವಾಸ್ ಭೇಟಿ

 ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ತರೀಕೆರೆ ಕ್ಷೇತ್ರದ ಶಾಸಕರಾದ ಜಿ.ಹೆಚ್. ಶ್ರೀನಿವಾಸ್ ಅವರು ಕುಟುಂಬ ಸಮೇತರಾಗಿ ಶುಕ್ರವಾರ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೂಡಿಗೆರೆ ಮಾಯಾವಿ ಎಂದೇ ಹೆಸರುವಾಸಿಯಾದ ತೇಜಸ್ವಿಯವರ ನೆನಪುಗಳನ್ನು, ಅವರ ಆಲೋಚನೆಗಳನ್ನು, ಅವರ ಪರಿಸರದ ಪ್ರೇಮವನ್ನು ಮರುಕಳಿಸುವಂತೆ ಮಾಡಿರುವ ತೇಜಸ್ವಿ  ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ. ಪ್ರತಿಷ್ಠಾನದಲ್ಲಿ ಕಳೆದ ಕೆಲ ಸಮಯ ತೇಜಸ್ವಿಯವರ ಪುಸ್ತಕಗಳನ್ಜು ಓದಿದ ಸವಿನೆನಪನ್ನು ನೆನಪಿಸಿತು. ಅವರ ಬದುಕಿನ ಚಿತ್ರಣಗಳನ್ನು ಸಂಗ್ರಹಿಸಿರುವ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದರು.
ತೇಜಸ್ವಿ ಪ್ರತಿಷ್ಠಾನದ ವಸ್ತು ಸಂಗ್ರಹಾಲಯದಲ್ಲಿರುವ ಹಳೆಯ ಸಾಮಾಗ್ರಿಗಳನ್ನು ಕಂಡು ಬಾಲ್ಯದ ದಿನಗಳು ನೆನಪಾಯಿತು. ಕೀಟ ಸಂಗ್ರಹಾಲಯವೂ ಆಕರ್ಷಣೀಯವಾಗಿತ್ತು. ಮುಖ್ಯಮಂತ್ರಿಗಳು ತೇಜಸ್ವಿ ಪ್ರತಿಷ್ಠಾನಕ್ಕೆ ಈ ಮುಂಚೆ ಅನುದಾನವನ್ನು ನೀಡಿದ್ದರು. ಮುಂದಿನ ದಿನಗಳಲ್ಲಿ ಪ್ರತಿಷ್ಠಾನದ ಅಭಿವೃದ್ದಿಗೆ ಮತ್ತಷ್ಟು ಅನುದಾನ ನೀಡುವಂತೇ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗುವುದು ಎಂದರು.

ಸೋಮವಾರ, ಏಪ್ರಿಲ್ 14, 2025

ಮಹಿಳೆಗೆ ಲೈಂಗಿಕ ಕಿರುಕುಳ ಮತ್ತು ಹಲ್ಲೆ:ಪ್ರಕರಣ ದಾಖಲು

ಮೂಡಿಗೆರೆ: ತಾಲೂಕು ಬಣಕಲ್ ಹೋಬಳಿಯ ಕೊಟ್ಟಿಗೆಹಾರ ಪ್ರದೇಶದಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿನಾಂಕ 12.04.2025 ರಂದು ಸಂಜೆ 6 ಗಂಟೆಯ ಸುಮಾರಿಗೆ ಅಜಾದ್ ನಗರದಲ್ಲಿ ಈ ದುಷ್ಕೃತ್ಯ ನಡೆದಿದೆ. ಈ ಬಗ್ಗೆ ಪೀಡಿತ ಮಹಿಳೆ  ದಿನಾಂಕ 13.04.2025 ರಂದು ರಾತ್ರಿ 11 ಗಂಟೆಗೆ ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ ಭೇಟಿ ನೀಡಿ ದೂರು ನೀಡಿದ್ದರು.

ದೂರಿನ ವಿವರಗಳ ಪ್ರಕಾರ, ಆಕೆಯು ಮನೆಯಲ್ಲಿ ಒಬ್ಬಳೇ ಇದ್ದಾಗ, ರಾಮನಗರದ ಅಬ್ಬಾಸ್ ಎಂಬ ವ್ಯಕ್ತಿ ಮನೆಗೆ ಬಂದು ವಾಹನದ ಬಾಡಿಗೆ ಬಾಕಿ ಹಣ 700 ರೂ. ತಕ್ಷಣ ನೀಡುವಂತೆ ಒತ್ತಾಯಿಸಿದ್ದ. ಹಣ ಇಲ್ಲವೆಂದಾಗ, “ಹಣ ಬೇಡ, ನನ್ನ ಜೊತೆ ಮಲಗಿಕೋ” ಎಂದು ಹೇಳಿ ಆಕೆಯ ಬಲಗೈ ಹಿಡಿದು ಎಳೆಯುವ ಪ್ರಯತ್ನ ನಡೆಸಿದ್ದ. ಮಹಿಳೆ ತಪ್ಪಿಸಿಕೊಂಡು ಓಡಿದಾಗ ಆಕೆಯ ಕೂದಲನ್ನು ಹಿಡಿದು ಹೊಟ್ಟೆ ಹಾಗೂ ಸೊಂಟಕ್ಕೆ ಲಾತಿಯಿಂದ ಬಡಿದು ತಳ್ಳಿ ಕೆಳಗೆ ಬೀಳಿಸಿದ್ದಾನೆ. ನಂತರ ಮಹಿಳೆ ತನ್ನ ಮಗಳನ್ನು ಕರೆಸಿದಾಗ, ಮನೆಗೆ ಬಂದ ಮಗಳನ್ನು ಕೂಡ ದೈಹಿಕವಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.