ಗುರುವಾರ, ಸೆಪ್ಟೆಂಬರ್ 19, 2024

ಕನ್ನಡ ಜ್ಯೋತಿ ರಥಯಾತ್ರೆಗೆ ಸಕಲ ಸಿದ್ದತೆ


 ಚಿಕ್ಕಮಗಳೂರು:ಕನ್ನಡ ಜ್ಯೋತಿ ರಥಯಾತ್ರೆಗೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು ರಥಯಾತ್ರೆಯ ಯಶಸ್ಸಿಗೆ ಸರ್ವರ ಸಹಕಾರ ಅಗತ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ ರಮೇಶ್ ಹೇಳಿದರು.

ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಕನ್ನಡ ಜ್ಯೋತಿ ರಥಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸೆಪ್ಟೆಂಬರ್ ೨೦ ರಂದು ಬೇಲೂರು ಮಾರ್ಗವಾಗಿ ಆಗಮಿಸುವ ರಥವನ್ನು ಚಿಕ್ಕಮಗಳೂರು ಜಿಲ್ಲೆಯ ಗಡಿಭಾಗದಲ್ಲಿ ಸ್ವಾಗತಿಸಲಾಗುವುದು. ಸೆಪ್ಟೆಂಬರ್ ೨೧ ರಂದು ಬೆಳಿಗ್ಗೆ ೯ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಜಿಲ್ಲಾ ಪಂಚಾಯತಿಯವರೆಗೆ ಮೆರವಣ ಗೆ ಸಾಗಲಿದ್ದು ಮೆರವಣ ಗೆಯಲ್ಲಿ ವಿವಿಧ ಕಲಾ ತಂಡಗಳು ಕಲಾ ಪ್ರದರ್ಶನ ಇರಲಿದೆ. ಸಾಂಸ್ಕೃತಿಕ ವಲಯದ ಪ್ರಮುಖರು, ಕನ್ನಡ ಪರಸಂಘಟನೆಗಳ ಪದಾಧಿಕಾರಿಗಳು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ರಥಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಥಯಾತ್ರೆಯೂ ಮುಂದುವರೆದಯ ಉದ್ದೇಬೋರನಹಳ್ಳಿ, ಸಖರಾಯಪಟ್ಟಣ, ಸರಸ್ವತಿಪುರ ಮಾರ್ಗವಾಗಿ ಕಡೂರು ಕಡೆಗೆ ಸಾಗಲಿದೆ ಎಂದರು.
ಸೆಪ್ಟೆಂಬರ್ ೨೨ ರಂದು ಕಡೂರು, ೨೩ ಕ್ಕೆ ತರೀಕೆರೆ, ೨೪ ಕ್ಕೆ ಎನ್.ಆರ್ ಪುರ, ೨೫ ಕ್ಕೆ ಕೊಪ್ಪ, ೨೬ ರಂದು ಮೂಡಿಗೆರೆಗೆ ರಥಯಾತ್ರೆ ಬರಲಿದೆ. ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಗಿ ೫೦ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕರ್ನಾಟಕ ಸಂಭ್ರಮ-೫೦ ರ ಅಂಗವಾಗಿ  ಕನ್ನಡ ಜ್ಯೋತಿ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಕನ್ನಡ ಪರ ಸಂಘಟನೆಗಳು, ಕನ್ನಡಾಭಿಮಾನಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ರಥಯಾತ್ರೆಯಲ್ಲಿ ಭಾಗವಹಿಸಿ ರಥಯಾತ್ರೆ ಯಶಸ್ವಿಗೊಳಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.

ಶುಕ್ರವಾರ, ಜುಲೈ 5, 2024

ಕಲಾವಿದರು ಇಲಾಖೆಯ ಸೌಲಭ್ಯಗಳನ್ನು ಪಡೆದುಕೊಳ್ಳಿ

 ಅಜ್ಜಂಪುರ;ಕಲೆ ಸಂಸ್ಕೃತಿಯ ಉಳಿವಿಗೆ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು ಕಲಾವಿದರು ಇಲಾಖೆಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ ರಮೇಶ್ ಹೇಳಿದರು.
ಶ್ರೀ ಮಾರುತಿ ವೀರಗಾಸೆ ಕಲಾ ಸೇವಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅಜ್ಜಂಪುರದಲ್ಲಿ ನಡೆದ ಚರ್ಮ ವಾದ್ಯಗಳಾದ ವೀರಗಾಸೆ ಡೊಳ್ಳು ಹಾಗೂ ಪುಟ್ಟಿ ಮೇಳದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಅಳಿವಿನಂಚಿನಲ್ಲಿರುವ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯವಾಗಿದ್ದು ಆ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯ ನಿರ್ವಹಿಸುತ್ತಾ ಬಂದಿದೆ. ವೀರಗಾಸೆ ಡೊಳ್ಳು ಹಾಗೂ ಪುಟ್ಟಿ ಮೇಳದಂತಹ ಕಲಾಪ್ರಕಾರಗಳು ಮುಂದಿನ ತಲೆಮಾರಿಗೂ ತಲುಪಬೇಕಿದೆ ಎಂದರು.

ಜಾನಪದ ಕಲಾವಿದೆ ಮುಗಳಿ ಲಕ್ಷ್ಮಿ ದೇವಮ್ಮ ಮಾತನಾಡಿ ಮೂಲ ಜಾನಪದ ಕಲಾ ವಾದ್ಯಗಳನ್ನು ರಕ್ಷಿಸಿಕೊಂಡು ಹೋದಾಗ ಮಾತ್ರ ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂದರು.

ರಾಜ್ಯಮಟ್ಟದ ಶ್ರೇಷ್ಠ ವೈದ್ಯ ಪ್ರಶಸ್ತಿ ಪಡೆದಂತಹ ಅಜ್ಜಂಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ಹೆಚ್ ಎಸ್ ಪವಿತ್ರ ರಾಣಿ ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾರುತಿ ಎಚ್ ಪಿ ಸಂಜು, ಗೆಳೆಯರ ಬಳಗ ರಂಗತಂಡ ಅಧ್ಯಕ್ಷರಾದ ಎಸಿ ಚಂದ್ರಪ್ಪ, ಲಕ್ಷ್ಮಿ, ಎಂಆರ್ ಬಸಪ್ಪ, ರಂಗಕರ್ಮಿ ಕೃಷ್ಣಮೂರ್ತಿ, ಕಸಾಪ ಅಧ್ಯಕ್ಷರಾದ ಎಚ್.ಆರ್ ಚಂದ್ರಪ್ಪ ರಂಗಕರ್ಮಿಗಳಾದ ಮೋಹನ್ ರಾವ್ ವಿಜಯ ಕುಮಾರಿ, ಟಿ ಸಿ ಶಿವಕುಮಾರ್, ರಂಗ ಕಲಾವಿದ ನವೀನ್ ಕುಮಾರ್, ಕಾರ್ಯಕ್ರಮದ ಮುಖ್ಯ ಕಾರ್ಯದರ್ಶಿ ರವಿ, ಶಿಕ್ಷಕ ಸುರೇಂದ್ರ ನಾಯಕ್ ಡಿ ಇದ್ದರು

ಮಂಗಳವಾರ, ಜೂನ್ 4, 2024

ಬಣಕಲ್,ಜಾವಳಿ ಸುತ್ತಮುತ್ತ ಬಿಜೆಪಿಯಿಂದ ವಿಜಯೋತ್ಸವ

ಕೊಟ್ಟಿಗೆಹಾರ:ಉಡುಪಿ-ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಬಹುಮತ ಪಡೆದು ವಿಜೇತರಾಗಿರುವ ಹಿನ್ನಲೆಯಲ್ಲಿ ಬಣಕಲ್,ಕೊಟ್ಟಿಗೆಹಾರ, ಜಾವಳಿ ಮುಂತಾದ ಕಡೆಗಳಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. 
 ಜಾವಳಿಯ ಮುಖಂಡ ಪರೀಕ್ಷಿತ್ ಜಾವಳಿ ಮಾತನಾಡಿ' ಕೋಟ ಶ್ರೀನಿವಾಸ ಪೂಜಾರಿ ಅವರು ಲೋಕ ಸಭೆ ಚುನಾವಣೆಯಲ್ಲಿ ೬.೩೪,೭೪೬  ಮತ ಪಡೆದು  ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗಿಂತ ೨,೧೯,೬೯೫ ಮತಗಳ ಅಂತರದಿಂದ ಜಯಗಳಿಸಿರುವುದು   ಸಂತಸ ತಂದಿದೆ.ಕೋಟ ಶ್ರೀನಿವಾಸ್  ಪೂಜಾರಿಯವರು ಬಡ ಕುಟುಂಬದಿಂದ ಬಂದಿದ್ದು ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಲಿದ್ದಾರೆ ಎಂಬ ಆಶಾಭಾವನೆ ವ್ಯಕ್ತ ಪಡಿಸಿದರು.  ಈ ಸಂದರ್ಭದಲ್ಲಿ ಮುಖಂಡರಾದ ಶಶಿಧರ್,ಕೃಷ್ಣ ಟೈಲರ್,ಅಭಿ,ಕಾರ್ತಿಕ್,ಪ್ರತೀಶ್,ಸಂಪತ್,ಮಂಜುನಾಥ್ ಮತ್ತಿತರರು ಇದ್ದರು.
ಕೊಟ್ಟಿಗೆಹಾರದಲ್ಲಿ ಬಿಜೆಪಿ ಮುಖಂಡರು,ಕಾರ್ಯಕರ್ತರು ಲೋಕ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಿಂತ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮತಗಳಿಸಿ ವಿಜೇತರಾದ ಹಿನ್ನಲೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.ಬಳಿಕ ಪಟಾಕಿ ಕಸವನ್ನು ಗುಡಿಸುವುದರ ಮೂಲಕ ಸ್ವಚ್ಚಗೊಳಿಸಿದರು.
 ಈ ಸಂದರ್ಭದಲ್ಲಿ ಮುಖಂಡರಾದ ವೇಣುಗೋಪಾಲ ಪೈ, ಟಿ.ಎಂ.ನರೇಂದ್ರ ಗೌಡ, ಸಾಗರ್ ತರುವೆ, ಎ.ಎಸ್.ಅಶ್ವತ್ಥ್, ಮೋಹನ್ ಬಿನ್ನಡಿ, ದೇವೇಂದ್ರ, ಹರೀಶ್ ಆಚಾರ್ ಮುಂತಾದವರು ಇದ್ದರು.

ಉತ್ತಮ ಜೀವನ ಶೈಲಿಯಿಂದ ಆರೋಗ್ಯ ವೃದ್ದಿ

ಕೊಟ್ಟಿಗೆಹಾರ:ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ ಆರೋಗ್ಯ ವೃದ್ದಿಯಾಗುತ್ತದೆ ಎಂದು  ವಿಮುಕ್ತಿ ಸಂಸ್ಥೆ ನಿರ್ದೇಶಕರಾದ ಫಾ. ಎಡ್ವಿನ್ ಡಿಸೋಜ ಹೇಳಿದರು.
ವಿಮುಕ್ತಿ ಚಾರೀಟೇಬಲ್ ಟಸ್ಟ್ ವತಿಯಿಂದ ನಡೆದ ವಿಶ್ವ ಆರೋಗ್ಯ ದಿನಾಚರಣೆ ಹಾಗೂ ವಿಮುಕ್ತಿ ಆರೋಗ್ಯ ಸೇವೆ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಹಿಳೆಯರು ಉತ್ತಮ ಆರೋಗ್ಯದ ಕಡೆಗೆ ಅದಷ್ಟು ಗಮನ ಹರಿಸಬೇಕು. ಉತ್ತಮ ಆರೋಗ್ಯದಿಂದ ಜೀವನ ನಡೆಸುವುದು ಪ್ರತಿಯೊಬ್ಬರ ಹಕ್ಕು. ಮಹಿಳೆಯರು ಈ ನಿಟ್ಟಿನಲ್ಲಿ ಈ ಸಂಸ್ಥೆಯ ವತಿಯಿಂದ ನಡೆಸಲಾಗುತ್ತಿರುವ ಈ ಆರೋಗ್ಯ ಸೇವೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.
ಪಾಳ್ಯ ಸಂಸ್ಥೆಯ ನಿರ್ದೇಶಕರಾದ ಫಾ. ಅರುಣ್ ಲೋಬೊ ಮಾತನಾಡಿ, ಉತ್ತಮ ಆಹಾರ, ಜೀವನ ಶೈಲಿ ಮತ್ತು ವ್ಯಾಯಾಮದಿಂದ ಆರೋಗ್ಯದ ಸಮತೋಲನವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಮಧುಮೇಹ, ರಕ್ತದೊತ್ತಡದ ಪರೀಕ್ಷೆಯನ್ನು ಕಾಲಕಾಲಕ್ಕೆ ಮಾಡಿಸಿಕೊಳ್ಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ಬಣಕಲ್ ಚರ್ಚ್ನ ಧರ್ಮಗುರುಗಳಾದ ಫಾ. ಪ್ರೇಮ್ ಡಿಸೋಜ, ಪಾಳ್ಯ ಸಂಸ್ಥೆಯ ನಿರ್ದೇಶಕರಾದ ಫಾ. ಅರುಣ್ ಲೋಬೊ, ರಾಯಚೂರು ವಿಮುಕ್ತಿ ಸಂಸ್ಥೆಯ ನಿರ್ದೇಶಕರಾದ ಫಾ. ಸತೀಶ್ ಫೆರ್ನಾಂಡಿಸ್, ಬೆಳಗಾವಿ ಚಿಕ್ಕೋಡಿಯ ವಿಮುಕ್ತಿ ಸಂಸ್ಥೆಯ ನಿರ್ದೇಶಕರಾದ ಫಾ. ವಿನ್ಸೆಂಟ್ ಡಿಸೋಜ, ಡಾ. ಮಂಜುನಾಥ್, ಸುಶೀಲಾ, ಶಾಂತಾ, ಆಶಾ ಕಾರ್ಯಕರ್ತೆಯರಾದ ಸ್ನೇಹಾ ಪ್ರಿಯಾ, ನಮ್ರಿನ್, ಸುನಿತಾ, ಕುಮಾರಿ ಸುನಂದಾ, ವಿಮುಕ್ತಿ ಸಂಸ್ಥೆಯ ಸಿಬ್ಬಂದಿಗಳಾದ ವಿಂದ್ಯಾ, ಸಿದ್ದಾಂತ್, ವಿಮುಕ್ತಿ ರಾಯಚೂರಿನ ಸಿಬ್ಬಂದಿಗಳಾದ ಚಾರ್ಲಿ, ಆರೋಗ್ಯಪ್ಪ, ಮಮತಾ, ವಿಮುಕ್ತಿ ಚಿಕ್ಕೋಡಿಯ ಸಿಬ್ಬಂದಿಗಳಾದ ಗೀತಾ, ಬ್ಲೇಜ್ ಇದ್ದರು.

ತ್ರಿಪುರದಲ್ಲಿ ರಾಷ್ಟ್ರೀಯ ತಂಬಾಕು ವಿರೋಧಿ ದಿನಾಚರಣೆ


ಕೊಟ್ಟಿಗೆಹಾರ:ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಡಿಗೆರೆ, ಬಣಕಲ್ ವಲಯದ ವತಿಯಿಂದ ತ್ರಿಪುರ ಗ್ರಾಮದಲ್ಲಿ  ರಾಷ್ಟ್ರೀಯ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಯೋಜನಾದಿಕಾರಿಗಳಾದ ಶಿವಾನಂದ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜನಜಾಗೃತಿ ವೇದಿಕೆ ಸದಸ್ಯರಾದ ಸುರೇಶ ಶೆಟ್ಟಿ, ವಲಯ ಮೇಲ್ವಿಚಾರಕರಾದ ಸಂದೀಪ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಭಾರತಿ, ಒಕ್ಕೂಟದ ಪದಾದಿಕಾರಿ ಗೋಪಿ, ಸೇವಾ ಪ್ರತಿನಿಧಿ ಉಷಾ ಹಾಗೂ ಪದ್ಮಾವತಿ ಜ್ಞಾನ ವಿಕಾಸ ಕೇಂದ್ರದ ಎಲ್ಲಾ ಸದಸ್ಯರು ಇದ್ದರು.

ಗ್ರಾಮಾಭಿವೃದ್ಧಿ ಯೋಜನೆಯಿಂದ ಊರುಗೋಲು ವಿತರಣೆ


ಕೊಟ್ಟಿಗೆಹಾರ:ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜನಮಂಗಳ ಕಾರ್ಯಕ್ರಮದಡಿಯಲ್ಲಿ ಬಣಕಲ್ ಗ್ರಾಮದ ಮತ್ತಿಕಟ್ಟೆ ರೋಡ್ ನಿವಾಸಿ ವಿಠ್ಠಲ್ ಗೌಡ ಅವರಿಗೆ ಊರುಗೋಲನ್ನು ವಿತರಿಸಲಾಯಿತು.
 ಈ ಸಂದರ್ಭದಲ್ಲಿ ಸುರೇಶ ಶೆಟ್ಟಿ ಜನಜಾಗ್ರತಿ ವೇದಿಕೆ ಸದಸ್ಯರು, ಸಂದೀಪ್ ವಲಯ ಮೇಲ್ವಿಚಾರಕರು, ಹಾಗೂ ಸೇವಾಪ್ರತಿನಿಧಿ ರೇವತಿ ಭಾಗವಹಿಸಿದ್ದರು.

ಸೋಮವಾರ, ಮಾರ್ಚ್ 4, 2024

ಮಾರ್ಚ್ 5 ಕ್ಕೆ ಬಣಕಲ್ ನಲ್ಲಿ ಆರೂಢ ಪ್ರಶ್ನೆ

 ಬಣಕಲ್:ಶ್ರೀ ರಕ್ತೇಶ್ವರಿ ಭಕ್ತವೃಂದ ಸೇವಾ ಟ್ರಸ್ಟ್ ನ ವತಿಯಿಂದ ಬಣಕಲ್ ನಲ್ಲಿ ಇಂದು ಆರೂಢ ಪ್ರಶ್ನೆ ನಡೆಯಲಿದೆ.
 ಈ ಬಗ್ಗೆ ಹೇಳಿಕೆ ನೀಡಿರುವ ಶ್ರೀರಕ್ತೇಶ್ವರಿ ಭಕ್ತವೃಂದ ಸೇವಾ ಟ್ರಸ್ಟ್‌ನ ಗೌರವಾಧ್ಯಕ್ಷರಾದ ಸುರೇಶ್ ಶೆಟ್ಟಿ, ಬಣಕಲ್ ಪ್ರದೇಶದ ಆಸುಪಾಸಿನಲ್ಲಿ  ಇರುವ ಶ್ರೀದುರ್ಗಾಪರಮೇಶ್ವರಿ, ಶ್ರೀ ಮಹಮ್ಮಾಯಿ, ಶ್ರೀ ದೇವಿಗುಡಿ ಮಾರಿಗುಡಿ ಇತ್ಯಾದಿ ಹಲವು ನಾಮಾಂಕಿತಗಳಿಂದ ಆರಾಧಿಸಲ್ಪಡುವ ಕ್ಷೇತ್ರಗಳಲ್ಲಿ ದೇವರ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಜೀವನ ಧನ್ಯತೆಯನ್ನು ಪಡೆದವರು, ಈ ಹಿಂದೆ ಶ್ರೀದೇವಿ ಸಾನಿಧ್ಯದಲ್ಲಿ ಆರೂಢ ಪ್ರಶ್ನೆಯನ್ನು ನಿರೂಪಿಸಿದ ಪ್ರಕಾರ ಕ್ಷೇತ್ರದ ನಾಗ ಸಾನಿಧ್ಯದೊಂದಿಗೆ ಪೂರ್ಣಾನುಗ್ರಹ ಪಡೆಯಲು ಶ್ತೀದೇವಿ ರಕ್ತೇಶ್ವರಿಯ ಸಾನಿಧ್ಯದ ಅಗತ್ಯತೆಯನ್ನು ದೈವಜ್ಞರು ಮನದಟ್ಟು ಮಾಡಿದ್ದರು. ಕಾರಣಾಂತರಗಳಿಂದ  ಸಾನಿಧ್ಯದ ಸ್ಥಾಪನೆಯೊಂದಿಗೆ  ಅನುಗ್ರಹಕ್ಕೆ ಪಾತ್ರರಾಗಲು ತಡವಾದುದ್ದರಿಂದ ಆ ಸಂಕಲ್ಪಿತ ಕಾರ್ಯದ ಜೀರ್ಣೋದ್ದಾರ ಪುನರ್ ಸ್ಥಾಪನೆಗಾಗಿ ಇರುವ ತೊಡಕುಗಳ ಬಗ್ಗೆ ತಿಳಿದುಕೊಳ್ಳುವ ಸದುದ್ದೇಶದಿಂದ ಆರೂಢ ಪ್ರಶ್ನೆ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಬಣಕಲ್‌ನ ಶ್ರೀದೇವಿ ದುರ್ಗಾಪರಮೇಶ್ವರಿ ಮಹಾಮ್ಮಾಯಿ ಸಾನಿಧ್ಯದ ಮುಂಭಾಗದಲ್ಲಿ ಸ್ವಚ್ಚಗೊಳಿಸಿರುವ ಜಾಗದಲ್ಲಿ ತರಂಗ ತಜ್ಞರಾದ ವೆಂಕ್ರಮಣ ಉಪಾಧ್ಯಾಯರು ಮತ್ತು ರಾಜಶೃಖರ ರಾವ್ ಪೊಳಲಿ ದೈವಜ್ಞರಿಂದ ಆರೂಢ ಪ್ರಶ್ನೆ ಇಡಲಾಗುತ್ತದೆ ಎಂದು ತಿಳಿಸಿದ್ದಾರೆ.