ಬುಧವಾರ, ಜೂನ್ 25, 2025

ವನ್ ಧನ್ ವಿಕಾಸ ಕೇಂದ್ರದ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಿ


ಬಣಕಲ್:ವನ್ ಧನ್ ವಿಕಾಸ ಕೇಂದ್ರದ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಸ್ವಾವಲಂಭಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಎನ್‌ಆರ್‌ಎಲ್‌ಎಂನ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶಾಲಿನಿ ಹೇಳಿದರು.
ಬಣಕಲ್ ಗ್ರಾ.ಪಂ ಸಭಾಂಗಣದಲ್ಲಿ ನಡೆದ ವಿಡಿವಿಕೆ ಮತ್ತು ಎಂಬ್ರಾಯಿಡರಿ ತರಬೇತಿ ಕುರಿತ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಮೀಣ ಮಹಿಳೆಯರ ಆರ್ಥಿಕ ಅಭಿವೃದ್ದಿ ಹಾಗೂ ಅರಣ್ಯ ಉತ್ಪನ್ನಗಳ ಮೌಲ್ಯವರ್ಧನೆಗಾಗಿ ಕೇಂದ್ರ ಸರ್ಕಾರದ ದೀನದಯಾಳ್ ಅಂತ್ಯೋದಯ ಯೋಜನೆಯ ರಾಷ್ಟೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಅಡಿಯಲ್ಲಿ ವನ್ ಧನ್ ವಿಕಾಸ್ ಕೇಂದ್ರಗಳು ಸ್ಥಾಪನೆಯಾಗಿವೆ. ಈ ಯೋಜನೆಯು ಮಹಿಳಾ ಸ್ವಸಹಾಯ ಗುಂಪುಗಳ ಮೂಲಕ ಪ್ರಾದೇಶಿಕ ಅರಣ್ಯ ಉತ್ಪನ್ನಗಳ ಸಂಗ್ರಹ, ಸಂಸ್ಕರಣೆ, ಪ್ಯಾಕೇಜಿಂಗ್ ಮತ್ತು ಮಾರಾಟಕ್ಕೆ ಅವಕಾಶ ನೀಡುತ್ತದೆ ಎಂದರು.
ಪಿಡಿಓ ಕೃಷ್ಣಪ್ಪ ಮಾತನಾಡಿ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು ಮಹಿಳೆಯರು ಆರ್ಥಿಕ ಸ್ವಾವಲಂಬನೆ ಪಡೆದುಕೊಳ್ಳಬಹುದಾಗಿದೆ. ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಕುಟುಂಬದ ಆದಾಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸಂಶುನ್ನಿಸ, ಎಫ್‌ಎಲ್‌ಸಿ ಉಮಾ, ಪ್ರಸಾದ್, ದೀಪಿಕಾ, ವಲಯ ಮೇಲ್ವಿಚಾರಕ ನಾಜೀಮ್, ಚೈತ್ರ ಬಣಕಲ್, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಇದ್ದರು.

ಸೋಮವಾರ, ಜೂನ್ 16, 2025

ಗುಂಡಿಗೆ ಬಿದ್ದು ಗಾಯಗೊಂಡಿದ್ದ ಜಿಂಕೆಯ ರಕ್ಷಣೆ

ಉದುಸೆ ಗ್ರಾಮದ ಮನೆಯೊಂದರ ಸಮೀಪ ನಿರ್ಮಾಣ ಹಂತದಲ್ಲಿದ್ದ ಶೌಚಾಲಯದ ಗುಂಡಿಗೆ ಬಿದ್ದು ಗಾಯಗೊಂಡಿದ್ದ ಜಿಂಕೆಯನ್ನು ರಕ್ಷಣೆ ಮಾಡಲಾಯಿತು.
ಉದುಸೆ ಗ್ರಾಮದ ಮನೆಯೊಂದರ ಬಳಿ ನಿರ್ಮಾಣ ಹಂತದಲ್ಲಿದ್ದ ಶೌಚಾಲಯದ ಗುಂಡಿಗೆ ಬಿದ್ದು ಜಿಂಕೆಯೊಂದು ಗಾಯಗೊಂಡಿದ್ದು ಕೂಡಲೇ ಸ್ಥಳೀಯರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ವಲಯ ಅರಣ್ಯಾಧಿಕಾರಿ ಕಾವ್ಯ, ಉಪವಲಯ ಅರಣ್ಯಾಧಿಕಾರಿ ರವಿರಾಜ್ ಜಿಂಕೆಯನ್ನು ರಕ್ಷಣೆ ಮಾಡಿದರು. ಬಣಕಲ್ ಪಶು ಆಸ್ಪತ್ರೆಯ ಪಶು ವೈದ್ಯಾಧಿಕಾರಿ ಡಾ.ಪೂಜಾ ಮತ್ತು ಸಹ ಪಶುವೈದ್ಯರಾದ ಡಾ.ಮಸಿಯಣ್ಣ ಗಾಯಗೊಂಡ ಜಿಂಕೆಗೆ ಚಿಕಿತ್ಸೆ ನೀಡಿದರು. ಚೇತರಿಸಿಕೊಂಡ ಜಿಂಕೆಯನ್ನು ಅರಣ್ಯಕ್ಕೆ ಬಿಡಲಾಯಿತು.
 ಈ ಸಂದರ್ಭದಲ್ಲಿ ಅರಣ್ಯ ಕ್ಷೇಮಾಭಿವೃದ್ದಿ ನೌಕರ ಉದಯ್ ಹಾಗೂ ಗ್ರಾ.ಪಂ ಸದಸ್ಯೆ ಇಂದ್ರಮ್ಮ ರಾಜೇಗೌಡ, ಗ್ರಾಮಸ್ಥ ಮಧು ಮುಂತಾದವರು ಇದ್ದರು.

ಮಂಗಳವಾರ, ಜೂನ್ 10, 2025

ತೇಜಸ್ವಿ ಪ್ರತಿಷ್ಠಾನದಲ್ಲಿ ಮೂಡಿಗೆರೆ ಸಿನಿಮಾಹಬ್ಬ

ಕೊಟ್ಟಿಗೆಹಾರ:ಜಾಗತಿಕ ಸಿನಿಮಾಗಳ ವೀಕ್ಷಣೆಯಿಂದ ಅರಿವನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯ ಐವಾನ್ ಡಿಸಿಲ್ವಾ ಹೇಳಿದರು.

ಮನುಜಮತ ಸಿನಿಯಾನ ಮತ್ತು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ಕೊಟ್ಟಿಗೆಹಾರದ ತೇಜಸ್ವಿ ಪ್ರತಿಷ್ಠಾನದಲ್ಲಿ ಎರಡು ದಿನಗಳ ಕಾಲ ನಡೆದ ಮೂಡಿಗೆರೆ ಸಿನಿಮಾಹಬ್ಬದಲ್ಲಿ ಭಾಗವಹಿಸಿ ಮಾತನಾಡಿದರು.
ಮನುಜಮತ ಸಿನಿಯಾನ ೨೦೧೬ ರಲ್ಲಿ ಜಾಗತಿಕ ಸಿನಿಮಾಗಳ ವೀಕ್ಷಣೆ ಮತ್ತು ಸಂವಾದಕ್ಕಾಗಿ ಹುಟ್ಟಿಕೊಂಡ ಸಿನಿಮಾಸಕ್ತರ ತಂಡ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಸ್ಥಳೀಯ ಸಿನಿಮಾಸಕ್ತರೊಂದಿಗೆ ಸೇರಿಕೊಂಡು ಎರಡು ದಿನಗಳ ನಿರ್ದಿಷ್ಟ ವಿಷಯಾಧಾರಿತ ಸಿನಿಮಾ ಹಬ್ಬಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ದೇಶೀಯ, ಅಂತರಾಷ್ಟೀಯ ಸಿನಿಮಾಗಳ ವೀಕ್ಷಣೆ, ಚರ್ಚೆ ಮತ್ತು ಸಂವಾದವನ್ನು ಏರ್ಪಡಿಸುವುದು, ಈ ಮೂಲಕ ಪ್ರಜ್ಞಾವಂತ ಪ್ರಬುದ್ದ ಸಿನಿಮಾ ವೀಕ್ಷಕರನ್ನು ಸೃಷ್ಟಿಸುವುದು ಮನುಜಮತ ಸಿನಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯರಾದ ಪ್ರದೀಪ್ ಕೆಂಜಿಗೆ ಮಾತನಾಡಿ, ಸಿನಿಮಾ ಮತ್ತು ನಾಟಕ ಮುಂತಾದ ಚಟುವಟಿಕೆಗಳಿಗೆ ಪೂರಕವಾಗಿರುವ ಸಭಾಂಗಣ ಮತ್ತು ವಸತಿಗೃಹ ನಿರ್ಮಾಣವಾಗುತ್ತಿದ್ದು ಕೆಲ ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಸಿನಿಮಾ ಪ್ರದರ್ಶನ, ನಾಟಕ, ವಿಚಾರ ಸಂಕಿರಣ, ಸಂವಾದ, ಕಾರ್ಯಾಗಾರಗಳು ನಿರಂತರವಾಗಿ ನಡೆಯಲಿದೆ ಎಂದರು.
ವನ್ಯಜೀವಿ ಛಾಯಾಗ್ರಾಹಕ ಡಾ.ಲೋಕೇಶ್ ಮೊಸಳೆ ಅವರಿಂದ ಸಿನಿಮಾದಲ್ಲಿ ಧ್ವನಿ ಬೆಳಕು, ಸಿನಿಮಾಟೋಗ್ರಫಿ ಕುರಿತ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ನಡೆಯಿತು. ಅಬ್ಬಾಸ್ ಅಮೀನಿ ನಿರ್ದೇಶನದ ಎಂಡ್ ಲೆಸ್ ಬಾಡರ‍್ಸ್, ಇಂಗ್ಮರ್ ಬರ್ಗ್ ಮೆನ್ ನಿರ್ದೇಶನದ ಶೇಮ್, ಎಲೆಮ್ ಕ್ಲಿಮೋವ್ ನಿರ್ದೇಶನದ ಕಮ್ ಆಂಡ್ ಸೀ ಸಿನಿಮಾ ಹಾಗೂ ಯುವಲ್ ಅವ್ರಹಾಮ್, ಬಾಸೆಲ್ ಅಡ್ರಾ ಮತ್ತು ಹಂದಾನ್ ಬಳ್ಳಾಲ್ ನಿರ್ದೇಶನದ ನೋ ಅದರ್ ಲ್ಯಾಂಡ್ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.
ಕಲಾವಿದ ಮತ್ತು ತೇಜಸ್ವಿ ಒಡನಾಡಿ ಬಾಪು ದಿನೇಶ್ ಮಾತನಾಡಿ, ಅಂತರಾಷ್ಟೀಯ ಸಿನಿಮಾಗಳ ವೀಕ್ಷಣೆಯಿಂದ ಆ ನೆಲದ ಜನಜೀವನ, ಸಂಕಷ್ಟ, ರಾಜಕೀಯದ ಚಿತ್ರಣ ನೋಡುಗರ ಎದೆಗೆ ದಾಟುತ್ತದೆ. ಸಿನಿಮಾ ಪರಿಣಾಮಕಾರಿ ಮಾಧ್ಯಮವಾಗಿದ್ದು ಹೊಸ ನೋಟವನ್ನು ನೀಡುತ್ತದೆ ಎಂದರು.
ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರಾದ ವಿಷ್ಣುಕುಮಾರ್, ದೇಶಾದ್ರಿ ಹೊಸಮನಿ, ಶಿವಮೊಗ್ಗ ಜಿಲ್ಲಾ ವಾರ್ತಾಧಿಕಾರಿ ಭಾಗ್ಯ ಕೆ.ಟಿ, ಕುವೆಂಪು ಭಾಷಾಪ್ರಾಧಿಕಾರದ ಸದಸ್ಯರಾದ ಭಾರತಿ ದೇವಿ, ಸಾಹಿತಿ ಹಾಗೂ ಸಿನಿಮಾ ಚಿತ್ರಕಥಾಕಾರರಾದ ಶಿಲ್ಪ ಕೆ.ಆರ್, ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿಗಳಾದ ಸತೀಶ್ ತರುವೆ, ಸಂಗೀತಾ, ಕೀಟ ತಜ್ಞರಾದ ಡಾ.ಅವಿನಾಶ್, ಲೇಖಕ ಪೂರ್ಣೇಶ್ ಮತ್ತಾವರ ಮುಂತಾದವರು ಇದ್ದರು.

ಮಂಗಳವಾರ, ಏಪ್ರಿಲ್ 22, 2025

ಬಣಕಲ್ ಸುತ್ತಮುತ್ತ ಭಾರಿ ಗಾಳಿ‌ ಮಳೆ:ಹಾರಿ ಹೋದ ಬಣಕಲ್ ವಿಧ್ಯಾಭಾರತಿ ಶಾಲೆಯ ಮೇಲ್ಛಾವಣಿ

 ಬಣಕಲ್:ಬಣಕಲ್ ಸುತ್ತಮುತ್ತ ಸೋಮವಾರ ರಾತ್ರಿ ಗಾಳಿ ಸಹಿತ ಭಾರಿ ಮಳೆಯಾಗಿದ್ದು ಮಳೆಯಿಂದಾಗಿ ಬಣಕಲ್ ಶ್ರೀವಿದ್ಯಾಭಾರತಿ ಶಾಲೆಯ ಕಬ್ಬಿಣದ ಮೇಲ್ಛಾವಣಿ ಹಾರಿ ಹೋಗಿದೆ.
 ಗಾಳಿ ಮಳೆಯ ತೀವ್ರತೆಯಿಂದಾಗಿ ಮೇಲ್ಛಾವಣಿಯ ಕಬ್ಬಿಣದ ಕಂಬಿಗಳು ಬಾಗಿದ್ದು ಗೋಡೆಗಳು ಬಿರುಕು ಬಿಟ್ಟಿದ್ದೆ. ಅಧೃಷ್ಟವಶಾತ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಸ್ಥಳಕ್ಕೆ ಶಾಲಾ ಸಮಿತಿಯ ಪದಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು
. ಈ ಸಂದರ್ಭದಲ್ಲಿಮಾತನಾಡಿದ ಶಾಲಾ ಸಮಿತಿಯ ಅಧ್ಯಕ್ಷರಾದ ಶಿವರಾಮ ಶೆಟ್ಟಿ ಮಾತನಾಡಿ, ಸಂಸದರ ಅನುದಾನದಲ್ಲಿ ನಿರ್ಮಿಸಲಾಗಿದ್ದ ಮೇಲ್ಛಾವಣಿ  ಗಾಳಿ ಮಳೆಯಿಂದ  ಹಾರಿ ಹೋಗಿ ಸುಮಾರು 4 ಲಕ್ಷ ನಷ್ಟ ಸಂಭವಿಸಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ ಅವರಿಗೂ ದುರಸ್ತಿ ಮಾಡಿ ಕೊಡುವಂತೇ ಮನವಿ ಮಾಡಲಾಗಿದೆ. ಶಾಲೆಗೆ ರಜೆ ಇದ್ದುದ್ದರಿಂದ ಮತ್ತು ರಾತ್ರಿ ಸಮಯದಲ್ಲಿ ಈ ಘಟನೆ ನಡೆದಿದ್ದುರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
 ಬಣಕಲ್ ನ ಶ್ರೀವಿದ್ಯಾಭಾರತಿ ಶಾಲೆಯೂ ಹಲವು ವರ್ಷಗಳಿಂದ ಶೇ 100 ಫಲಿತಾಂಶವನ್ನು ಪಡೆದುಕೊಂಡು ಬರುತ್ತಿದೆ. ಶಾಲೆಗೆ ಬರುವ ರಸ್ತೆಯೂ ಸಂಪೂರ್ಣ ಹಾಳಾಗಿದೆ. ಇದೀಗ ಶಾಲಾ ಕಟ್ಟಡದ ಮೇಲ್ಚಾವಣಿಯೂ ಹಾನಿಯಾಗಿದ್ದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನೆರವಿಗೆ ಬರಬೇಕಿದೆ. ಎಂದರು.
ಈ ಸಂದರ್ಭದಲ್ಲಿ ಶಾಲಾ ಸಮಿತಿಯ ಲಿಂಗಪ್ಪ ಹಾಗೂ ಶಿಕ್ಷಕರು ಇದ್ದರು‌.

ಶುಕ್ರವಾರ, ಏಪ್ರಿಲ್ 18, 2025

ತೇಜಸ್ವಿ ಪ್ರತಿಷ್ಠಾನಕ್ಕೆ ತರೀಕೆರೆ ಶಾಸಕರಾದ ಜಿ.ಹೆಚ್.ಶ್ರೀನಿವಾಸ್ ಭೇಟಿ

 ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ತರೀಕೆರೆ ಕ್ಷೇತ್ರದ ಶಾಸಕರಾದ ಜಿ.ಹೆಚ್. ಶ್ರೀನಿವಾಸ್ ಅವರು ಕುಟುಂಬ ಸಮೇತರಾಗಿ ಶುಕ್ರವಾರ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೂಡಿಗೆರೆ ಮಾಯಾವಿ ಎಂದೇ ಹೆಸರುವಾಸಿಯಾದ ತೇಜಸ್ವಿಯವರ ನೆನಪುಗಳನ್ನು, ಅವರ ಆಲೋಚನೆಗಳನ್ನು, ಅವರ ಪರಿಸರದ ಪ್ರೇಮವನ್ನು ಮರುಕಳಿಸುವಂತೆ ಮಾಡಿರುವ ತೇಜಸ್ವಿ  ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ. ಪ್ರತಿಷ್ಠಾನದಲ್ಲಿ ಕಳೆದ ಕೆಲ ಸಮಯ ತೇಜಸ್ವಿಯವರ ಪುಸ್ತಕಗಳನ್ಜು ಓದಿದ ಸವಿನೆನಪನ್ನು ನೆನಪಿಸಿತು. ಅವರ ಬದುಕಿನ ಚಿತ್ರಣಗಳನ್ನು ಸಂಗ್ರಹಿಸಿರುವ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದರು.
ತೇಜಸ್ವಿ ಪ್ರತಿಷ್ಠಾನದ ವಸ್ತು ಸಂಗ್ರಹಾಲಯದಲ್ಲಿರುವ ಹಳೆಯ ಸಾಮಾಗ್ರಿಗಳನ್ನು ಕಂಡು ಬಾಲ್ಯದ ದಿನಗಳು ನೆನಪಾಯಿತು. ಕೀಟ ಸಂಗ್ರಹಾಲಯವೂ ಆಕರ್ಷಣೀಯವಾಗಿತ್ತು. ಮುಖ್ಯಮಂತ್ರಿಗಳು ತೇಜಸ್ವಿ ಪ್ರತಿಷ್ಠಾನಕ್ಕೆ ಈ ಮುಂಚೆ ಅನುದಾನವನ್ನು ನೀಡಿದ್ದರು. ಮುಂದಿನ ದಿನಗಳಲ್ಲಿ ಪ್ರತಿಷ್ಠಾನದ ಅಭಿವೃದ್ದಿಗೆ ಮತ್ತಷ್ಟು ಅನುದಾನ ನೀಡುವಂತೇ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗುವುದು ಎಂದರು.

ಸೋಮವಾರ, ಏಪ್ರಿಲ್ 14, 2025

ಮಹಿಳೆಗೆ ಲೈಂಗಿಕ ಕಿರುಕುಳ ಮತ್ತು ಹಲ್ಲೆ:ಪ್ರಕರಣ ದಾಖಲು

ಮೂಡಿಗೆರೆ: ತಾಲೂಕು ಬಣಕಲ್ ಹೋಬಳಿಯ ಕೊಟ್ಟಿಗೆಹಾರ ಪ್ರದೇಶದಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿನಾಂಕ 12.04.2025 ರಂದು ಸಂಜೆ 6 ಗಂಟೆಯ ಸುಮಾರಿಗೆ ಅಜಾದ್ ನಗರದಲ್ಲಿ ಈ ದುಷ್ಕೃತ್ಯ ನಡೆದಿದೆ. ಈ ಬಗ್ಗೆ ಪೀಡಿತ ಮಹಿಳೆ  ದಿನಾಂಕ 13.04.2025 ರಂದು ರಾತ್ರಿ 11 ಗಂಟೆಗೆ ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ ಭೇಟಿ ನೀಡಿ ದೂರು ನೀಡಿದ್ದರು.

ದೂರಿನ ವಿವರಗಳ ಪ್ರಕಾರ, ಆಕೆಯು ಮನೆಯಲ್ಲಿ ಒಬ್ಬಳೇ ಇದ್ದಾಗ, ರಾಮನಗರದ ಅಬ್ಬಾಸ್ ಎಂಬ ವ್ಯಕ್ತಿ ಮನೆಗೆ ಬಂದು ವಾಹನದ ಬಾಡಿಗೆ ಬಾಕಿ ಹಣ 700 ರೂ. ತಕ್ಷಣ ನೀಡುವಂತೆ ಒತ್ತಾಯಿಸಿದ್ದ. ಹಣ ಇಲ್ಲವೆಂದಾಗ, “ಹಣ ಬೇಡ, ನನ್ನ ಜೊತೆ ಮಲಗಿಕೋ” ಎಂದು ಹೇಳಿ ಆಕೆಯ ಬಲಗೈ ಹಿಡಿದು ಎಳೆಯುವ ಪ್ರಯತ್ನ ನಡೆಸಿದ್ದ. ಮಹಿಳೆ ತಪ್ಪಿಸಿಕೊಂಡು ಓಡಿದಾಗ ಆಕೆಯ ಕೂದಲನ್ನು ಹಿಡಿದು ಹೊಟ್ಟೆ ಹಾಗೂ ಸೊಂಟಕ್ಕೆ ಲಾತಿಯಿಂದ ಬಡಿದು ತಳ್ಳಿ ಕೆಳಗೆ ಬೀಳಿಸಿದ್ದಾನೆ. ನಂತರ ಮಹಿಳೆ ತನ್ನ ಮಗಳನ್ನು ಕರೆಸಿದಾಗ, ಮನೆಗೆ ಬಂದ ಮಗಳನ್ನು ಕೂಡ ದೈಹಿಕವಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಸೋಮವಾರ, ಜನವರಿ 6, 2025

ವಸ್ತು ಪ್ರದರ್ಶನದಲ್ಲಿ ಜ್ಞಾನ ವಿಜ್ಞಾನ ಕಲೆಯ ಅನಾವರಣ:ಜಿ.ಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೀರ್ತನ ಎಚ್.ಎಸ್ ಅಭಿಮತ


ಎಂಎಲ್‌ಎಂಎನ್ ಬಿಎಡ್ ಕಾಲೇಜು ಆವರಣದಲ್ಲಿ ವಸ್ತು ಪ್ರದರ್ಶನ
ಚಿಕ್ಕಮಗಳೂರು:ಎಂಎಲ್‌ಎಂಎನ್ ಬಿಎಡ್ ಕಾಲೇಜು ಆವರಣದಲ್ಲಿ ನಡೆದ ವಸ್ತು ಪ್ರದರ್ಶನದಲ್ಲಿ ಜ್ಞಾನ ವಿಜ್ಞಾನ ಕಲೆಯ ಅನಾವರಣವಾಗಿದೆ ಎಂದು ಜಿ.ಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೀರ್ತನ ಎಚ್.ಎಸ್ ಹೇಳಿದರು.
ನಗರದ ಎಂಎಲ್‌ಎಂಎನ್ ಬಿಎಡ್ ಕಾಲೇಜಿನಲ್ಲಿ ಮಲೆನಾಡು ವಿದ್ಯಾಸಂಸ್ಥೆ, ಎಂಎಲ್‌ಎಂಎನ್ ಬಿಎಡ್ ಕಾಲೇಜು, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ೧ ಅರ್ಥ್ ಟ್ರಸ್ಟ್, ಪದವಿ ಪೂರ್ವ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ ಜ್ಞಾನ ವಿಜ್ಞಾನ ಕಲಾ ವೈಭವ ವಸ್ತು ಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಪುರಾತನ ವಸ್ತುಗಳು ಸಂಸ್ಕೃತಿಯ ಪ್ರತಿಬಿಂಬವಾಗಿದ್ದು ವಿದ್ಯಾರ್ಥಿಗಳು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ವಸ್ತುಗಳನ್ನು ನೋಡಿ ಸುಮ್ಮನಾಗದೇ ವಿದ್ಯಾರ್ಥಿಗಳು ಟಿಪ್ಪಣಿ  ಮಾಡಿಕೊಂಡು ಮತ್ತಷ್ಟು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ ರಮೇಶ್ ಮಾತನಾಡಿ, ಜ್ಞಾನಾಸಕ್ತರನ್ನು ಕೈ ಬೀಸಿ ಕರೆಯುವ ಈ ವಸ್ತು ಪ್ರದರ್ಶನ ಹಲವು ಕ್ಷೇತ್ರಗಳ ಮಾಹಿತಿ ಅನಾವರಣಕ್ಕೆ ವೇದಿಕೆಯಾಗಿದೆ. ಕೀಟ ಪ್ರಪಂಚ, ಪುರಾತನ ವಸ್ತುಗಳು, ನೂರಾರು ಅಂಚೆ ಚೀಟಿಗಳು, ಲಕೋಟೆಗಳು, ನಾಣ್ಯಗಳು, ನೋಟುಗಳು ಈ ವಸ್ತು ಪ್ರದರ್ಶನದ ವಿಶೇಷವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಲೆನಾಡು ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಡಾ.ಡಿ.ಎಲ್.ವಿಜಯಕುಮಾರ್, ವಸ್ತು ಸಂಗ್ರಹಕಾರರಾದ ಎಂ.ಎಲ್ ಅಶೋಕ್ ಅವರು ಅಪರೂಪದ ಪುರಾತನ ವಸ್ತುಗಳು, ನಾಣ್ಯಗಳು, ಅಂಚೆ ಚೀಟಿಗಳು ಸೇರಿದಂತೇ ಅಪೂರ್ವವಾದ ವಸ್ತು ಸಂಗ್ರಹವನ್ನು ಹೊಂದಿದ್ದಾರೆ. ಜ್ಞಾನದ ಅನಾವರಣಕ್ಕೆ ಈ ಕಾರ್ಯಕ್ರಮ ಪೂರಕವಾಗಿದೆ ಎಂದರು.
ಕೀಟ ಪ್ರದರ್ಶನ, ನಾಣ್ಯ ಮತ್ತು ನೋಟು, ಪುರಾತನ ವಸ್ತುಗಳು ಮತ್ತು ಅಂಚೆ ಚೀಟಿಗಳ ಕೊಠಡಿಗಳ ಉದ್ಘಾಟನೆಯನ್ನು ಮಲೆನಾಡು ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎನ್.ಕೇಶವಮೂರ್ತಿ, ಉಪಾಧ್ಯಕ್ಷರಾದ ಡಾ.ಜೆ.ಪಿ.ಕೃಷ್ಣೆಗೌಡ, ರಾಧಾಸುಂದರೇಶ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಎಂಎಲ್‌ಎಂಎನ್ ಬಿಎಡ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ ಗಣೇಶ್, ೧ ಅರ್ಥ್ ಟ್ರಸ್ಟ್ ನ  ಅಧ್ಯಕ್ಷರಾದ ಫಣೀಂದ್ರ, ಮ್ಯಾನೇಜಿಂಗ್ ಟ್ರಸ್ಟಿ ಭರತ್ ಸಿ.ವಿ, ಸದಸ್ಯೆ ಚೈತ್ರ, ವಸ್ತು ಸಂಗ್ರಹಕಾರರಾದ ಎಂ.ಎಲ್.ಅಶೋಕ್, ಗ್ರಾರಂಟಿ ಯೋಜನೆಯ ಅಧ್ಯಕ್ಷರಾದ ಶಿವಾನಂದಸ್ವಾಮಿ, ಎಂಇಎಸ್ ಸಂಸ್ಥೆಯ ಸಹಕಾರ್ಯದರ್ಶಿ ಎಸ್.ಎನ್.ಶಂಕರನಾರಾಯಣ ಭಟ್, ಶೈಕ್ಷಣ ಕ ಸಲಹೆಗಾರರಾದ ಮಂಜುನಾಥ್ ಭಟ್,  ಶಿಕ್ಷಣ ಸಂಯೋಜಕರಾದ ಟಿಜಿಕೆ ಅರಸ್, ವ್ಯವಸ್ಥಾಪಕಿ ಲಕ್ಷಿö್ಮ, ಸಹಾಯಕ ಪ್ರಾಧ್ಯಾಪಕರಾದ ಡಾ.ರುದ್ರಪ್ಪ ಎನ್ ತಳವಾರ, ಪ್ರಶಿಕ್ಷಣಾರ್ಥಿ ಪ್ರಿಯಾಂಕ, ರುಕ್ಸಾನ ಎಂ, ಕಾಚೂರ್, ಕೀಟ ತಜ್ಞರಾದ ಡಾ.ಅವಿನಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಾಂತ್ರಿಕ ಸಹಾಯಕ ನವದೀಪ್, ಸಿಬ್ಬಂದಿ ಪೂರ್ಣೇಶ್, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್ ಮುಂತಾದವರು ಇದ್ದರು.


ಜನವರಿ ೮ರವರೆಗೆ ನಡೆಯುವ ವಸ್ತು ಪ್ರದರ್ಶನ
ಜನವರಿ ೬ ರಿಂದ ಆರಂಭವಾಗಿರುವ ವಸ್ತು ಪ್ರದರ್ಶನ ಜನವರಿ ೮ ರವರೆಗೆ ನಡೆಯಲಿದೆ. ನೂರಾರು ಕೀಟಗಳು, ಅಪರೂಪದ ವಸ್ತುಗಳು, ಅಂಚೆಚೀಟಿಗಳು, ಪುರಾತನ ನಾಣ್ಯಗಳು ವಸ್ತು ಪ್ರದರ್ಶನದಲ್ಲಿ ಇರಲಿವೆ. ಬೆಳಿಗ್ಗೆ ೯.೩೦ ರಿಂದ ಸಂಜೆ ೭ ಗಂಟೆಯವರೆಗೆ ವಸ್ತು ಪ್ರದರ್ಶನ ಇರಲಿದ್ದು ಹೆಚ್ಚಿನ ಮಾಹಿತಿಗೆ ೯೪೪೮೫೩೦೫೧೯, ೯೬೬೩೪೦೪೨೯೨, ೯೯೮೬೧೪೦೫೯೭ ಗೆ ಸಂಪರ್ಕಿಸಬಹುದಾಗಿದೆ.